ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ-ಸುನಂದಾ ಜಯರಾಂ
ಮಂಡ್ಯ, ಜುಲೈ ೪ : ರೈತರ ಜೀವನಾಡಿ ಕೆ.ಆರ್.ಎಸ್. ಡ್ಯಾಂ ಸಮೀಪ ನಡೆಸಲುದ್ದೇಶಿಸಿರುವ ಟ್ರಯಲ್ ಬ್ಲಾಸ್ಟ್ ವಿರೋಧಿಸಿ ಜು. ರ ಶುಕ್ರವಾರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮತ್ತು ಪ್ರಗತಿಪರ-ಸಂಘಟನೆಗಳಿಂದ ನಗರದ ಸಂಜಯ ವೃತ್ತದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಪ್ರತಿಭಟನೆ ನಡೆಯಲಿದೆ ಎಂದು ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ತಿಳಿಸಿದರು.
ಈ ಕುರಿತು ಪ್ರತಿಕಾ ಹೇಳಿಕೆ ನೀಡಿರುವ ಅವರು, ಡ್ಯಾಂ ಸಮೀಪ ಟ್ರಯಲ್ ಬ್ಲಾಸ್ಟ್ ಬೇಡ, ಕಾವೇರಿ ಕೊಳ್ಳಭಾಗದ ರೈತರ ವಿರೋಧದ ನಡುವೆಯೂ ಇಂತಹ ದುಸ್ಸಾಹಸಕ್ಕೆ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ಕಿಡಿಕಾರಿದರು.
ನಗರದಲ್ಲಿ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಜನತಾದರ್ಶನ ಕಾರ್ಯಕ್ರಮಕ್ಕೆ ಬರುವುದರಿಂದ ರೈತರು-ಹೋರಾಟಗಾರರು ತೀವ್ರ ಒತ್ತಡ ತಂದು ಟ್ರಯಲ್‌ಬ್ಲಾಸ್ಟ್ ನಿಲ್ಲಿಸುವಂತೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಮೈಸೂರು ಮಹಾರಾಜರು ಕನ್ನಂಬಾಡಿ ಅಣೆಕಟ್ಟೆಯನ್ನು ಕೊಡುಗೆಯಾಗಿ ನೀಡಿದ್ದರಿಂದಾಗಿ ಕಾವೇರಿ ಕೊಳ್ಳಭಾಗದ ಜನರು ಅನ್ನ ತಿನ್ನುತ್ತಿದ್ದೇವೆ, ನೀರು ಕುಡಿಯುತ್ತಿದ್ದೇವೆ. ಮೈಷುಗರ್ ಕಾರ್ಖಾನೆ ಸೇರಿದಂತೆ ಹಲವು ಕೈಗಾರಿಕೆಗಳ ಮೂಲಕ ಲಕ್ಷಾಂತರ ಜನ ಜೀವನ ಸಾಗಿಸುತ್ತಿದ್ದಾರೆ. ಅಣೆಕಟ್ಟು ಸುಭದ್ರವಾಗಿದ್ದರೆ ಮಾತ್ರ ನಾವು ಬದುಕಲು ಸಾಧ್ಯ. ಹೀಗಾಗಿ ಅಣೆಕಟ್ಟು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲ ಹೋರಾಟ ಮಾಡಬೇಕಿದೆ.ಹೆಚ್ಚಿನ ಸಂಖ್ಯೆಯಲ್ಲಿ ರೈತಪರ-ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ರೈತಮುಖಂಡರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.