ವೃತ್ತ ನಿರೀಕ್ಷಕ ಶಿವಕುಮಾರ್ ಅಮಾನತ್ತು ಆದೇಶ ವಾಪಾಸ್ ಪಡೆಯಿರಿ ಸಾರ್ವಜನಿಕರ ಒತ್ತಾಯ
ಕೆ.ಆರ್.ಪೇಟೆ-ಸೆ.೧೩. ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ಸಮಾಜ ಮುಖಿ ಕೆಲಸಮಾಡಿ, ಕಾನೂನು ಸುವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿದ್ದ ಮದ್ದೂರು ಸಿ.ಪಿ.ಐ ಶಿವಕುಮಾರ್ ಅಮಾನತ್ತು ಮಾಡಿರುವುದು ಖಂಡನೀಯವಾಗಿದ್ದು ತಕ್ಷಣ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಸಮಾಜ ಸೇವಕ ಎಚ್.ಬಿ.ಮಂಜುನಾಥ್ ಒತ್ತಾಯಿಸಿದ್ದಾರೆ.
ಈ ಸಂಬಂದ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳ ಮೂಲಕ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ಅವರು.
ಮದ್ದೂರು ಪಟ್ಟಣದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿದ್ದು ಅಕ್ಷಮ್ಯ ಅಪರಾಧ ಎಂಬುದು ಎಲ್ಲರಿಗೂ ತಿಳಿದಿದೆ. ಇದರಲ್ಲಿ ವೃತ್ತ ನಿರೀಕ್ಷರ ಕರ್ತವ್ಯ ಲೋಪ ಕಂಡು ಬಂದಿರುವುದಿಲ್ಲ. ಗಣೇಶ ವಿಸರ್ಜನಾ ಮೆರವಣಿಗೆ ನಡೆಯುವ ಮುನ್ನ ಅಲ್ಲಿನ ವಿಷಯಗಳನ್ನು ಗುಪ್ತಚರ ವಿಭಾಗದ ಸಿಬ್ಬಂದಿಗಳು ಪತ್ತೆಮಾಡಿ ವರದಿಮಾಡಬೇಕಿತ್ತು.
ಇಲ್ಲಿ ಕರ್ತವ್ಯ ಲೋಪವಾಗಿರುವುದು ಎಲ್ಲರಿಗೂ ತಿಳಿದೆ. ಆದರೆ ಇಲಾಖೆಯ ಮುಖ್ಯಸ್ಥ ನೆಂಬ ಕಾರಣವನ್ನು ಮುಂದಿಟ್ಟುಕೊಂಡು ವೃತ್ತ ನಿರೀಕ್ಷಕರನ್ನು ಸರ್ಕಾರ ಅಮಾನತ್ತು ಮಾಡಿರುವುದು ಸರಿಯಲ್ಲವೆಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.
ಒಂದು ವೇಳೆ ಇಲಾಖೆಯ ಮುಖ್ಯಸ್ಥನ ಕರ್ತವ್ಯ ಲೋಪ ಎಂಬುದಾದರೆ ಜಿಲ್ಲೆಯ ಮುಖ್ಯಸ್ಥರಾಗಿರುವ ಎಸ್.ಪಿ ಯವರನ್ನು ಸರ್ಕಾರ ಅಮಾನತ್ತು ಮಾಡಬೇಕಾಗಿತ್ತು. ಆದರೆ ಸರ್ಕಾರ ಕೆಲವು ಶಾಂತಿ ಕದಡುವ ಕಿಡಿಗೇಡಿಗಳಿಗೆ ಸಮಾಧಾನ ಮಾಡಲು ದಕ್ಷ ಅಧಿಕಾರಿಯನ್ನು ಅಮಾನತ್ತು ಮಾಡಿರುವುದು ಸರ್ಕಾರದ ಓಲೈಕೆ ರಾಜಕೀಯ ಎಂಬದು ಜನರ ಆರೋಪವಾಗಿದೆ.
ಸರ್ಕಾರಕ್ಕೆ ಪ್ರಾಮಾಣಿಕತೆ ಇದ್ದರೆ ಯಾರದೋ ತಪ್ಪಿಗೆ ಈಗ ಬಲಿ ಪಶುಮಾಡಿರುವ ಶಿವಕುಮಾರ್ ಅವರ ಅಮಾನತ್ತನ್ನು ತಕ್ಷಣ ವಾಪಸ್ ಪಡೆದು ಮದ್ದೂರಿನಲ್ಲಿಯೇ ಮತ್ತೆ ಮುಂದುವರಿಸಬೇಕು. ಶಿವಕುಮಾರ್ ಅವರ ಕರ್ತವ್ಯ ನಿಷ್ಠೆಯ ಬಗ್ಗೆ ಅವರು ಹಿಂದೆ ಕೆಲಸಮಾಡಿರುವ ಬೆಂಗಳೂರು, ಕೆ.ಆರ್.ಪೇಟೆ, ಹೊಳೆನರಸಿಪುದಲ್ಲಿ ಜನರಿಂದಲೆ ಮಾಹಿತಿಯನ್ನು ಸರ್ಕಾರ ಪಡೆದುಕೊಳ್ಳಲಿ ಎಂದು ಎಚ್.ಬಿ.ಮಂಜುನಾಥ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿಸಮಾಜ ಸೇವಕ ಮಾಕವಳ್ಳಿ ರಮೇಶ್ ತಾಲೂಕು ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ಎನ್.ವಾಸುದೇವಾ, ಮುಖಂಡರಾದ ಚಂದ್ರು, ಮುರುಗೇಶ್, ಶ್ರೀನಿವಾಸ್, ಬಹುದ್ದೂರ್, ಪುರುಷೊತ್ತಮ್, ಗಂಗಾಧರ್, ಸಂತೋಷ್, ಪುಟ್ಟರಾಜು, ಮುತ್ತು, ಲೋಕೇಶ್ ಮತ್ತಿತರರು ಹಾಜರಿದ್ದು ಅಮಾನತ್ತು ಆದೇಶ ವಾಪಸ್ ಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದರು.