ಪಾಂಡವಪುರ ಮೇ.8: ಸಕ್ಕರೆ ಜಿಲ್ಲೆ ತಲೆತಗ್ಗಿಸುವ ರೀತಿಯಲ್ಲಿ
ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಕೃತ್ಯದಲ್ಲಿ ಭಾಗಿಯಾಗಿದ್ದ ದಂಪತಿಗಳಿಬ್ಬರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಪಟ್ಟಣದ ಉಪವಿಭಾಗೀಯ ಆಸ್ಪತ್ರೆ ಹೊರಗುತ್ತಿಗೆ ನೌಕರರಾದ ಆನಂದ್ ಹಾಗೂ ಅಶ್ವಿನಿ ಎಂಬುವವರನ್ನು ಕೆಲಸದಿಂದ ವಜಾಗೊಳಿಸಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಆದೇಶ ಹೊರಡಿಸಿದ್ದಾರೆ.
ಹೆಣ್ಣು ಭ್ರೂಣ ಹತ್ಯೆ ಕೃತ್ಯದ ಪ್ರಮುಖ ಆರೋಪಿ ‘ಡಿ’ ಗ್ರೂಪ್ ನೌಕರೆ ಅಶ್ವಿನಿ ಹಾಗೂ ಆಂಬುಲೆನ್ಸ್ ಚಾಲಕ ಆಕೆಯ ಪತಿ ಆನಂದ ಸೇವೆಯಿಂದ ವಜಾಗೊಳಿಸಲಾಗಿದೆ. ಕೃತ್ಯದ ಪ್ರಮುಖ ಆರೋಪಿಗಳಾಗಿರುವ ಇಬ್ಬರು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮುಂಭಾಗದ ಆರೋಗ್ಯ ಇಲಾಖೆ ವಸತಿ ಗೃಹದಲ್ಲಿ ಆರೋಪಿಗಳು ಭ್ರೂಣ ಹತ್ಯೆ ನಡೆಸಿದ್ದರು. ಈ ಸಂಬಂಧ ನಾಲ್ವರು ಆರೋಪಿಗಳ ವಿರುದ್ಧ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಬೆಟ್ಟಸ್ವಾಮಿ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ಚುರುಕು : ಭ್ರೂಣ ಹತ್ಯೆ ಜಿಲ್ಲೆಯಾದ್ಯಂತ ಸಂಚಲನ ಸೃಷ್ಠಿಸಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೃತ್ಯ ಭಾಗಿಯಾಗಿರ ಬಹುದಾದ ಇತರೆ ಆರೋಪಿಗಳ ಪತ್ತೇಗಾಗಿ ಪ್ರತೇಕ ಮೂರು ತಂಡಗಳನ್ನು ರಚಿಸಿಕೊಂಡು ತನಿಖೆ ತೀವ್ರಗೊಳಿಸಿದೆ. ಭ್ರೂಣ ಪತ್ತೆಗಾಗಿ ಎಲ್ಲಿ ಸ್ಕ್ಯಾನಿಂಗ್ ಮಾಡಲಾಗಿತ್ತು. ಹತ್ಯೆಗಾಗಿ ನೀಡಲಾದ ಔಷಧಿಗಳನ್ನು ಎಲ್ಲಿ ಖರೀದಿಸಲಾಗಿತ್ತು. ಔಷಧಿ ಖರೀದಿಗೆ ಪ್ರಿಸ್ಕ್ರಿಪ್ಸನ್ ಬರೆದು ಕೊಟ್ಟವರ್ಯಾರು? ಎಂಬಿತ್ಯಾದಿ ಆಯಾಮಗಳ ಜತೆಗೆ ಆರೋಪಿಗಳ ದೂರವಾಣಿ ಮೂಲಕ ಯಾರ್ಯಾರನ್ನು ಸಂಪರ್ಕಿಸಲಾಗಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಆರೋಗ್ಯ ಸಚಿವರ ಶ್ಲಾಘನೆ : ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಹಾಗೂ ಸ್ಥಳೀಯ ಪೊಲೀಸರನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿನಂದಿಸಿದ್ದಾರೆ.
ಪಾಂಡವಪುರ ಪಟ್ಟಣದ ಆರೋಗ್ಯ ವಸತಿ ಗೃಹದಲ್ಲಿ ಉಪವಿಭಾಗೀಯ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ಅಂಬ್ಯುಲೆನ್ಸ್ ಚಾಲಕ ಆನಂದ್ ಹಾಗೂ ಡಿ ಗ್ರೂಪ್ ನೌಕರೆ ಅಶ್ವಿನಿ ಇತರರು ನಡೆಸಲಾಗುತ್ತಿದ್ದ ಭ್ರೂಣ ಹತ್ಯೆ ಪ್ರಕರಣವನ್ನು
ಮಿಂಚಿನ ದಾಳಿ ನಡೆಸಿ ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಡಿಎಚ್ ಒ ಡಾ.ಕೆ.ಮೋಹನ್ ಹಾಗೂ ಪೊಲೀಸರನ್ನು ಸಚಿವರು ಶ್ಲಾಘಿಸಿದ್ದಾರೆ.