ಸಂವಿಧಾನ, ಪ್ರಜೆಗಳು ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಬಿಜೆಪಿ,ಜೆಡಿಎಸ್ ಪಕ್ಷಗಳನ್ನು ಸೋಲಿಸುವಂತೆ ಸಾಹಿತಿ ದೇವನೂರು ಮಹಾದೇವ ಅವರು ಮತದಾರರಿಗೆ ಕರೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,2006ರಲ್ಲಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸಖ್ಯವನ್ನು ಮುರಿದು,ಬಿಜೆಪಿಯೊಂದಿಗೆ ಸೇರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಒಂದು ರೋಚಕ ಸಿನಿಮಾದಂತಿತ್ತು.ಆಗ ಪತ್ರಿಕೆಯೊಂದು ನನ್ನ ಸಂದರ್ಶನ ನಡೆಸಿ ಅದರ ತಲೆಬರಹ ಅಪ್ಪಾಜಿ ದೇವೇಗೌಡ ವರ್ಕ್ಸ್ ಅಧ್ಯಕ್ಷ ದೇವೇಗೌಡ ಎಂದು ನೀಡಿತ್ತು. ದೇವೇಗೌಡರು ತಮ್ಮ ಮಗ ಕೋಮುವಾದಿಗಳೊಂದಿಗೆ ಸೇರಿದ್ದಾರೆ ಎಂದು ತಳಮಳಿಸುತ್ತಿದ್ದರು.ಆದರೆ ಆಗಿದ್ದ ಅನಾಹುತ ತಪ್ಪಿಸುವ ಹಿನ್ನೆಲೆಯಲ್ಲಿ ಅಂದು ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ತಿಪ್ಪಣ್ಣ ಅವರನ್ನು ವಜಾ ಮಾಡಲಿಲ್ಲ,ಶಾಸಕರನ್ನು ಅಮಾನತು ಮಾಡಲಿಲ್ಲ.ದೇವೇಗೌಡರು ರಾಷ್ಟ್ರೀಯ ಅಧ್ಯಕ್ಷರ ರೀತಿ ವರ್ತಿಸಲಿಲ್ಲ ಎಂದು ತಿಳಿಸಿದರು.
ಮೋದಿ ಮತ್ತು ದೇವೇಗೌಡರನ್ನು ಪ್ರಧಾನಿಯಾಗಿ ನೋಡಿದರೆ ಅಜಗಜಾಂತರ ವ್ಯತ್ಯಾಸ ಕಾಣುತ್ತದೆ.ಆದರೆ ದೇವೇಗೌಡರು ತುಮಕೂರಿನಲ್ಲಿ ಸೋಮಣ್ಣ ಸೋತರೆ ಮೋದಿಗೆ ನಾನು ಹೇಗೆ ಮುಖ ತೋರಿಸಲಿ ಅನ್ನುತ್ತಾರೆ.ಬಿಜೆಪಿಯವರು,ಇಂಡಿಯಾ ಒಕ್ಕೂಟಕ್ಕೆ ಪ್ರಧಾನಿ ಅಭ್ಯರ್ಥಿಗಳು ಇಲ್ಲ ಅನ್ನುತ್ತಾರೆ.ಈ ವಿಚಾರದಲ್ಲಿ ಬಹುಮತ ಪಡೆದವರು ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ ಎಂದು ದೇವೇಗೌಡರು ಕಿವಿ ಹಿಂಡಬಹುದಿತ್ತು.ಆದರೆ ಆ ರೀತಿ ಮಾಡಲಿಲ್ಲ ಎಂದರು.
ದೇವೇಗೌಡರಿಗೆ ಅಗಾಧವಾದ ನೆನಪಿನ ಶಕ್ತಿಯಿದೆ.ಅವರಿಗೆ ತಿಳಿಯದ ವಿಚಾರವೇ ಇಲ್ಲ ಎಂದರಲ್ಲದೆ, ಜೆಡಿಎಸ್ ಕೇಂದ್ರ ಕಚೇರಿಗೆ ಜೆಪಿ ಭವನ ಎಂಬ ಹೆಸರಿದ್ದು,ಸಾತ್ವಿಕವಾಗಿ ಜೆಪಿ ಅವರು,ತಮ್ಮ ಕೊನೆ ಕಾಲದಲ್ಲಿ ಆರೆಸ್ಸೆಸ್,ಜನಸಂಘ ನನಗೆ ಮೋಸ ಮಾಡಿತು ಎಂದಿದ್ದರು.ಆದ್ದರಿಂದ ದೇವೇಗೌಡರು ಈಗಲಾದರೂ ಈಬಗ್ಗೆ ಎಚ್ಚರ ವಹಿಸಬೇಕು ಎಂದು ಸೂಕ್ಷ್ಮವಾಗಿ ತಿಳಿಸಿದರು.
ಜೆಡಿಎಸ್ ಅಂದ್ರೆ ತೆನೆಹೊತ್ತ ಮಹಿಳೆ ನೆನಪಿಗೆ ಬರುತ್ತದೆ.ಆದರೆ ಜೆಡಿಎಸ್ ಕೋಮುವಾದಿ ಬಿಜೆಪಿಯೊಂದಿಗೆ ಸೇರಿರುವುದರಿಂದ ಜಾತ್ಯತೀತ ಕಚ್ಚಿ ಬಿದ್ದಿದೆ.ಅಲ್ಲದೆ ಮಹಿಳೆ ಹೊತ್ತಿರುವ ಹೊರೆಯಲ್ಲಿರುವ ತೆನೆಯನ್ನು ಬಿಜೆಪಿ ಕತ್ತರಿಸಿಕೊಳ್ಳುತ್ತದೆ.ಆಗ ಮಹಿಳೆಯು ತೆನೆಯಿಲ್ಲದ ಖಾಲಿ ಹೊರೆ ಹೊತ್ತ ಘನತೆಯಿಲ್ಲದ ಸೇವಕಿಯಾಗಿ ದುಡಿಯುತ್ತಾಳೆ ಎಂದರಲ್ಲದೆ ಪ್ರಜೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಬಿಜೆಪಿ,ಜೆಡಿಎಸ್ ಪಕ್ಷವನ್ನು ಸೋಲಿಸಬೇಕೆಂದು ಕರೆಯಿತ್ತರು.
ಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಗುರುಪ್ರಸಾದ್ ಕೆರಗೋಡು,ಸರ್ವೋದಯ ಕರ್ನಾಟಕ ಪಕ್ಷದ ಪ್ರಸನ್ನ,ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆಂಪೇಗೌಡ,ಲಿಂಗಪ್ಪಾಜಿ,ರವಿಕುಮಾರ್,ದೇವರಾಜು, ಸೇರಿದಂತೆ ಇತರರಿದ್ದರು.