ಚಿತ್ರದುರ್ಗ ನಿರ್ಮಿತಿ ಕೇಂದ್ರ: ಮಾಹಿತಿ ಹಕ್ಕು ಕಾಯಿದೆಯನ್ನೇ ಬುಡಮೇಲು ಮಾಡಿದ ಯೋಜನಾ ನಿರ್ದೇಶಕ ಹರೀಶ್ ಕುಮಾರ್ ಬಿ.ಎಸ್
ಚಿತ್ರದುರ್ಗ: ಸರಕಾರಿ ಕಚೇರಿಗಳಲ್ಲಿ ಪಾರದರ್ಶಕತೆ ತರಲು ಜಾರಿಯಲ್ಲಿರುವ ‘ಮಾಹಿತಿ ಹಕ್ಕು ಕಾಯಿದೆ 2005’ ಅನ್ನು ಚಿತ್ರದುರ್ಗ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಹರೀಶ್ ಕುಮಾರ್ ಬಿ.ಎಸ್. ತಮ್ಮ ಸ್ವಂತ ಜಾಗೀರು ಎಂಬಂತೆ ಬಳಸಿಕೊಳ್ಳುತ್ತಿದ್ದಾರೆ. ಮಾಹಿತಿ ಕೇಳುವ ಅರ್ಜಿದಾರರನ್ನು ಬೆದರಿಸಲು ಕಾಯಿದೆಯಲ್ಲೇ ಇಲ್ಲದ “ಕಪ್ಪು ಪಟ್ಟಿ” ನಿಯಮವನ್ನು ಮುಂದಿಟ್ಟುಕೊಂಡು ಅಪ್ಪಟ ಸುಳ್ಳು ಹೇಳುವ ಮೂಲಕ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ದಾಖಲೆಗಳಿಂದ ಬಟಾಬಯಲಾಗಿದೆ.
ಬೆಂಗಳೂರಿನ ಯಶವಂತಪುರದ ನಿವಾಸಿ ಸಿ.ಪಿ. ತಿಪ್ಪೇಸ್ವಾಮಿ ಎಂಬುವರು ಚಿತ್ರದುರ್ಗ ನಿರ್ಮಿತಿ ಕೇಂದ್ರದ ಕಾಮಗಾರಿಗಳ ಅನುಷ್ಠಾನದ ಬಗ್ಗೆ 02-11-2023 ರಂದು ಒಟ್ಟು 09 ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿಗಳನ್ನು ಮುಕ್ತಾಯಗೊಳಿಸಿ ದಿನಾಂಕ 20-02-2026 ರಂದು ಯೋಜನಾ ನಿರ್ದೇಶಕ ಹರೀಶ್ ಕುಮಾರ್ ಬಿ.ಎಸ್. ಹಿಂಬರಹ ನೀಡಿದ್ದಾರೆ.
ಈ ಹಿಂಬರಹದಲ್ಲಿ ಹರೀಶ್ ಕುಮಾರ್ ಅತ್ಯಂತ ದುಸ್ಸಾಹಸದ ಹಾಗೂ ಸುಳ್ಳು ಕಾರಣವನ್ನು ನೀಡಿದ್ದಾರೆ. “ಮಾಹಿತಿ ಆಯೋಗವು ಅರ್ಜಿದಾರ ತಿಪ್ಪೇಸ್ವಾಮಿ ಅವರಿಗೆ ತಲಾ ರೂ. 1000 ದಂಡ ವಿಧಿಸಿ, ಅವರನ್ನು ‘ಕಪ್ಪು ಪಟ್ಟಿಗೆ’ ಸೇರಿಸಿದೆ. ಹೀಗಾಗಿ ಅವರ ಯಾವುದೇ ಅರ್ಜಿ/ದೂರುಗಳನ್ನು ಸ್ವೀಕರಿಸಬಾರದೆಂದು ನಿರ್ದೇಶಿಸಿದೆ” ಎಂದು ಹೇಳಿ, ಮಾಹಿತಿಯನ್ನು ನಿರಾಕರಿಸಿದ್ದಾರೆ.
ಯೋಜನಾ ನಿರ್ದೇಶಕ ಹರೀಶ್ ಕುಮಾರ್ ಈ ನಡೆಯ ಸಂಪೂರ್ಣ ಬಣ್ಣವನ್ನು ‘ಕರ್ನಾಟಕ ಮಾಹಿತಿ ಆಯೋಗ’ದ ಅಧಿಕೃತ ಹಿಂಬರಹಗಳೇ ಬಯಲು ಮಾಡಿವೆ. ಆಯೋಗದ ಹಿಂಬರಹ ದಿನಾಂಕ 26-09-2025 1ರಲ್ಲಿ ಡಿಲ್ಲಿಬಾಬು.ಎ ಅವರಿಗೆ ಮಾಹಿತಿ ಆಯೋಗ ನೀಡಿರುವ ಹಿಂಬರಹದಲ್ಲಿ, “ಆರ್.ಟಿ.ಐ ಕಾರ್ಯಕರ್ತರನ್ನು ಶಾಶ್ವತವಾಗಿ ಕಪ್ಪು ಪಟ್ಟಿಗೆ ಸೇರಿಸಲು ಮಾಹಿತಿ ಹಕ್ಕು ಕಾಯಿದೆ 2005ರಲ್ಲಿ ಯಾವುದೇ ಕಲಂ/ಸೆಕ್ಷನ್‌ನಲ್ಲಿ ಅವಕಾಶವಿಲ್ಲ” ಎಂದು ಸ್ಪಷ್ಟವಾಗಿ ತಿಳಿಸಿದೆ.
ಆಯೋಗದ ಹಿಂಬರಹ ದಿನಾಂಕ 27-01-2026 2ರಲ್ಲಿ ಪಿ. ದೀಪ ಅವರಿಗೆ ನೀಡಿರುವ ಮತ್ತೊಂದು ಹಿಂಬರಹದಲ್ಲಿ, “ಅರ್ಜಿದಾರರನ್ನು ಕಪ್ಪು ಪಟ್ಟಿಗೆ ಸೇರಿಸುವುದು ಹಾಗೂ ಒಂದು ಅರ್ಜಿಗೆ ಒಂದು ಸಾವಿರ ದಂಡ ವಿಧಿಸುವುದಕ್ಕೆ ಕಾಯಿದೆಯಲ್ಲಿ ಅವಕಾಶ ಇರುವ ಕುರಿತು ಯಾವುದೇ ಉಲ್ಲೇಖವಿಲ್ಲ” ಎಂದು ಆಯೋಗವೇ ಲಿಖಿತವಾಗಿ ಸ್ಪಷ್ಟಪಡಿಸಿದೆ.
ಮಾಹಿತಿ ಹಕ್ಕು ಕಾಯಿದೆಯ ಸರ್ವೋಚ್ಚ ಸಂಸ್ಥೆಯಾದ ‘ಮಾಹಿತಿ ಆಯೋಗ’ವೇ ಕಾಯಿದೆಯಲ್ಲಿ “ಕಪ್ಪು ಪಟ್ಟಿ” ಎಂಬ ಪದವೇ ಇಲ್ಲ ಎಂದ ಮೇಲೆ, ಚಿತ್ರದುರ್ಗ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಈ ನಿಯಮ ಎಲ್ಲಿಂದ ಸಿಕ್ಕಿತು? ನಿರ್ಮಿತಿ ಕೇಂದ್ರದಲ್ಲಿ ನಡೆದಿರಬಹುದಾದ ಅಕ್ರಮಗಳು, ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿಗಳ ಮಾಹಿತಿ ಹೊರಬರಬಾರದು ಎಂಬ ಏಕೈಕ ದುರುದ್ದೇಶದಿಂದ ಹರೀಶ್ ಕುಮಾರ್ ಇಲ್ಲಸಲ್ಲದ ಸುಳ್ಳು ನೆಪಗಳನ್ನು ಹೇಳಿ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಈ ಭ್ರಷ್ಟಾಚಾರದ ಆರೋಪಗಳಿಗೆ ಪುಷ್ಟಿ ನೀಡುವಂತೆ, ಏಪ್ರಿಲ್ 7, 2026 ರಂದು ಇದೇ ಚಿತ್ರದುರ್ಗ ನಿರ್ಮಿತಿ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದಂತೆ, ಕೇಂದ್ರದ ಮಾಜಿ ಅಕೌಂಟೆಂಟ್ ಸುಶೀಲಮ್ಮ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ತನಿಖೆ ಕೈಗೊಂಡಿದ್ದಾರೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿ ಕಾಯಿದೆಯನ್ನು ಗೌರವಿಸಬೇಕಾದ ಅಧಿಕಾರಿಯೇ, ಆಯೋಗದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಹಿಂಬರಹ ನೀಡಿರುವುದು ಗಂಭೀರ ಅಪರಾಧವಾಗಿದೆ.
ತಮ್ಮ ಆಡಳಿತ ವೈಫಲ್ಯ ಹಾಗೂ ಕೇಂದ್ರದ ಅವ್ಯವಹಾರಗಳನ್ನು ಮುಚ್ಚಿಟ್ಟುಕೊಳ್ಳಲು ಮಾಹಿತಿ ಹಕ್ಕು ಕಾಯಿದೆಯ ಕತ್ತು ಹಿಸುಕುತ್ತಿರುವ ಯೋಜನಾ ನಿರ್ದೇಶಕ ಹರೀಶ್ ಕುಮಾರ್ ಬಿ.ಎಸ್. ಅವರ ಈ ಸರ್ವಾಧಿಕಾರಿ ನಡೆಯನ್ನು ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಮಾಹಿತಿ ಆಯುಕ್ತರು ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಇಂತಹ ಭ್ರಷ್ಟ ಅಧಿಕಾರಿಯ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜಾಗೃತ ನಾಗರಿಕರು ಒತ್ತಾಯಿಸಿದ್ದಾರೆ.




