ಮಂಡ್ಯ: ನಾವು ಎಷ್ಟೆಲ್ಲ ವಿಭಿನ್ನ ರೀತಿಯಲ್ಲಿ ಹೋರಾಟ ಮಾಡಿದರೂ ರಾಜ್ಯ ಸರ್ಕಾರ ಕಾಲುವೆಯಲ್ಲಿ ನೀರು ಹರಿಸುವ ಪ್ರಯತ್ನ ಮಾಡಲೇ ಇಲ್ಲ. ಕೃಷಿಕರಿಗೆ, ಕೃಷಿ ಬದುಕಿಗೆ, ಜನ ಜಾನುವಾರಿಗೆ ಕುಡಿಯಲು ನೀರು ಒದಗಿಸಲಿಲ್ಲ. ಇದರಿಂದ ಕಾವೇರಿ ಕೊಳ್ಳಭಾಗದ ರೈತರಿಗೆ ನಷ್ಟ ಉಂಟಾಗಿರುವುದರಿಂದ ಬೆಳೆ ಪರಿಹಾರ ಬಿಡುಗಡೆ ಮಾಡಿ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ವತಿಯಿಂದ ನಡೆಸುತ್ತಿರುವ 15ನೇ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತ ಹಿತ ರಕ್ಷಣಾ ಸಮಿತಿ ಹಾಗೂ ಎಲ್ಲಾ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಕಾವೇರಿ ನದಿ ನೀರಿನ ಪ್ರಾಧಿಕಾರ ಕೊಡ್ತಾ ಇರುವಂತಹ ಆದೇಶಗಳನ್ನು ವಿರೋಧ ಮಾಡಿ ಕರ್ನಾಟಕ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ನಾವು ಹಂತಹಂತವಾಗಿ ಹೋರಾಟ ಮಾಡಿದ್ದೇವೆ. ನಿರಂತರವಾಗಿ ಧರಣಿ, ರಸ್ತೆ ತಡೆ,ರೈಲು ತಡೆ ಉಪವಾಸ ಸೇರಿದಂತೆ ವಿಭಿನ್ನ ರೀತಿಯಲ್ಲಿ ನಾವು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಕಳೆದ 15 ವಾರಗಳಿಂದಲೂ ವಾರಕ್ಕೊಮ್ಮೆ ಪ್ರತಿ ಸೋಮವಾರ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದರು.
ಕಾವೇರಿ ಕೊಳ್ಳಭಾಗದಲ್ಲಿ ಕಳೆದ ಬಾರಿ ಬೆಳೆ ನಷ್ಟ, ಪ್ರಸ್ತುತ ಹಾಲಿ ಬೆಳೆ ನಷ್ಟ,ಮುಂದೆ ನಾವು ಒಡ್ಡದೇ ಇರುವ ಇರುವ ಬೆಳೆ ನಷ್ಟ ಎಲ್ಲವನ್ನು ಕೂಡ ಕ್ರೋಢೀಕರಿಸಿ ಕರ್ನಾಟಕ ಸರ್ಕಾರ ಬೆಳೆ ಪರಿಹಾರವನ್ನು ಈ ಕಾವೇರಿ ಕೊಳ್ಳಬಾಗದ ರೈತರಿಗೆ ಕೊಡಬೇಕಾಗುತ್ತದೆ ಎಂದು ಆಗ್ರಹಿಸಿದರು.
ನಾವು ಅನೇಕ ಬಾರಿ ಒತ್ತಾಯ ಮಾಡಿ ಹೇಳ್ತಾ ಇದ್ದರೂ ಸರ್ಕಾರ ಇದಕ್ಕೆ ಗಂಭೀರವಾಗಿ ಗಮನವನ್ನು ಕೊಟ್ಟಿಲ್ಲ. ಕೃಷಿಕ್ಷೇತ್ರ ಇಲ್ಲದೆ ಜಾನುವಾರು ಬದುಕಿಲ್ಲದೇ ಸಮಾಜ ಬೆಳೆಯಲು ಸಾಧ್ಯವಿಲ್ಲ. ಹಾಗಾಗಿ ಮುಖ್ಯಮಂತ್ರಿಗಳು, ನೀರಾವರಿ ಸಚಿವರು, ಉಸ್ತುವಾರಿ ಸಚಿವರು ಎಲ್ಲರೂ ಒಗ್ಗೂಡಿ ನಮ್ಮ ಬೇಡಿಕೆಗಳಿಗೆ ಮನ್ನಣೆ ಮಾಡಲೇಬೇಕು. ಇದು ನಮ್ಮ ಆಗ್ರಹ ಎಂದರು.
ತಮಿಳುನಾಡಿಗೆ ಬಿಟ್ಟಂತಹ ನೀರಿನ ಮೂಲಕ ಆದಂತಹ ನಷ್ಟವನ್ನು, ಕೆಆರ್ಎಸ್ ಅಣೆಕಟ್ಟೆಯಲ್ಲಿ ತಡೆದು ಹಿಡಿದು ಸಂರಕ್ಷಣೆ ಮಾಡಿದ ನೀರನ್ನು ನಮಗೆ ಹಕ್ಕುದಾರರಿಗೆ ಬಳಕೆ ಮಾಡಿಕೊಳ್ಳಲು ಅವಕಾಶ ಮಾಡದೇ ಇರುವ ಕಾರಣ ಎಲ್ಲಾ ಹೊಣೆಗಾರಿಕೆಯನ್ನು ಸರ್ಕಾರ ಹೊರಬೇಕು ಎಂದರು.
ವೈಜ್ಞಾನಿಕವಾಗಿ ಹೂಳು ತೆಗೆಸಿ : ಕೆರೆ ಕಟ್ಟೆಗಳು ಬರಿದಾಗಿರುವುದರಿಂದ ರೈತರು ಅಲ್ಲಲ್ಲಿ ಹೂಳು ತೆಗೆಯುವ ಕೆಲಸ ಮಾಡುತ್ತಿದ್ದಾರೆ. ತಮಗೆ ಅನುಕೂಲವಾದ ಕಡೆ ಅಲ್ಲಲ್ಲೇ ಸ್ವಲ್ಪ ಸ್ವಲ್ಪ ತೆಗಿತಾ ಇದ್ದಾರೆ. ಇದರಿಂದ ಕೆರೆಯಲ್ಲಿ ಹಳ್ಳಕೊಳ್ಳದ ರೀತಿ ಕೆಲಸ ನಡೀತಾ ಇದೆ. ಕೆರೆಯಲ್ಲಿರುವ ಹೂಳನ್ನು ಸಮತಟ್ಟವಾಗಿ ರೈತ ಬಾಂಧವರು ತೆಗೆಯಬೇಕಾಗಿದೆ. ಹಳ್ಳವಾದರೆ ಅದನ್ನು ಮುಚ್ಚುವವರಾರು? ಮತ್ತೆ ಅಲ್ಲಿ ಏನಾದರೂ ಅಪಾಯಗಳಾದರೆ ಹೊಣೆ ಯಾರು? ಎಂದು ಪ್ರಶ್ನಿಸಿದರು.
ಪಂಚಾಯಿತಿ ಮಟ್ಟದಲ್ಲಿ ಪಿಡಿಓ, ಅಧ್ಯಕ್ಷ ಕಾರ್ಯದರ್ಶಿಗಳಿದ್ದಾರೆ. ಅವರ ನೇತೃತ್ವದಲ್ಲಿ ಸಮರ್ಪಕವಾಗಿ ತೆಗೆಯಲು ಜಿಲ್ಲಾಡಳಿತ ಸುತ್ತೋಲೆ ಹೊರಡಿಸಬೇಕೆಂದು ಸೂಚಿಸಿದರು.
ಈ ವೇಳೆ ಕರಪತ್ರ ಹಂಚಿ ಪ್ರತಿಭಟನೆ
ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರಲ್ಲದೆ, ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳನ್ನು ತಡೆದು ಪ್ರಯಾಣಿಕರಿಗೆ ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಿದರು.
ಪ್ರತಿಭಟನೆಯಲ್ಲಿ ಮಂಡ್ಯ ವಿವಿ ವಿದ್ಯಾರ್ಥಿಗಳು, ಕನ್ನಡ ಸೇನೆ, ಜೈ ಕರ್ನಾಟಕ ಪರಿಷತ್ತು, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘಟನೆ, ರೈತ ಸಂಘ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ರೈತ ಸಂಘ(ಮೂಲ ಸಂಘಟನೆ) ಅಧ್ಯಕ್ಷ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕೆ.ಎಸ್.ಸುಧೀರ್ ಕುಮಾರ್, ದೇವೇಗೌಡ,ಕನ್ನಡ ಸೇನೆ ಮಂಜುನಾಥ್, ಎಸ್.ನಾರಾಯಣ್, ದಸಂಸದ ಎಂ.ವಿ.ಕೃಷ್ಣ, ಫಯಾಜ್ ಎ.ಎಲ್.ಬಸವೇಗೌಡ,ನಾರಾಯಣಸ್ವಾಮಿ, ಬೋರಲಿಂಗೇಗೌಡ,ಕರವೇ ಕೆ.ಟಿ.ಶಂಕರೇಗೌಡ, ಕಲ್ಲಹಳ್ಳಿ ಸ್ವಾಮಿ, ಕೃಷ್ಣ ಪ್ರಕಾಶ್, ಎಂ.ಎಲ್.ತುಳಸೀಧರ್, ಗುರುಮೂರ್ತಿ, ಪುಣ್ಯಶ್ರೀ, ಸತ್ಯಭಾಮ, ಮಾನಸ ಸೇರಿದಂತೆ ಹಲವಾರು ಭಾಗವಹಿಸಿದ್ದರು.