Sunday, December 22, 2024
spot_img

ಜನಪದ ಕಲೆ ಸಾಹಿತ್ಯ ಮುಂದಿನ ಪೀಳಿಗೆಗೆ ಬಳುವಳಿಯಾಗಿಸಬೇಕು;ಬೇಕರಿ ಅರವಿಂದ್

ಮಂಡ್ಯ.ಮಾ೨೪. : ನಶಿಸುತ್ತಿರುವ ಜನಪದ ಕಲೆ, ಸಾಹಿತ್ಯವನ್ನು ಉಳಿಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್ ತಿಳಿಸಿದರು.

ಸಂಗೀತ ನೃತ್ಯ ಕಲಾನಿಕೇತನ ಟ್ರಸ್ಟ್ ಕರ್ನಾಟಕ ವತಿಯಿಂದ ನಗರದ ಗಾಂಧಿ ಭವನದಲ್ಲಿ ನಡೆದ ಸಂಗೀತ ಮತ್ತು ಜಾನಪದ ಗಾಯನ ಕಾರ‍್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಮಟ್ಟದ ಕನ್ನಡದ ಕಂದ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜನಪದರು ಕಟ್ಟಿ ಬೆಳೆಸಿದ ಜನಪದ ಕಲೆ ಮತ್ತು ಸಾಹಿತ್ಯ ಇತ್ತೀಚಿನ ಕಾಲಘಟ್ಟದಲ್ಲಿ ನಶಿಸುವ ಹಂತಕ್ಕೆ ಬಂದು ನಿಂತಿದೆ. ಪಾಶ್ಚಿಮಾತ್ಯ ಸಾಹಿತ್ಯದ ಹೊಡೆತಕ್ಕೆ ಸಿಲುಕಿರುವ ಜನಪದ ನಲುಗಿ ಹೋಗುತ್ತಿದೆ. ಈ ದಿನಗಳಲ್ಲಿ ಸಂಗೀತ ನೃತ್ಯ ಕಲಾನಿಕೇತನ ಸಂಸ್ಥೆಯವರು ಉಳಿಸುವ ನಿಟ್ಟಿನಲ್ಲಿ ಕರ‍್ಯೋನ್ಮುಕರಾಗಿರುವುದು ಶ್ಲಾಘನೀಯ ಎಂದರು.

ಜನಪದ ಸಾಹಿತ್ಯವನ್ನು ಅರಿತು, ಜನಪದ ಕಲೆಯನ್ನು ಯುವಜನತೆ ಕಲಿತು ಪ್ರದರ್ಶಿಸುವಂತಹ ಎದೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಎಂದ ಅವರು, ಕೆಲವು ಕಲೆಗಳು ಸುಲಭವಾಗಿದ್ದರೆ, ಮತ್ತೆ ಕೆಲವು ಕಠಿಣವಾಗಿರುತ್ತವೆ. ಎಲ್ಲವನ್ನೂ ಅಭ್ಯಾಸ ಮಾಡುವುದು ಬಹಳ ಮುಖ್ಯ. ಇದನ್ನು ಜನರಿಗೆ ಉಣಬಡಿಸುವುದು ಸಹ ಅಷ್ಟೇ ಸವಾಲಿನ ಕೆಲಸವೂ ಆಗುತ್ತದೆ ಎಂದು ಪ್ರತಿಪಾದಿಸಿದರು.

ಖ್ಯಾತ ವೈದ್ಯ ಡಾ. ಚಂದ್ರಶೇಖರ್ ಮಾತನಾಡಿ, ಕಲಾವಿದರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುವುದು ಬಹಳ ಮುಖ್ಯ ಇದರಿಂದ ಅವರ ಕಲಾಪ್ರತಿಭೆ ಮತ್ತಷ್ಟು ಬೆಳಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಯಾವುದೇ ಸರ್ಕಾರದ ಆಧ್ಯತೆಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯದ್ದಾಗಿರಲ್ಲ. ಕಾರಣ ಅದರಿಂದ ಸರ್ಕಾರಕ್ಕೆ ಯಾವುದೇ ಆದಾಯವೂ ಬರುವುದಿಲ್ಲ. ಇದರಿಂದಾಗಿ ಖಾಸಗೀ ಸಂಸ್ಥೆಗಳೇ ಹೆಚ್ಚು ಹೆಚ್ಚಾಗಿ ಕಲಾ ಪ್ರದರ್ಶನಗಳನ್ನು ಮಾಡುತ್ತವೆ ಎಂದು ತಿಳಿಸಿದರು.
ಹೆಚ್ಚಿನವರಿಗೆ ಅವಕಾಶಗಳು ಸಿಕ್ಕಲ್ಲಿ ಮತ್ತಷ್ಟು ಅತ್ಯುತ್ತಮವಾಗಿ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಪ್ರತಿಭೆಯನ್ನು ಗುರುತಿಸದಿದ್ದರೆ ಉತ್ತಮವಾದ ಕಲಾಪ್ರತಿಭೆ ಸಿಗುವುದು ಅಸಾಧ್ಯವಾಗುತ್ತದೆ. ಇದನ್ನು ಮನಗಂಡು ಸಂಘ ಸಂಸ್ಥೆಗಳು ಸಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಬಳಿಕ ಮಾತನಾಡಿದ ಜಿಲ್ಲೆ ಗಾಯಕರ ಟ್ರಸ್ಟ್ ಅಧ್ಯಕ್ಷ ಡಾ. ಮಾದೇಶ್, ಪ್ರಸ್ತುತ ದಿನಗಳಲ್ಲಿ ಗಾಯನ ಕ್ಷೇತ್ರದಲ್ಲಿ ಸ್ಥಳೀಯ ಗಾಯಕರು ಸಾಧನೆ ಮಾಡಬೇಕಿದೆ, ಉತ್ತಮ ತರಬೇತಿಯೊಂದಿಗೆ ಜನರ ಮನ ಗೆಲ್ಲಲಿ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಆವಿಷ್ಕಾರಗಳು ಗಾಯಕರಿಂದ ಆಗಬೇಕಿದೆ ನಾವು ಕೂಡ ಹೊಸ ಪ್ರಯತ್ನವಾಗಿ ಸಾಹಿತ್ಯ ಸಂಗೀತ ಸಂಯೋಜಿಸಿ ಭಕ್ತಿ ಗೀತೆಯನ್ನು ಹೊರತರಲಾಗಿದೆ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಹಿಳಾ ಮೋರ್ಚ ಮಾಜಿ ಅಧ್ಯಕ್ಷೆ ಸುಜಾತ ಸಿದ್ದಯ್ಯ ವಹಿಸಿದ್ದರು. ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಸುಜಾತ ರಮೇಶ್, ಮಂಡ್ಯ ಜಿಲ್ಲಾ ಮೀನು ಉತ್ಪಾದಕರು ಮತ್ತು ಮಾರಾಟಗಾರರ ಸಹಕಾರ ಸಂಘದ ಅಧ್ಯಕ್ಷೆ ಭಾಗ್ಯ, ಗಾಯಕರೂ ಆದ್ಯ ವೈದ್ಯ ಡಾ. ಮಾದೇಶ್, ಮುಡಾ ಮಾಜಿ ನಿರ್ದೇಶಕ ಬಿ.ಎಸ್. ಹನುಮಂತು, ಸಂಗೀತ ನೃತ್ಯ ಕಲಾನಿಕೇತನ ಸಂಸ್ಥೆ ಅಧ್ಯಕ್ಷೆ ಶೋಭ ಪಿ.ಗೌಡ, ಕಾರ‍್ಯದರ್ಶಿ ಲೀಲಾವತಿ, ಖಜಾಂಚಿ ಬಿ.ಆರ್. ಸುನೀತಾ, ಗಾಯಕ ದೇವರಾಜ್ ಕೊಪ್ಪ ಇತರರು ಭಾಗವಹಿಸಿದ್ದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಗಾಯಕರು ತಂಡದಿಂದ ಜಾನಪದ ಕನ್ನಡ ಚಲನಚಿತ್ರ ಗೀತೆಗಳು ಹೊರಹೊಮ್ಮಿದವು. ನೃತ್ಯವು ಕೂಡ ನಡೆಯಿತು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!