ಮಂಡ್ಯ :-ಮಾ೩೦. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನಕ್ಕೆ ಕಂಟಕ ವಾಗಿರುವ ಬಿಜೆಪಿ ಮೈತ್ರಿಕೂಟವನ್ನು ಸೋಲಿಸುವುದು ನಮ್ಮ ಗುರಿಯಾಗಿದ್ದು,ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿ,ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿರನ್ನ ಸೋಲಿಸಲು ಕಂಕಣ ಬದ್ಧರಾಗಿದ್ದೇವೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ತಿಳಿಸಿದರು
ನಗರದ ಕನಕ ಭವನದಲ್ಲಿ ನಡೆದ ದಲಿತ ಸಂಘರ್ಷ ಸಮಿತಿ ಮುಖಂಡರು, ಕಾರ್ಯಕರ್ತರು,ಬೆಂಬಲಿಗರು ಹಾಗೂ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಅವರು ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ಲೋಕಸಭಾ ಚುನಾವಣೆ ಕೊನೆಯ ಅವಕಾಶವಾಗಿದೆ, ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೆಲ್ಲುವುದು ಒಂದೇ, ಮಂಡ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ ಗೆಲ್ಲುವುದು ಒಂದೇ, ಏಕೆಂದರೆ ಪ್ರಧಾನಿ ಮೋದಿ ಕೋಮುವಾದಿಯಾದರೆ ಕುಮಾರಸ್ವಾಮಿ ಕೋಮುವಾದಿ ಮನಸ್ಥಿತಿ ಜೊತೆಗೆ ಜಾತಿವಾದಿಯಾಗಿದ್ದಾರೆ ಎಂದರು.
2013ರಲ್ಲಿ ಸಿದ್ದರಾಮಯ್ಯ ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿದಾಗ ಕುಮಾರಸ್ವಾಮಿ ಅಕ್ಕಿ ಜೊತೆಗೆ ಕ್ವಾಟರ್ ಬಾಟಲ್ ನೀಡಿಬಿಡಿ, ನೀವು ಜನರನ್ನು ಸೋಮಾರಿ ಮಾಡುತ್ತಿದ್ದೀರಿ ಎಂದಿದ್ದರು, ಶೋಷಿತರು ದುಡಿಯಲು ಹುಟ್ಟಿದ್ದಾರೆ ಎಂಬ ಮನಸ್ಥಿತಿಯನ್ನು ಅನಾವರಣ ಮಾಡಿದ್ದರು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದೇವೆ ಎಂದರು.
2022 ಡಿಸೆಂಬರ್ ನಲ್ಲಿ ದಲಿತ ಸಂಘಟನೆಗಳ ಐಕ್ಯತಾ ಸಭೆಯಲ್ಲಿ ದಲಿತರು ಅಲ್ಪಸಂಖ್ಯಾತರು ಹಿಂದುಳಿದವರ ಅಳಿವು ಉಳಿವಿನ ಯಾಗಿರುವುದರಿಂದ ಕೋಮುವಾದಿ ಶಕ್ತಿಯನ್ನು ಮಣಿಸಲು ನಿರ್ಣಯಿಸಿ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಸಹಕಾರ ಬೆಂಬಲ ಬೇಕೊ,ಬೇಡವೊ ಎಂಬುದು ಮುಖ್ಯವಲ್ಲ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ, ನಾಗರಿಕ ಹಕ್ಕುಗಳ ರಕ್ಷಣೆ ಹಾಗೂ ದಲಿತರು,ಹಿಂದುಳಿದವರು, ಅಲ್ಪಸಂಖ್ಯಾತರ ರಕ್ಷಣೆ ಬಗ್ಗೆ ಕನಿಷ್ಠ ಬದ್ಧತೆ ತೋರಿರುವ ಕಾಂಗ್ರೆಸ್ ಪಕ್ಷವನ್ನು
ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವ ತೀರ್ಮಾನ ಮಾಡಲಾಗಿತ್ತು, ಅದರಂತೆ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರೇ ಆಗಲಿ ಅವರನ್ನು ಗೆಲ್ಲಿಸುವ ಮೂಲಕ ಕೋಮುವಾದಿ ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿಯನ್ನು ಸೋಲಿಸಲು ಸವಾಲು ಸ್ವೀಕರಿಸಿದ್ದೇವೆ,ಇದಕ್ಕಾಗಿ ದಸಂಸ ಮುಖಂಡರು,ಕಾರ್ಯಕರ್ತರು ಹಳ್ಳಿ ಹಳ್ಳಿಯಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದರು,
ದೇಶದ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಸಂಸದರು ಹೇಳುತ್ತಾರೆ, ಉತ್ತರ ಪ್ರದೇಶದಲ್ಲಿ ಮಹಿಳೆ ಯೊಬ್ಬರು ಚಪ್ಪಲಿ ಬಿಡುವ ಸ್ಥಳದಲ್ಲಿದ್ದವರು ಇದೀಗ ನಮ್ಮ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದಾರೆ ಎಂದು ಹೇಳುತ್ತಾರೆ, ಮತ್ತೊಂದೆಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ದುರಾಡಳಿತ ಜನರ ಬದುಕನ್ನು ಸಂಕಷ್ಟಕ್ಕೆ ತಂದೊಡ್ಡಿದೆ, ಒಂದು ಪತ್ರಿಕಾಗೋಷ್ಠಿ ನಡೆಸದ ಇವರು ಸಂಸತ್ ಅಧಿವೇಶನದಲ್ಲಿಯು ಕಡಿಮೆ ಮಾತನಾಡಿ ಯಾವುದೇ ಸಮಸ್ಯೆಗೆ ಸ್ವಷ್ಟತೆ ನೀಡಿಲ್ಲ ಆ ಮೂಲಕ ಸಂಸದೀಯ ನಿಯಮಾವಳಿಗೆ ವಿರುದ್ಧವಾಗಿ ನಡೆದಿದ್ದಾರೆ, ಹೊಸ ಉದ್ಯೋಗ ಸೃಷ್ಟಿ ಕನಸಿನ ಮಾತಾಗಿದೆ, ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವ ಮೂಲಕ ತಳ ಸಮುದಾಯದವರ ಅಕ್ಷರ ಕಲಿಕೆ ಕಸಿಯಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಕೂಟವನ್ನು ಸೋಲಿಸಲು ಮುಖಂಡರು ಮುಂದಾಗಿದ್ದು, ಜಿಲ್ಲೆಯ ಎಲ್ಲೆಡೆ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಲು ಕರ ಪತ್ರ ಹಂಚಿಕೆ ಮಾಡಲಾಗುವುದು,ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನ ಎಚ್ಚರಿಸಲಾಗುವುದೆಂದು ಹೇಳಿದರು.
ಸಭೆಯಲ್ಲಿ ಪ್ರೊಫೆಸರ್ ಹುಲ್ಕೆರೆ ಮಹದೇವ್, ಎಲ್ ಸಂದೇಶ್, ಹಾರೋಹಳ್ಳಿ ಪ್ರಕಾಶ್,ಚಂದ್ರಶೇಖರ್,ಪ್ರಕಾಶ್ ಬ್ಯಾಡರಹಳ್ಳಿ, ಹಾಲಪ್ಪ, ದೇವರಾಜ್, ಗಂಗಾಧರ್, ಕೃಷ್ಣಪ್ರಸಾದ್, ರಾಜಶೇಖರ್, ರಾಮಂದೂರು ಸಿದ್ದರಾಜು, ಮುದ್ದಯ್ಯ, ರವಿಕುಮಾರ್, ಗೋವಿಂದರಾಜು ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.