ಮಂಡ್ಯ: ಸಮಾಜದಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳು, ಸತ್ಸಂಗ ಹಾಗೂ ಗುರುಸ್ಮರಣೆ ಮನುಷ್ಯನ ಸಂಸ್ಕಾರ ವೃದ್ದಿಸಲಿದ್ದು, ಆತನ ಚಂಚಲತೆ ನಾಶವಾಗಲಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಸಂಘ (ರಿ) ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ದೇವರು, ಗುರುಗಳು ಹಾಗೂ ಸಮಾಜದ ದಾರ್ಶನಿಕರ ಸ್ಮರಣೆ ನಿರಂತರವಾಗಿರಬೇಕು. ಆ ಮೂಲಕ ಮನುಷ್ಯನ ಮನಸ್ಸಿನ ಚಂಚಲತೆ ನಾಶವಾಗಿ ಸಂಸ್ಕಾರ ವೃದ್ದಿಸಬೇಕು. ಉತ್ತಮ ಸಂಸ್ಕಾರದಿಂದ ಪ್ರತಿಯೊಬ್ಬರು ದೇವರನ್ನು ಕಾಣಬಹುದಾಗಿದೆ ಎಂದರು.
ಆದಿಚುಂಚನಗಿರಿ ಯನ್ನು ವಿಶ್ವ ಮಟ್ಟಕ್ಕೆ ಪಸರಿಸಿದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಸ್ಮರಣೆ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದ್ದು, ಉತ್ತಮರ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಲು ನಾವೆಲ್ಲರೂ ಆಸಕ್ತಿ ತಾಳಬೇಕಿದೆ ಎಂದರು.
ನಾವು ತಿನ್ನುವ ಆಹಾರ ಅಂದರೆ ಬೆಣ್ಣೆ ಮೇಲೆ ನೋಣ ಕುಳಿತುಕೊಂಡರೆ ಬೆಣ್ಣೆಯನ್ನು ನಾವು ಉಪಯೋಗಿಸುವುದಿಲ್ಲ, ನೋಣದ ಬದಲು ಜೇನುಹುಳು ಕುಳಿತುಕೊಂಡರೆ, ಅದೇ ಬೆಣ್ಣೆಯನ್ನು ಸ್ವಾದಿಸಿ ತಿನ್ನುತ್ತೇವೆ, ಕಾರಣವೆನೆಂದರೆ ಜೇನುಹುಳು ಸುಂದರ ಹೂವಿನ ಮಕರಂದವನ್ನು ಸೇವಿಸುತ್ತದೆ ಆದರೆ ನೊಣ ಅಪಥ್ಯ ವಸ್ತುಗಳ ಮೇಲೆ ಕುಳಿತಿರುತ್ತದೆ ಈ ಹಿನ್ನೆಲೆಯಲ್ಲಿ ನಾವು ಒಳ್ಳೆಯದನ್ನು ಹಾಗೂ ಒಳ್ಳೆಯವರನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಪ್ರತಿಯೊಬ್ಬರು ದುಶ್ಚಟಗಳಿಂದ ದೂರವಿರಬೇಕು, ಒಳ್ಳೆಯವರ ಮಾರ್ಗದರ್ಶನದಲ್ಲಿ ಮುನ್ನಡೆ ದಾಗ ಮುಕ್ತಿ ಸಾಧ್ಯವಾಗಲಿದೆ ಎಂದರು.
ಸಮಾಜ ಮತ್ತು ಸಂಘ ಸಂಸ್ಥೆಗಳನ್ನೂ ಕಟ್ಟುವ ಕೆಲಸ ತ್ರಾಸದಾಯಕವಾಗಿದ್ದು, ಧೃತಿಗೆಡದೇ ಸಂಘಟನೆ ಒಳಿತಾಗುವ ವ್ಯಕ್ತಿಗಳನ್ನು ಸಂಪರ್ಕಿಸಿ ಸಂಘಟನೆ ಬಲಗೊಳಿಸಬೇಕು. ಜಿಲ್ಲೆಯಲ್ಲಿ ಒಕ್ಕಲಿಗರ ಸಂಘದ ಅಸ್ತಿತ್ವಕ್ಕೆ ಶ್ರಮಿಸಿದ ನಾಗಣ್ಣ ಬಾಣಸವಾಡಿ ಹಾಗೂ ತಿಮ್ಮೇಗೌಡ ಅವರು ಅಭಿನಂದನಾರ್ಹರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬೆಂಗಳೂರಿನ ಜಯಕೀರ್ತಿ ಪೌಂಢೇಷನ್ ಸ್ಥಾಪಕ ಡಾ.ರೇವಣ್ಣ, ಕೆಆರ್’ಎಸ್ ಕಾರ್ಯಪಾಲಕ ಅಭಿಯಂತರ ಜಯಂತ್, ಸಾಹಿತಿ ಟಿ.ಸತೀಶ್ ಜವರೇಗೌಡ ಅವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀಪುರುಷೋತ್ತಮಾ ನಂದ ಸ್ವಾಮೀಜಿ, ಶಾಸಕ ಪಿ.ರವಿಕುಮಾರ್ ಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾ ಧರ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ಇತರರು ಉಪಸ್ಥಿತರಿದ್ದರು.