ಬೆಂಗಳೂರು:ರಾಜ್ಯದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಕಳೆದ ಎಂಟು ವರ್ಷಗಳಿಂದ ಅಧಿಕಾರ ನಡೆಸಿದ ಎಲ್ಲ ಅಧಿಕಾರಿಗಳು ಮತ್ತು ಗುತ್ತಿಗೆ ಏಜೆನ್ಸಿಗಳು ಭಾಗಿಯಾಗಿ ರಾಜ್ಯ ಸರಕಾರಕ್ಕೆ ಸರಿ ಸುಮಾರು ₹15 ಕೋಟಿ ನಷ್ಟವುಂಟು ಮಾಡಿದ್ದಾರೆಂದು ಆರೋಪಿಸಿರುವ ಕರುನಾಡ ಸೇವಕರು ಸಂಘಟನೆ ಎಂ.ಬಿ.ನಾಗಣ್ಣಗೌಡ, ಈ ಕುರಿತು ತನಿಖೆ ನಡೆಸುವಂತೆ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ರಾಜ್ಯ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಆಯುಕ್ತರು ಸೇರಿದಂತೆ ಸುಮಾರು 13 ಜನ ಅಧಿಕಾರಿಗಳ ವಿರುದ್ದ ದೂರು ಸಲ್ಲಿಸಿದ್ದು, ನಿಯಮಾನುಸಾರ ಕ್ರಮ ಜರುಗಿಸಿ ತಪ್ಪಿತಸ್ಥ ಅಧಿಕಾರಿಗಳಿಂದ ಸರಕಾರಕ್ಕೆ ಉಂಟಾಗಿರುವ ನಷ್ಟವನ್ನು ವಸೂಲು ಮಾಡುವಂತೆ ಹಾಗೂ ಈ ಹಗರಣಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ದ ತನಿಖೆ ನಡೆಸುವಂತೆ ಕೋರಿದ್ದಾರೆ.
ರಾಜ್ಯದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಖಾಲಿ ಇರುವ 1500 ಹಾಗೂ 756 ಹುದ್ದೆಗಳ ಸೇವೆಯನ್ನು ಹೊರಗುತ್ತಿಗೆ ಆಧಾರದಲ್ಲಿ ಪಡೆಯಲಾಗಿದೆ. ಈ ಸಂಬಂದ 5/01/2016ರಂದು ಹೊರಗುತ್ತಿಗೆ ಆಧಾರದಲ್ಲಿ ಸೇವೆ ಒದಗಿಸಲು ಕ್ರಮವಾಗಿ ಮೇ.ಆಬ್ಜೆಕ್ಟ್ ಟೆಕ್ನಾಲಜೀಸ್ ಬೆಂಗಳೂರು, ಮೇ. ಮಾತಾ ಟೆಕ್ನಾಲಜೀಸ್ ಧಾರವಾಡ ಎಂಬ ಎರಡು ಏಜೆನ್ಸಿಗಳಿಗೆ ಸೇವೆ ಒದಗಿಸಲು ಶೇ11.5ರ ದರದಲ್ಲಿ ಸೇವಾ ಶುಲ್ಕ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಎರಡು ಏಜೆನ್ಸಿಗಳ ಮೂಲ ಮಾಲೀಕರು ಒಂದೇ ಹಿನ್ನೆಲೆಯವರು ಎನ್ನಲಾಗಿದೆ ಎಂದು ದೂರಿದ್ದಾರೆ.
ಹೊರಗುತ್ತಿಗೆ ಸೇವೆ ಪಡೆಯುವ ಸಂಬಂಧ ಸರ್ಕಾರದ ಕಾರ್ಯದರ್ಶಿಗಳು, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಆಯುಕ್ತರು, ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಬರೆದಿರುವ ಪತ್ರ ಸಂಖ್ಯೆ :ಪಸಂಮೀ 255 ಪ ಅ ಸೇ 2015.ರ ಕ್ರಮ ಸಂಖ್ಯೆಯಲ್ಲಿ ಸ್ಪಷ್ಟವಾಗಿ ನೀಡಿರುವ ನಿರ್ದೇಶನದಲ್ಲಿ ಕರ್ನಾಟಕ ಪಾರದರ್ಶಕ ನಿಯಮ 1999 ಮತ್ತು 2000 ರಂತೆ ನಿಯಮಾನುಸಾರ ಸೂಕ್ತವಾದ ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ಟೆಂಡರ್ ಕರೆದು ಸರ್ಕಾರದಿಂದ ಮುಂದಿನ ನೇರನೇಮಕಾತಿ ಆಗುವವರೆಗೆ ಟೆಂಡರ್ ನ್ನು ನೀಡುವುದು ಎಂದು ನಿರ್ದೇಶನ ನೀಡಿರುತ್ತಾರೆ. ನೇರ ನೇಮಕಾತಿ ನಡೆಸುವುದು ಸರಕಾರದ ವ್ಯಾಪ್ತಿಗೆ ಒಳಪಟ್ಟ ವಿಷಯವಾಗಿದ್ದು, ಮುಂದಿನ ನೇರ ನೇಮಕಾತಿವರೆಗೆ ಟೆಂಡರ್ ನೀಡುವುದು ಎಂದರೆ ವರ್ಷಗಟ್ಟಲೆ ಯಾವುದೆ ಟೆಂಡರ್ ನಡೆಸದೆ ಎರಡು ಏಜೆನ್ಸಿಗಳನ್ನು ನಿರಂತರವಾಗಿ ಮುಂದುವರಿಸಿ ಎಂದು ಅರ್ಥವಲ್ಲ. ಬದಲಿಗೆ ಮುಂದಿನ ನೇರನೇಮಕಾತಿವರೆಗೆ ಹೊರಗುತ್ತಿಗೆ ಮೂಲಕ ಮಾನವ ಸಂಪನ್ಮೂಲ ಪಡೆಯಿರಿ ಎಂದಾಗಿರುತ್ತದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸರಕಾರ ತನ್ನ ಆದೇಶದಲ್ಲಿ ಸ್ಪಷ್ಟ ನಿರ್ದೇಶನ ನೀಡಿದ್ದದೂ ಆದೇಶವನ್ನು ತಿರುಚಿ ಮುಂದಿನ ನೇರ ನೇಮಕಾತಿವರೆಗೆ ಈ ಮೇಲ್ಕಂಡ ಏಜೆನ್ಸಿಗಳಿಗೆ ಟೆಂಡರ್ ಮುಂದುವರಿಸಲಾಗಿದೆ. ಕೆಟಿಪಿಪಿ ನಿಯಮದ ಪ್ರಕಾರ ಪ್ರತಿ ಮಾರ್ಚ್ ನಲ್ಲಿ ಟೆಂಡರ್ ನಡೆಸಬೇಕಿರುತ್ತದೆ. ಆದರೆ ಈ ಪ್ರಕರಣದಲ್ಲಿ ಅಧಿಕಾರಿಗಳು ಶಾಮೀಲಾಗಿ ಕಳೆದ ಏಳು ವರ್ಷಗಳಿಂದ ಯಾವುದೆ ಟೆಂಡರ್ ನಡೆಸದೆ ಮೆಲ್ಕಂಡ ಏಜೆನ್ಸಿಗಳಿಗೆ ಟೆಂಡರ್ ಮುಂದುವರಿಸಲಾಗಿದೆ. ಇದಲ್ಲದೆ ಶೇ.5ರ ಸೇವಾ ಶುಲ್ಕದ ಒಳಗೆ ಹೊರಗುತ್ತಿಗೆ ಸೇವೆ ಒದಗಿಸುವ ಸಾಕಷ್ಟು ಹೊರಗುತ್ತಿಗೆ ಏಜೆನ್ಸಿಗಳು ಲಭ್ಯವಿದ್ದರೂ, ಈ ಕುರಿತು ಕ್ರಮವಹಿಸದೆ ಸರಕಾರದ ನಿರ್ದೇಶನಗಳನ್ನು ತಿರುಚಿ ಸದರಿ ಏಜೆನ್ಸಿಗಳಿಗೆ ಶೇ11.5ರ ದುಬಾರಿ ಸೇವಾ ಶುಲ್ಕ ನೀಡುತ್ತಾ ಬರಲಾಗಿದೆ ಎಂದು ಅವರು ದೂರಿದ್ದಾರೆ.