ಮಂಡ್ಯ: ಮಾ೨೯. ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡ ತಾಲ್ಲೂಕಿನ ಹೊಸ ಬೂದನೂರಿನ ಸುನಿಲ್‌ಕುಮಾರ್ ಎಂಬವರು ಇಬ್ಬರು ಕ್ರಿಕೆಟ್ ಬುಕ್ಕಿಗಳ ವಿರುದ್ಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಕ್ರಿಕೆಟ್ ಬೆಟ್ಟಿಂಗ್ ದಂಧೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ತಮ್ಮ ದೂರಿನಲ್ಲಿ ಕ್ರಿಕೆಟ್ ಬುಕ್ಕಿಗಳಾದ ಹಳೇಬೂದನೂರಿನ ಎಚ್.ಎಸ್.ಮಧುಕುಮಾರ್(ಗ್ರಾಪಂ ಸದಸ್ಯ) ಹಾಗೂ ಬಿ.ಪಿ.ಅಭಿಷೇಕ್‌ಗೌಡ ಇವರ ವಿರುದ್ಧ ಕೊಲೆಬೆದರಿಕೆ, ಹಲ್ಲೆ ಪ್ರಕರಣ ದಾಖಲಿಸಿದ್ದಾರೆ.
ಈ ಬುಕ್ಕಿಗಳ ಕಿರುಕುಳದಿಂದ ಕಳೆದ ಫೆ.೧೨ರಂದು ನಾನು ಮೈಸೂರಿನಲ್ಲಿ ವಿಷ ಸೇವಿಸಿದ್ದು, ಸ್ಥಳೀಯರು ಕೆ.ಆರ್.ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಪಡೆಯುತ್ತಿದ್ದೆ. ಈ ಕುರಿತು ಪೋಲಿಸರಿಗೆ ಮಾಹಿತಿ ನೀಡಿದ್ದೆನು ಎಂದು ತಿಳಿಸಿದ್ದಾರೆ.
(ಬುಕ್ಕಿ ಮಧು)
ಚಿಕಿತ್ಸೆ ಪಡೆದು ನನ್ನ ಗ್ರಾಮ ಹೊಸ ಬೂದನೂರಿಗೆ ಹಿಂತಿರುಗಿದ್ದೆ. ಮನೆಯಲ್ಲಿದ್ದ ನನ್ನನ್ನು ಭೇಟಿ ಮಾಡಿ ಮಾತನಾಡಬೇಕೆಂದು ಕೆ.ಅಭಿಷೇಕ್‌ಗೌಡ ನನ್ನನ್ನು ಉಪಾಯವಾಗಿ ಮದ್ದೂರಿಗೆ ಕರೆದುಕೊಂಡು ಹೋಗಿದ್ದರು. ನಂತರ ಉಪಾಯದಿಂದ ಬೈಕಿನಲ್ಲಿ ಗೆಜ್ಜಲಗೆರೆ ಮಾರ್ಗವಾಗಿ ಕುದರಗುಂಡಿ ಕೆರೆಯ ಏರಿಯ ಮೇಲೆ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದರು. ಅಲ್ಲಿಗೆ ಕ್ರಿಕೆಟ್ ಬುಕ್ಕಿ ಮಧುಕುಮಾರ್‌ನನ್ನು ಕರೆಯಿಸಿದರು. ಅಲ್ಲಿಗೆ ಬಂದ ಮಧುಕುಮಾರ್ ಏಕಾಏಕಿ ಹಲ್ಲೇ ಮಾಡಿದ್ದಲ್ಲದೆ, ಕೊಲೆ ಮಾಡಲು ಪ್ರಯತ್ನಿಸಿದ್ದರು. ಅದೇ ವೇಳೆ ಬೈಕೊಂದರ ಶಬ್ಧ ಮತ್ತು ಯಾರೋ ಬರುತ್ತಿರುವುದನ್ನು ಗಮನಿಸಿ ಸುಮ್ಮನಾಗಿದ್ದರು. ನಂತರ ಬಾಯಿಗೆ ಬಂದ ಹಾಗೆ ಬೈದು ಕೊಲೆ ಬೆದರಿಕೆ ಹಾಕಿದ್ದಾರೆ. ಇದೆಲ್ಲ ಮುಗಿದ ಮೇಲೆ ಮದ್ದೂರಿಗೆ ಅವರದೇ ಬೈಕಿನಲ್ಲಿ ಕರೆದುಕೊಂಡು ಬಂದು ಬಿಟ್ಟು, ಇನ್ನು ಈ ವಿಷಯವನ್ನು ಕಂಪ್ಲೇಂಟ್ ನೀಡಿದ್ದೇ ಆದರೆ, ಹುಡುಕಿಸಿ ಕೊಲೆ ಮಾಡುವುದಾಗಿ ಮತ್ತು ಸುಪಾರಿ ನೀಡಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ನಮ್ಮ ಜಮೀನು ಮಾರಾಟ ಮಾಡಿ ಬಂದ ೩೬ ಲಕ್ಷ ರೂ.ಗಳನ್ನು ಸಹ ಕ್ರಿಕೆಟ್ ಬೆಟ್ಟಿಂಗ್ನಲ್ಲೇ ಸೋತಿದ್ದೇನೆ. ಒಟ್ಟಾರೆ ನನಗೆ ಸುಮಾರು ಎರಡು ಕೋಟಿ ರೂ.ಗಳಿಗೂ ಅಧಿಕ ಹಣ ಕಳೆದುಕೊಂಡಿದ್ದು ಇವರ ಕಿರುಕುಳ ತಾಳಲಾರದೆ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆನು. ನನ್ನ ಮೇಲೆ ಕೊಲೆ ಯತ್ನ ನಡೆದಿದ್ದರಿಂದ ಈಗ ದೂರು ನೀಡುತ್ತಿದ್ದೇನೆ ಎಂದು ದೂರಿನಲ್ಲಿ ಹೇಳಿದ್ದಾರೆ.
ನನಗೆ ಏನಾದರೂ ಆದರೆ ಮಧುಕುಮಾರ್ ಹಾಗೂ ಅಭಿಷೇಕ್‌ಗೌಡ ಇವರುಗಳೇ ಕಾರಣರಾಗಿರುತ್ತಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.