ಮಂಡ್ಯ:ಕಳೆದ ಲೋಕಸಭಾ ಚುನಾವಣೆಯಲ್ಲಿ ಮತ ಕಳ್ಳತನ ನಡೆದಿರುವ ಸಂಬಂಧ ಆಗಸ್ಟ್ 05 ರಂದು ಕಾಂಗ್ರೆಸ್ ಪಕ್ಷದ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಷ್ಟ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಮತ ಕಳ್ಳತನವಾಗಿರುವ ಸಂಬಂಧ ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿ, ಉದಯ್‌ಪುರ್ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಪ್ರಕ್ರಿಯೆ ಕುರಿತು ಸಂಶೋಧನೆ ನಡೆಸಲಾಗಿ ಮತ ಕಳ್ಳತನ ಸಾಬೀತಾದ ಕಾರಣದಿಂದ ಪ್ರತಿಭಟನೆಯ ಮೂಲಕ ರಾಷ್ಟಾ ವ್ಯಾಪಿ ಜಾಗೃತಿ ಮೂಡಿಸಲಾಗುವುದು ಎಂದರು.
ಉದಯ್‌ಪುರ್ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಸಂಶೋಧನೆ ಆಧಾರದ ಮೇಲೆ ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ದೂರು ಸ್ವೀಕರಿಸದ ಕಾರಣ ಪ್ರತಿಭಟನೆಯ ಮೂಲಕ ಚುನಾವಣಾ ಆಯೋಗ ವೈಫಲ್ಯ ಹಾಗೂ ಕೇಂದ್ರಾಡಳಿತದ ಬಿಜೆಪಿ ಚುನಾವಣಾ ಆಯೋಗದ ದುರುಪಯೋಗವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಆರ್‌ಸಿಬಿ ಕಾಲ್ತುಳಿತದ ಪ್ರಕರಣದ ಹಿನ್ನಲೆಯಲ್ಲಿ ರ‍್ಯಾಲಿ ನಡೆಸಲು ಹೈಕೋರ್ಟ್ ನಿರ್ಬಂಧ ಹೇರಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನಾ ಸಮಾವೇಶ ನಡೆಸಲಾಗುತ್ತಿದೆ. ಬೆಂಗಳೂರಿನ ಅನಂತ್‌ರಾವ್ ವೃತ್ತದಿಂದ ಫ್ರೀಡಂ ಪಾರ್ಕ್ನವರೆಗೂ ಸಂಚಾರದ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರುಗಳಾದ ರಾಹುಲ್‌ಗಾಂಧಿ, ರಣ್‌ದೀಪ್ ಸಿಂಗ್ ಸುರ್ಜಿವಾಲ, ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯ ಸಚಿವ ಸಂಪುಟದ ಸಚಿವರುಗಳು, ರಾಜ್ಯ ಮಟ್ಟದ ಕಾಂಗ್ರೆಸ್ ನಾಯಕರು, ಮುಖಂಡರು, ಪದಾಧಿಕಾರಿಗಳು ಭಾಗವಹಿಸಲಿದ್ದು, ಜಿಲ್ಲೆಯ 7 ತಾಲೂಕಿನ ಎಲ್ಲಾ ನಾಯಕರು, ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿ 5 ಸಾವಿರ ಮಂದಿ ಪಾಲ್ಗೊಳ್ಳಲಿದ್ದೇವೆ ಎಂದು ಮಾಹಿತಿ ನೀಡಿದರು..
ಅಂದು ಬೆಳಿಗ್ಗೆ 10 ಗಂಟೆಯೊಳಗೆ ಎಲ್ಲರೂ ಫ್ರೀಡಂ ಪಾರ್ಕ್ ಸೇರುವಂತೆ ಮನವಿ ಮಾಡಿದ ಅವರು, ರಾಷ್ಟೀಯ ನಾಯಕ ರಾಹುಲ್‌ಗಾಂಧಿ ಅವರು, ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕೈಚಳಕದ ಬಗ್ಗೆ, ಮಹಾರಾಷ್ಟದಲ್ಲಿಯೂ ಇದೇ ರೀತಿ ಬಿಜೆಪಿ ಕೈಚಳಕ ತೋರಿರುವ ಅನುಮಾನವಿದ್ದು ಎಲ್ಲದರ ಮಾಹಿತಿ ಹಂಚಿಕೊಳ್ಳಲಿದ್ದಾರೆ. 50ರಿಂದ 70 ಸಾವಿರ ಮಂದಿ ಭಾಗವಹಿಸುಲಿದ್ದಾರೆಂದು ಅಂದಾಜಿಸಲಾಗಿದ್ದು, 1 ಲಕ್ಷ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಮತ ಕಳ್ಳತನವೆಂದರೆ ಮತ ಪೆಟ್ಟಿಗೆಯಿಂದ ಮತಗಳ ಸೇರ್ಪಡೆ, ಮತ ತೆಗೆಯುವ ಕ್ರಿಯೆಯಾಗಿದೆ. ಬೆಂಗಳೂರಿನ ಮಹದೇವಪುರದಲ್ಲಿಯೂ 52 ಸಾವಿರ ಮತಗಳ ಅದಲಿ ಬದಲಿಯಾಗಿರುವ ಸಂಶಯವನ್ನು ರಾಹುಲ್‌ಗಾಂಧಿ ಪ್ರಾರಂಭದಲ್ಲಿಯೇ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದರೂ ಈ ರೀತಿಯಾಗಲಿಕ್ಕೆ ಚುನಾವಣೆಯಲ್ಲಿ ಮೋಸ ಮಾಡಲಾಗದೆಂಬ ಉದಾಸೀನತೆಯೇ ಕಾರಣವಾಗಿದೆ. ಕೇಂದ್ರ ಸರ್ಕಾರ ಇಡಿ, ಐಟಿ ದುರುಪಯೋಗ ಮಾಡಿಕೊಂಡಂತೆ ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದರು.
ರಾಜ್ಯದಲ್ಲಿ ರಾಸಾಯನಿಕ ಗೊಬ್ಬರ ಕೊರತೆಗೆ ಕೇಂದ್ರ ಸರ್ಕಾರವೇ ಕಾರಣ, ಗೊಬ್ಬರ ತಯಾರಿಸಿ ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರ್ಕಾರವೇ ನೀಡಬೇಕು. ಇದನ್ನು ತಿಳಿಯದ ಬಿಜೆಪಿ ನಾಯಕರು ವಿನಃ ಕಾರಣ ಪ್ರತಿಭಟನೆ ಮಾಡುತ್ತಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಈ ಬಗ್ಗೆ ಅರಿವಿದೆಯೋ ಇಲ್ಲವೋ ತಿಳಿಯದೆಂದು ವ್ಯಂಗ್ಯವಾಡಿದರು.
ಕೇಂದ್ರದಲ್ಲಿ ಏಪ್ರಿಲ್‌ನಿಂದ ಜುಲೈ ವರೆಗೆ ಬರಬೇಕಿದ್ದ ಗೊಬ್ಬರದಲ್ಲಿ 1.25 ಲಕ್ಷ ಮೆಟ್ರಿಕ್ ಟನ್ ಬಾಕಿ ಉಳಿಸಿಕೊಂಡಿದೆ. ಈಗ ಆಗಸ್ಟ್ ಮಾಹೆಗೆ 2.21 ಲಕ್ಷ ಮೆಟ್ರಿಕ್ ಟನ್ ರಾಸಾಯನಿಕ ಗೊಬ್ಬರ ಬರಬೇಕಿದೆ ಎಂದು ಅಂಕಿ ಅಂಶ ಹಂಚಿಕೊಂಡರು.
ರಾಜ್ಯದಲ್ಲಿ ರೈತರ ಆತ್ಮಹತ್ಯೆಯನ್ನು ಶೂನ್ಯಗೊಳಿಸುವುದು ಕಾಂಗ್ರೆಸ್ ಸರ್ಕಾರದ ಗುರಿಯಾಗಿದೆ. ಈ ಹಿಂದೆ ಕೋಲಾರದಲ್ಲಿ ಆತ್ಮಹತ್ಯೆ ಹೆಚ್ಚಿತ್ತು. ಈಗ ಶೂನ್ಯವಾಗಿದೆ. ಹಾಗೆಂದು ಸಂತಸವನ್ನೂ ವ್ಯಕ್ತ ಪಡಿಸುವ ಸ್ಥಿತಿಯಲ್ಲಿ ಸರ್ಕಾರವಿಲ್ಲ, ಹಾವೇರಿಯಲ್ಲಿನ ರೈತರ ಆತ್ಮಹತ್ಯೆಗಳಿಗೆ ಸೂಕ್ತ ಕಾರಣ ತಿಳಿಯಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು, ಸಮಸ್ಯೆ ಬಗೆಹರಿಸಲು ಮುಂದಾಗುವುದಾಗಿ ಪ್ರಶ್ನೆಗೆ ಉತ್ತರ ನೀಡಿದರು.
ಗೋಷ್ಟಿಯಲ್ಲಿ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಕಾಂಗ್ರೆಸ್ ಮಂಡ್ಯ ಜಿಲ್ಲಾ ಉಸ್ತುವಾರಿ ರಾಮ್ ಪ್ರಸಾದ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾ ಕಾರ್ಯಾಧ್ಯಕ್ಷ ಚಿದಂಬರ್, ಜಿಲ್ಲಾ ಮಹಿಳಾಧ್ಯಕ್ಷೆ ಶುಭದಾಯಿನಿ, ಬ್ಲಾಕ್ ಅಧ್ಯಕ್ಷ ಅಪ್ಪಾಜಿ, ಉಮೇಶ್ ಇದ್ದರು.