ದಸರಾ ಸೇರಿದಂತೆ ಹಲವು ಸಂಧರ್ಭಗಳಲ್ಲಿ ಸಾರ್ವಜನಿಕರ ಕಿವಿಗಡಚಿಕ್ಕುವಂತೆ ಅಗ್ಗದ ತುತ್ತೂರಿ ಊದಿ ಸಾರ್ವಜನಿಕರ ಆರೋಗ್ಯ ನೆಮ್ಮದಿ ಭಂಗ ಮಾಡುವ ಪುಂಡು ಪೋಕರಿಗಳಿಗೆ ಬ್ರೇಕ್ ಹಾಕುವಂಥ ಆದೇಶವೊಂದನ್ನು ಮೈಸೂರು ನಗರ ಪೋಲಿಸ್ ಆಯುಕ್ತರು ಹೊರಡಿಸಿದ್ದಾರೆ. ಕರ್ನಾಟಕ ಪೊಲೀಸ್ ಕಾಯ್ದೆ 1963, ಕಲಂ 35, 36 ಮತ್ತು 92 (q) ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಆದೇಶದಲ್ಲಿ
ಮೈಸೂರು ನಗರ ಘಟಕ ವ್ಯಾಪ್ತಿಯಲ್ಲಿ ಕಳೆದ ವರ್ಷಗಳ ದಸರಾ ಹಬ್ಬದ ಸಮಯದಲ್ಲಿ ಸಾರ್ವಜನಿಕ ರಸ್ತೆ ಮತ್ತು ಸ್ಥಳಗಳಲ್ಲಿ ಓಡಾಡುವ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಕೆಲ ಪುಂಡ ಪೋಕರಿಗಳು ವುವುಜೆಲಾ (ತುತ್ತೂರಿ) ಗಳಿಂದ ಕಿವಿ ಹತ್ತಿರ ಊದಿ ಕಿರಿಕಿರಿ ಉಂಟು ಮಾಡಿರುವುದು ಗಮನಕ್ಕೆ ಬಂದಿರುತ್ತದೆ. ಇದರಿಂದ ಸಾರ್ವಜನಿಕರ ನೆಮ್ಮದಿ ಭಂಗ ಉಂಟಾಗುವುದಲ್ಲದೆ ಕಿರಿಕಿರಿಯಾಗಿ ಅಚಾತುರ್ಯ ಘಟನೆಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರ ಆರೋಗ್ಯ ಸುರಕ್ಷತೆ, ನೈತಿಕತೆಗೆ ಕಿರಿಕಿರಿ ಉಂಟು ಮಾಡುವುದು ಅಥವಾ ಸಾಮಾನ್ಯ ಜನರ ಹಕ್ಕುಗಳನ್ನು ಘಾಸಿಗೊಳಿಸುವ ಕ್ರಿಯೆಯನ್ನು ಸಾರ್ವಜನಿಕ ಉಪದ್ರವ ಎಂದು ಪರಿಗಣಿಸಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆ 1963 ಸೆಕ್ಷನ್ 92 (q) ಪ್ರಕಾರ ಹಾಗೂ ಭಾರತೀಯ ನ್ಯಾಯ ಸಂಹಿತೆ-2023 ಸೆಕ್ಷನ್ 270 ರಲ್ಲಿ ಸಾರ್ವಜನಿಕ ಉಪದ್ರವವನ್ನು ಅಪರಾಧವೆಂದು ಪರಿಗಣಿಸಲಾಗಿದೆ.
ಆದ್ದರಿಂದ ಪ್ರಸ್ತುತ 2025ನೇ ಸಾಲಿನ ದಸರಾ ಸಂಭ್ರಮ ಪ್ರಾರಂಭವಾಗಿರುವುದರಿಂದ, ಮೈಸೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವುವುಜಿಲ್ಲಾ (ತುತ್ತೂರಿ) ಮಾರಾಟ ಮಾಡುವುದನ್ನು ಮತ್ತು ಬಳಸುವುದನ್ನು ನಿಷೇಧಿಸುವ ಸಂಬಂಧ ಈ ಕೆಳಕಂಡಂತೆ ಆದೇಶವನ್ನು ಹೊರಡಿಸಲಾಗಿದೆ.
ನಗರ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್. ಕರ್ನಾಟಕ ಪೊಲೀಸ್ ಕಾಯ್ದೆ 1963, ಕಲಂ 35 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ – ಮೈಸೂರು ನಗರ ಪೊಲೀಸ್ ಕಮೀಷನರೇಟ್ ಘಟಕದ ವ್ಯಾಪ್ತಿಯಲ್ಲಿ ವುವುಜೆಲಾ (ತುತ್ತೂರಿ) ಮಾರಾಟ ಮಾಡುವುದನ್ನು ಮತ್ತು ಬಳಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನಿನನ್ವಯ ಸೂಕ್ತ ಕ್ರಮಕೈಗೊಳ್ಳಲಾಗುವುದು. ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಈ ಘಟಕದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಒಟ್ಟಿನಲ್ಲಿ ದಸರಾ ಸಂಧರ್ಭದಲ್ಲಿ ವಿಪರೀತ ಕಿರಿಕಿರಿ ಮಾಡುತ್ತಿದ್ದ ಈ ತುತ್ತೂರಿ ಮಾರಾಟ ಹಾಗೂ ಊದುವುದಕ್ಕೆ ನಿಷೇಧ ಹೇರಲಾಗಿದೆ.ಸದ್ಯ ಪುಂಡರು ಇನ್ಯಾವ ಹೊಸ ರೂಪದಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರುವರೋ ಕಾದು ನೋಡಬೇಕಿದೆ