ದಲಿತ ಶಾಸಕ ನರೇಂದ್ರ ಸ್ವಾಮಿಗೆ ಪೋಲಿಸ್ ರಕ್ಷಣೆ ಕೊಡಿ:ಮಾಜಿ ಶಾಸಕ ಅನ್ನದಾನಿ ಆಗ್ರಹ
ಮಂಡ್ಯ: ಆ.೭.ಜಿಲ್ಲೆಯ ಏಕೈಕ ದಲಿತ ಶಾಸಕ ಮಳವಳ್ಳಿಯ ನರೇಂದ್ರಸ್ವಾಮಿಗೆ ಪೋಲಿಸ್ ರಕ್ಷಣೆ ನೀಡುವಂತೆ ಜ್ಯಾದಳ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಘಟಕದ ರಾಜ್ಯಾಧ್ಯಕ್ಷ ಮಾಜಿ ಶಾಸಕ ಅನ್ನದಾನಿ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು.ಶಾಸಕ ನರೇಂದ್ರಸ್ವಾಮಿಯವರು ತಮಗೆ ಜೀವ ಬೆದರಿಕೆ ಇದೆಯೆಂದು ಹೇಳಿಕೊಂಡಿದ್ದಾರೆ.ಸ್ವತಃ ತಮ್ಮದೆ ಸರ್ಕಾರವಿದ್ದು ತಮಗೆ ಜೀವ ಬೆದರಿಕೆ ಇದೆಯೆಂದು ಹೇಳಿಕೊಂಡ ಮೇಲೆ ಇನ್ನುಳಿದ ಸಾಮಾನ್ಯ ದಲಿತರ ಪಾಡೇನು.ಮಾಹಿತಿ ಹಕ್ಕು ಕಾರ್ಯಕರ್ತರು ತಮ್ಮನ್ನು ಬೆದರಿಸುತ್ತಾರೆಂದು ಸಹ ಶಾಸಕರು ಹೇಳಿಕೊಂಡಿದ್ದಾರೆ ಆದ್ದರಿಂದ ಕೂಡಲೇ ಅವರಿಗೆ ರಕ್ಷಣೆ ನೀಡಿ ಎಂದು ಅವರು ವ್ಯಂಗ್ಯವಾಡಿದರು.
ಮುಂದುವರಿದು ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ.ಹಾಡ ಹಗಲೇ ಕೊಲೆಗಳು ನಡೆದಿವೆ.ನೂರಾರು ಪೋಲಿಸರು ಶಾಸಕರ ಖಾಸಗಿ ಕಾರ್ಯಕ್ರಮಕ್ಕೆ ರಕ್ಷಣೆ ಕೊಡಲು ನಿಂತಿದ್ದಾರೆ.ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಪೋಲಿಸ್ ಇಲಾಖೆ ವಿರುದ್ದ ಪ್ರತಿಭಟಿಸುವುದಾಗಿ ಅವರು ಎಚ್ಚರಿಸಿದರು.
ಮಳವಳ್ಳಿ ಕ್ಷೇತ್ರದಲ್ಲಿ ನಕಲಿ ದಾಖಲೆಗಳನ್ನು ಬಳಸಿ ಸರ್ಕಾರಿ ಭೂಮಿ ಕಬಳಿಕೆ ಮಾಡಲಾಗಿದೆ.ಈ ಕುರಿತು ತಾವು ಹೋರಾಟ ನಡೆಸಿದ ನಂತರ ಎಚ್ಚೆತ್ತ ಜಿಲ್ಲಾಡಳಿತ ಹಲವು ಆರ್ ಟಿ ಸಿ ಗಳನ್ನು ರದ್ದು ಮಾಡಿದೆ.ಆದರೆ ಯಾವೊಂದು ಭೂಮಿಯನ್ನು ಸರಕಾರದ ವಶಕ್ಕೆ ಪಡೆಯುವ ಯಾವ ಪ್ರಯತ್ನ ಮಾಡಿಲ್ಲ.ಸ್ವತಃ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸುವ ಕೆಲಸ ಮಾಡಿಲ್ಲ.
ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿಯವರು ನರೇಂದ್ರ ಸ್ವಾಮಿಯವರೇ ಕರೆತಂದ ಅಧಿಕಾರಿಯಾಗಿದ್ದಾರೆ.ಈಗ ಉಪವಿಭಾಧಿಗಾಧಿಕಾರಿ ಲಂಚಕೋರ ಎಂದು ಶಾಸಕರು ಆರೋಪಿಸುತ್ತಾರೆ.ಈ ಹುದ್ದೆಗೆ ಅವರು ಬರಲು ಖರ್ಚು ಮಾಡಿರುವ ಸಂಪನ್ಮೂಲ ಎತ್ತಲು ಅವರು ಕಚೇರಿಯನ್ನು ಲಂಚಕೋರರಿಗೆ ಬಿಡುವಂತಾಗಿದೆ ಎಂದರು.
ಭೂಕಬಳಿಕೆ ಮಾಡುತ್ತಿರುವುದನ್ನು ಸ್ವತಃ ಶಾಸಕರೆ ಒಪ್ಪಿಕೊಂಡಿದ್ದಾರೆ.ಶಾಸಕರಿಗೆ ಅಧಿಕಾರದಲ್ಲಿ ಇರಲು ಯಾವುದೇ ಯೋಗ್ಯತೆಯಿಲ್ಲ ಕೂಡಲೇ ರಾಜೀನಾಮೆ ನೀಡಬೇಕು ಎಂದರು.
ಗೋಷ್ಟಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ.ಜಯರಾಮ್ ಸಿದ್ದಾಚಾರಿ.ಕಾಂತರಾಜು.ಶ್ರೀಧರ್ ಮೊದಲಾದವರಿದ್ದರು.


