ಮಂಡ್ಯ .ಎ.೧೦:- ಯುಗಾದಿ ಹಬ್ಬದ ರಾತ್ರಿ ರೌಡಿಶೀಟರ್ ನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿರುವ ಘಟನೆ ಮಂಡ್ಯದ ಸ್ವರ್ಣಸಂದ್ರದಲ್ಲಿ ನಡೆದಿದೆ.
ಮೂಲತಃ ಚಿಕ್ಕೆಗೌಡನ ದೊಡ್ಡಿ ಗ್ರಾಮದ, ಹಾಲಿ ಆನೆಕೆರೆ ಬೀದಿಯ ಕೆಂಪೇಗೌಡ ರಸ್ತೆಯಲ್ಲಿ ವಾಸವಾಗಿದ್ದ ರೌಡಿ ಶೀಟರ್ ಅಕ್ಷಯ್ (24) ನನ್ನ ಮಾರಕಾಸ್ತ್ರ ದಿಂದ ಹತ್ಯೆ ಮಾಡಲಾಗಿದೆ.
ಸ್ವರ್ಣಸಂದ್ರದ ಭರತ್, ಪ್ರಮೋದ್ ಕಾಡು,ಇತರರು ಅಕ್ಷಯ್ ನನ್ನ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಭರತ್ ರ ತಾಯಿ ಖಾಸಗಿ ಸಂಸ್ಥೆಯಲ್ಲಿ ಅಕ್ಷಯ್ ತಾಯಿಗೆ ಸಾಲ ತೆಗೆದು ಕೊಟ್ಟಿದ್ದರು, ಮರುಪಾವತಿಸದ ಹಿನ್ನಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ ಚಿಕ್ಕೇಗೌಡನ ದೊಡ್ಡಿಯ ಮನೆಯ ಬಳಿ ಹೋಗಿದ್ದ ಭರತ್ ತಾಯಿ ಹಣ ನೀಡುವಂತೆ ಒತ್ತಾಯಿಸಿದಾಗ ಇಬ್ಬರು ಮಹಿಳೆಯರ ಜೊತೆ ಜಗಳ ನಡೆದು ಇದೇ ವೇಳೆ ಭರತ್ ಮತ್ತು ಅಕ್ಷಯ್ ನಡುವೆ ಗಲಾಟೆ ಯಾಗಿ ಭರತ್ ಮೇಲೆ ಹಲ್ಲೆ ನಡೆದಿತ್ತು, ಈ ಬಗ್ಗೆ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಅಕ್ಷಯ್ ಸ್ವರ್ಣಸಂದ್ರಕ್ಕೆ ತೆರಳಿದ್ದನು ಇಸ್ಪೀಟ್ ಜೂಜಾಟದ ವೇಳೆ ಅಕ್ಷಯ್ ಹಾಗೂ ಭರತ್ ಮುಖಾಮುಖಿಯಾಗಿದ್ದರು, ಬಡಾವಣೆಗೆ ಬಂದಿರುವುದನ್ನು ಕಣ್ಣಾರೆ ಕಂಡ ಭರತ್ ಸ್ನೇಹಿತರ ಜೊತೆಗೂಡಿ ಹತ್ಯೆ ಮಾಡಲು ನಿರ್ಧರಿಸಿದ್ದು,ಅದರಂತೆ ಮಂಗಳವಾರ ರಾತ್ರಿ 11:30 ಸಮಯದಲ್ಲಿ ಅಕ್ಷಯ್ ಸ್ನೇಹಿತನ ಜೊತೆ ಬಡಾವಣೆಯ ದಾಸೇಗೌಡ ರಸ್ತೆಯ ಉದ್ಯಾನವನ ಬಳಿಯ ಅರಳಿ ಕಟ್ಟೆ ಬಳಿ ನಡೆದುಕೊಂಡು ಬರುತ್ತಿದ್ದಾಗ ದಾಳಿ ಮಾಡಿ ಮಾರಕಾಸ್ರ ದಿಂದ ಕೊಚ್ಚಿ ಕೊಲೆಗೈದಿದ್ದಾರೆ. ಜೊತೆಯಲ್ಲಿದ್ದ ಹೇಮಂತ್ ಮೇಲೂ ದಾಳಿ ಮಾಡಿದ್ದು ಈತ ಸಣ್ಣ ಪುಟ್ಟ ಗಾಯಗೊಂಡಿದ್ದಾನೆ.
ಪೂರ್ವ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಮೃತ ದೇಹವನ್ನು ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ಹತ್ಯೆ ಮಾಡಿ ಪರಾರಿಯಾಗಿರುವ ಆರೋಪಿಗಳ ಶೋಧ ಕೈಗೊಂಡಿದ್ದಾರೆ.