:ಆಸ್ಪತ್ರೆಯ ನಗದು ವಿಭಾಗದಲ್ಲಿನ ಹಣಕಾಸು ಅಕ್ರಮ ಸಂಬಂದ ಅಗತ್ಯ ತನಿಖೆಗೆ ಜಿಲ್ಲಾಧಿಕಾರಿಗಳಿಗೆ ದೂರು
ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಚಿಕಿತ್ಸೆ ಹಾಗೂ ತಪಾಸಣೆಯ ಹಣ ಸಂದಾಯ ಮಾಡುವ ನಗದು ವಿಭಾಗದಲ್ಲಿ ಲಕ್ಷಾಂತರ ರೂಪಾಯಿ ಅಕ್ರಮ ನಡೆದಿದ್ದು ಈ ಸಂಬಂದ ಅಗತ್ಯ ತನಿಖೆಗೆ ಆದೇಶಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ದೂರು ನೀಡಿದ್ದಾರೆ.
ಹೊರ ರೋಗಿಗಳ ದಾಖಲು.ತಪಾಸಣೆ ಹಾಗೂ ಚಿಕಿತ್ಸಾ ವೆಚ್ಚವನ್ನು ಪಾವತಿಸುವ ನಗದು ವಿಭಾಗದಲ್ಲಿ ಇಲ್ಲಿನ ಸಿಬ್ಬಂದಿ ತಮ್ಮ ಕೈಚಳಕ ತೋರಿ ಹೊರ ರೋಗಿಗಳ ರೋಗ ತಪಾಸಣೆ ಚಿಕಿತ್ಸಾ ವೆಚ್ಚವನ್ನು ಹಿರಿಯ ವೈದ್ಯಾಧಿಕಾರಿಗಳು ಪಾವತಿ ರಿಯಾಯಿತಿ ತೋರಿದಂತೆ ತಾವೇ ದಾಖಲೆಗಳನ್ನು ಸೃಷ್ಟಿ ಮಾಡಿ ಸಾರ್ವಜನಿಕರಿಂದ ವಸೂಲು ಮಾಡಿದ ಹಣವನ್ನು ತಮ್ಮ ಜೇಬಿಗೆ ಇಳಿಸಿದ್ದಾರೆ.
ಇದರಿಂದಾಗಿ ಪ್ರತಿನಿತ್ಯ ಆಸ್ಪತ್ರೆಗೆ ಸೇರಬೇಕಾದ ಲಕ್ಷಾಂತರ ರೂಪಾಯಿ ಹಣ ಕೆಲವರ ಜೇಬು ಸೇರಿದೆ.ಈ ಹಗರಣ ಒಂದು ವರ್ಷಕ್ಕು ಹೆಚ್ಚಿನ ಅವಧಿಯಿಂದ ನಡೆದಿರುವ ಸಾಧ್ಯತೆಯಿದ್ದು.ಈ ಸಂಬಂದ ಅಗತ್ಯ ತನಿಖೆಗೆ ಆದೇಶಿಸಿ ಸಂಬಂದಪಟ್ಟವರ ಮೇಲೆ ಶಿಸ್ತುಕ್ರಮ ಜರುಗಿಸಿ ಸಾರ್ವಜನಿಕರ ಹಣ ದುರುಪಯೋಗವಾಗದಂತೆ ಕ್ರಮವಹಿಸುವಂತೆ ದೂರಿನಲ್ಲಿ ವಿವರಿಸಲಾಗಿದೆ.
ರಾಜ್ಯ ಸರಕಾರ ಆಸ್ಪತ್ರೆಯ ಸೇವಾ ಶುಲ್ಕವನ್ನು ದುಪ್ಪಟ್ಟುಗೊಳಿಸಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ದುರ್ಬರಗೊಳಿಸುತ್ತಿದೆ.ಇದರ ಜತೆಗೆ ಈ ರೀತಿಯ ಭ್ರಷ್ಟಚಾರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹದಗೆಡುವಂತೆ ಮಾಡುತ್ತಿದ್ದು ಅಗತ್ಯ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ್ ರಿಗೆ ದೂರು ನೀಡಲಾಗಿದೆ.
ಈ ಸಂಧರ್ಭದಲ್ಲಿ ಕರುನಾಡ ಸೇವಕರು ಸಂಘಟನೆಯ ನಗರಾಧ್ಯಕ್ಷ ಎಂ.ಎನ್ ಚಂದ್ರು.ಗ್ರಾಮಾಂತರ ವಿಭಾಗದ ತಿಮ್ಮೇಗೌಡ ಉಪಸ್ಥಿತರಿದ್ದರು.