ವಾರ್ತಾ ಇಲಾಖೆ ಆಯುಕ್ತರು ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಜಾಹೀರಾತು ದರ ತಕ್ಷಣ ಹೆಚ್ಚಳ ಮಾಡಬೇಕು : ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಆಗ್ರಹ
ದಾವಣಗೆರೆ : ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯು ಮಾನ್ಯತೆ ಹೊಂದಿದ ಜಾಹೀರಾತು ಸಂಸ್ಥೆಗಳ ಮೂಲಕ ಬಿಡುಗಡೆ ಮಾಡುವ ಆಕರ್ಷಕ ಜಾಹೀರಾತುಗಳು ಮತ್ತು ಟೆಂಡರ್ ಹಾಗೂ ವರ್ಗೀಕೃತ ಜಾಹೀರಾತುಗಳ ಒಟ್ಟು ಬಿಲ್ಲಿನ ಮೊತ್ತದಲ್ಲಿ ಶೇ 15 ರಷ್ಟು ಕಮಿಷನ್ ಅನ್ನು ಎಜೆನ್ಸಿಗಳು ಕಡಿತಗೊಳಿಸುತ್ತಿವೆ.ಈ ರೀತಿ ಕಮಿಷನ್ ಕಡಿತಗೊಳಿಸಲು ಸರ್ಕಾರದ ಯಾವುದೇ ಆದೇಶ ಇರುವುದಿಲ್ಲ. ಕಾನೂನು ಬಾಹಿರವಾಗಿ ಶೇ 15 ರ ಕಮಿಷನ್ ಹಣ ಕಡಿತ ಮಾಡಿ ಪತ್ರಿಕೆಗಳಿಗೆ ಆರ್ಥಿಕ ನಷ್ಟ ಉಂಟಾಗಲು ವಾರ್ತಾ ಇಲಾಖೆ ಕಾರಣವಾಗಿದೆ ಎಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ದೂರಿದರು.
ಅವರು ಮಂಗಳವಾರ ನಗರದ ವರದಿಗಾರರ ಕೂಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ
ಐ ಎನ್ ಎಸ್ ( ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ )
ಸದಸ್ಯತ್ವ ಪಡೆದಿರುತ್ತವೆಯೋ ಅಂತಹ ಪತಿಕೆಗಳು ಮಾತ್ರ ಐ ಎನ್ ಎಸ್ ಸದಸ್ಯತ್ವ ಹೊಂದಿರುವ ಖಾಸಗಿ ವಿಜೆನ್ಸಿಗಳ ಮೂಲಕ ಪ್ರಕಟ ಮಾಡುವ ಜಾಹೀರಾತುಗಳ ಬಿಲ್ಲಿನ ಮೊತ್ತದಲ್ಲಿ ಶೇ 15 ಹಣ ಕಡಿತಗೊಳಿಸಲು ಅವಕಾಶ ಇರುತ್ತದೆ. ಶೇ.15ರಷ್ಟು ಕಮಿಷನ್
ಐಎನ್‌ಎಸ್ ಸದಸ್ಯತ್ವ ಪಡೆಯದ ಪತ್ರಿಕೆಗಳಿಗೆ ವಾರ್ತಾ ಇಲಾಖೆ ಏಜೆನ್ಸಿಗಳ ಮೂಲಕ ಬಿಡುಗಡೆ ಮಾಡುವ ಜಾಹೀರಾತುಗಳ ಬಿಲ್ಲಿನಲ್ಲಿ ಕಮಿಷನ್ ಹಣ ಕಡಿತಗೊಳಿಸದಂತೆ ಏಜೆನ್ಸಿಗಳಿಗೆ ಸೂಚನೆ ನೀಡಬೇಕೆಂದು ಕೋರಿ ಆದೇಶ ಹೊರಡಿಸಲು ಮಾನ್ಯ ಮುಖ್ಯಮಂತ್ರಿಗಳಿಗೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರಿಗೆ ಮತ್ತು ಇಲಾಖೆ ಆಯುಕ್ತರಿಗೆ ಸಂಘದಿಂದ ಮನವಿ ಮಾಡಲಾಗಿದೆ. ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲದಿರುವುದಕ್ಕೆ ರಾಜ್ಯಾಧ್ಯಕ್ಷರು ಬೇಸರ ವ್ಯಕ್ತಪಡಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಹಾಲೀ ಜಾಹೀರಾತು ದರಕ್ಕೆ ಶೇ 12 ರಷ್ಟು ಜಾಹೀರಾತು ದರವನ್ನು ಹೆಚ್ಚಳ ಮಾಡುವುದಕ್ಕೆ ಜಾಹೀರಾತು ನೀತಿ 2013 ಅನುಷ್ಟಾನ ನಿಯಮಗಳ 2014 ನಿಯಮ 14 ಟಿಪ್ಪಣಿ 3 ರ ಪ್ರಕಾರ ಇಲಾಖೆಯ ಆಯುಕ್ತರಿಗೆ ಅಧಿಕಾರ ಇರುತ್ತದೆ. ದಿನಾಂಕ:01-04-2021 ರಂದು ಜಾಹೀರಾತು ದರ ಹೆಚ್ಚಳ ಮಾಡಲಾಗಿದೆ. ದಿನಾಂಕ:01-04-2023 ಜಾಹೀರಾತು ದರ ಹೆಚ್ಚಳ ಮಾಡಬೇಕಾಗಿತ್ತು. ಆದರೆ ಇದುವರೆಗೆ ಜಾಹೀರಾತು ದರ ಹೆಚ್ಚಳ ಮಾಡದೇ ಆಯುಕ್ತರು ಮೀನಮೇಷ ಮಾಡುತ್ತಿದ್ದಾರೆ. ಈ ಕ್ರಮವನ್ನು ಸಂಘ ಖಂಡಿಸುತ್ತದೆ ಎಂದು ಹೇಳಿದರು.ಇನ್ನೂ ಮೂರು ತಿಂಗಳು ಕಳೆದರೆ ಶೇ.24 ರಷ್ಟು ಜಾಹೀರಾತು ದರ ಹೆಚ್ಚಳ ಮಾಡಬೇಕಾಗುತ್ತದೆ ಎಂದ ಅವರು ವಾರ್ತಾ ಇಲಾಖೆ ಆಯುಕ್ತರು ತಕ್ಷಣ ಜಾಹೀರಾತು ದರ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು.
ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಎಸ್ಸಿ/ಎಸ್ಟಿ/ಒಬಿಸಿ/ಬ್ರಾಹ್ಮಣ ಸಮುದಾಯದ 05 ವರ್ಷ ಪ್ರಕಟಣಾ ಅವಧಿ ಪೂರೈಸಿರುವ ಪತ್ರಿಕೆಗಳಿಗೆ ಸರ್ಕಾರದ ಪ್ರೋತ್ಸಾಹ ರೂಪದ 02 ಪುಟಗಳ ಜಾಹೀರಾತುಗಳನ್ನು ಪ್ರತಿ ತಿಂಗಳು ಇಲಾಖೆ ಬಿಡುಗಡೆ ಮಾಡುತ್ತಿದೆ. ಅದರಂತೆ 05 ವರ್ಷ ಒಳಗಿನ ಒಬಿಸಿ/ಬ್ರಾಹ್ಮಣ ಸಮುದಾಯದ ಪತ್ರಿಕೆಗಳಿಗೆ ಮಾಸಿಕ 01 ಪುಟ ಸರ್ಕಾರದ ಪ್ರೋತ್ಸಾಹ ರೂಪದ ಜಾಹೀರಾತನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮತ್ತು ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಸಂಘದ ಪದಾಧಿಕಾರಿಗಳು ಅಧಿಕಾರಿಗಳನ್ನು ಭೇಟಿ ಮಾಡಿ ವಿನಂತಿಸಿರುತ್ತೇವೆ. ಆದರೆ ಇಲಾಖೆ ಆಯುಕ್ತರು ಯಾವುದಕ್ಕೂ ಸ್ಪಂದಿಸಿಲ್ಲ. ಆಯುಕ್ತರ ನಡೆಯ ಬಗ್ಗೆ ಬೇಸರದ ತಂದಿದೆ ಎಂದು ಹೇಳಿದರು.
ಸಂಘ ನೋಂದಣಿ ಆದ ನಂತರ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಭೇಟಿ ನೀಡಿ ನಮ್ಮ ಸಂಘದ ಜಿಲ್ಲಾ ಘಟಕಗಳನ್ನು ರಚನೆ ಮಾಡಲಾಗಿದೆ. ವಾರ್ತಾ ಇಲಾಖೆಯಲ್ಲಿ ಸುಮಾರು 600ಕ್ಕಿಂತ ಹೆಚ್ಚಿನ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ಮಾಧ್ಯಮ ಪಟ್ಟಿಯಲ್ಲಿವೆ ಎಂದು ಎ.ಸಿ.ತಿಪ್ಪೇಸ್ವಾಮಿ ಮಾಹಿತಿ ನೀಡಿದರು.
ನಮ್ಮ ಸಂಘವು ರಚನೆಯಾಗಿ ಜನವರಿ 09, 2025 ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಗದಗದಲ್ಲಿ ಮಾನ್ಯ ಕಾನೂನು ಸಚಿವರಾದ ಹೆಚ್.ಕೆ. ಪಾಟೀಲ್ ಅವರ ಘನ ಅಧ್ಯಕ್ಷತೆಯಲ್ಲಿ ಸಂಘದ ರಾಜ್ಯ ಮಟ್ಟದ ” ಪ್ರಪ್ರಥಮ ಸಮ್ಮೇಳನ” ವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಮ್ಮೇಳನವನ್ನು
ಉದ್ಘಾಟಿಸುವುದಕ್ಕೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ. ಸಮ್ಮೇಳನದ ದಿನಾಂಕ ನೀಡುವಂತೆ ಕೋರಿ ಮುಖ್ಯಮಂತ್ರಿ ಅವರಿಗೆ ಮನವಿ ಕೂಡ ಸಲ್ಲಿಸಲಾಗಿದೆ. ಸಮ್ಮೇಳನದ ಅಂಗವಾಗಿ 100 ಪುಟಗಳ ಬಹುವರ್ಣದ ಸ್ಮರಣ ಸಂಚಿಕೆ ಹೊರತರುಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ಸರ್ಕಾರಿ, ಅರೆಸರ್ಕಾರಿ ಕಚೇರಿಗಳು ಆಯಾ ಜಿಲ್ಲಾ ವಾರ್ತಾ ಕಚೇರಿ ಮೂಲಕವೇ ಟೆಂಡರ್ ಮತ್ತು ವರ್ಗೀಕೃತ ಜಾಹೀರಾತುಗಳನ್ನು ಬಿಡುಗಡೆ ಮಾಡುವಂತೆ ಸೂಚನೆ ನೀಡಲು ನಮ್ಮ ಜಿಲ್ಲಾ ಘಟಕದ ಪದಾಧಿಕಾರಿಗಳ ಮೂಲಕ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಮನವಿಗಳಿಗೆ ಸ್ಪಂದಿಸಿದ ಡಿಸಿ, ಸಿಇಒ ಅವರು ತಮ್ಮ ವ್ಯಾಪ್ತಿಯ ಕಚೇರಿಗಳಿಗೆ ಸೂಚನೆ ನೀಡಿದ್ದಕ್ಕೆ ಎ.ಸಿ.ತಿಪ್ಪೇಸ್ವಾಮಿ ಧನ್ಯವಾದ ಸಲ್ಲಿಸಿದರು.
ಜಿಲ್ಲಾ ವಾರ್ತಾ ಕಚೇರಿಯಿಂದ ಪಾರದರ್ಶಕವಾಗಿ ಟೆಂಡರ್ ಬಿಡುಗಡೆಯಾಗುತ್ತಿಲ್ಲ. ತಾರತಮ್ಯ ಆಗುತ್ತದೆ. ಇದರ ಬಗ್ಗೆ ನಿಮ್ಮ ಸಂಘದ ನಿಲುವೇನು…? ಎಂದು ಹಿರಿಯ ವರದಿಗಾರ ನಾಗಾರಾಜ ಬಡದಾಳ ಕೇಳಿದ ಪ್ರಶ್ನೆಗೆ ಜಾಹೀರಾತು ನೀತಿ ನಿಯಮ 19 ಮತ್ತು ಸರ್ಕಾರದ 2017 ರ ತಿದ್ದುಪಡಿ ಆದೇಶದ ಪ್ರಕಾರ ಟೆಂಡರ್ ಗಳನ್ನು ಬಿಡುಗಡೆ ಮಾಡುವಂತೆ ವಾರ್ತಾ ಅಧಿಕಾರಿಗಳಿಗೆ ಕೂಡ ಮನವಿ ಸಲ್ಲಿಸಲಾಗಿದೆ ಎಂದು ಉತ್ತರಿಸಿದರು. ಟೆಂಡರ್ ಬಿಡುಗಡೆ
ಮಾಡುವಲ್ಲಿ ವಾರ್ತಾ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸಿದರೆ ಅಂತವರ ಮೇಲೆ ಇಲಾಖೆ ಆಯುಕ್ತರಿಗೆ ಸಂಘದಿಂದ ದೂರು ನೀಡಲಾಗುವುದೆಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ
ಎ.ಸಿ.ತಿಪ್ಪೇಸ್ವಾಮಿ,
ನಾಮನಿರ್ದೇಶನ ಸದಸ್ಯರಾದ
ಡಾ.ಬಿ.ವಾಸುದೇವ,
ಡಾ.ಕೆ.ಜೈಮುನಿ, ಜಿಲ್ಲಾಧ್ಯಕ್ಷ ಸುರೇಶ್ ಆರ್ ಕುಣಿಬೆಳಕೆರೆ,
ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಗೋವರ್ಧನ ಗಿರಿಶ್ಯಾಮ್ ಎನ್.ಆರ್, ಉಪಾಧ್ಯಕ್ಷ ಗಂಗರಾಜು.ಕೆ.ಆರ್, ಸಹ ಕಾರ್ಯದರ್ಶಿ ಮಾರಪ್ಪ ಎ.ಕೆ,
ಜಿಲ್ಲಾ ಖಜಾಂಚಿ
ಶಿವಮೂರ್ತಿ ಟಿ.ಜಿ,
ಕಾರ್ಯದರ್ಶಿ ಹೆಚ್.ವೆಂಕಟೇಶ್, ಸಹ ಕಾರ್ಯದರ್ಶಿ ನಂದನ್ ಕುಮಾರ್ , ಜಂಟಿ ಕಾರ್ಯದರ್ಶಿ ವಸಂತ್ ಕುಮಾರ್ ಜಿ.ಎಸ್ , ಪ್ರಜಾ ಮಿಡಿತ ಹನುಮಂತಪ್ಪ
ಉಪಸ್ಥಿತರಿದ್ದರು
*-: ಸಂಘದ ಬೇಡಿಕೆಗಳು :-*
1. ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ದಿನಾಂಕ:01-04-2023 ರಿಂದ ಹಾಲೀ ಜಾಹೀರಾತು ದರಕ್ಕೆ ಶೇ 12 ರಷ್ಟು ಜಾಹೀರಾತು ದರ ಹೆಚ್ಚಳ ಮಾಡಬೇಕು.
2. ಸರ್ಕಾರದ ಯಾವುದೇ ಆದೇಶ ಇಲ್ಲದೇ ಕಾನೂನು ಬಾಹಿರವಾಗಿ ಪತ್ರಿಕೆಗಳ ಜಾಹೀರಾತು ಬಿಲ್ಲುಗಳಲ್ಲಿ ಶೇ 15 ರಷ್ಟು ಕಮಿಷನ್ ಹಣವನ್ನು ಏಜೆನ್ಸಿಗಳು ಕಡಿತಗೊಳಿಸುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು.
3. 5 ವರ್ಷದ ಒಳಗಿನ ಒಬಿಸಿ / ಬ್ರಾಹ್ಮಣ ಸಮುದಾಯದ ಪತ್ರಿಕೆಗಳ ಏಳಿಗೆಗೆ ಸಹಕಾರ ನೀಡುವ ಹಿತದೃಷ್ಟಿಯಿಂದ ಸರ್ಕಾರ ಪ್ರೋತ್ಸಾಹ ರೂಪದ ಮಾಸಿಕ 01 ಪುಟದ ಜಾಹೀರಾತನ್ನು ವಾರ್ತಾ ಇಲಾಖೆಯಿಂದ ಬಿಡುಗಡೆ ಮಾಡುವುದಕ್ಕೆ ಸರ್ಕಾರ ಆದೇಶ ಹೊರಡಿಸಬೇಕು.
4. ಏಪ್ರಿಲ್ 2024 ರಿಂದ ಬಾಕಿ ಇರುವ / 2025ರ ಅಂತ್ಯದ ವರೆಗೆ ಬಿಡುಗಡೆಯಾಗುವ ಒಬಿಸಿ ಪತ್ರಿಕೆಗಳಿಗೆ / ಗಡಿಭಾಗದ ಪತ್ರಿಕೆಗಳಿಗೆ / ಬ್ರಾಹ್ಮಣ ಸಮುದಾಯದ ಪತ್ರಿಕೆಗಳ ಜಾಹೀರಾತು ಬಿಲ್ಲುಗಳನ್ನು ಪಾವತಿ ಮಾಡುವುದಕ್ಕೆ ಸುಮಾರು 65 ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನವನ್ನು ಸರ್ಕಾರ ವಾರ್ತಾ ಇಲಾಖೆಗೆ ಬಿಡುಗಡೆ ಮಾಡಬೇಕು.
5. ಸೆಪ್ಟೆಂಬರ್ 2024 ರಿಂದ ಬಾಕಿ ಇರುವ / 2025ರ ಅಂತ್ಯದವರೆಗೆ ಬಿಡುಗಡೆಯಾಗುವ ಎಸ್ಸಿ. ಸಮುದಾಯದ ಪತ್ರಿಕೆಗಳ ಜಾಹೀರಾತು ಬಿಲ್ಲುಗಳನ್ನು ಪಾವತಿ ಮಾಡುವುದಕ್ಕೆ ಸುಮಾರು 45 ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನವನ್ನು ಸರ್ಕಾರ ವಾರ್ತಾ ಇಲಾಖೆಗೆ ಬಿಡುಗಡೆ ಮಾಡಬೇಕು.