Sunday, December 22, 2024
spot_img

ಮಂಡ್ಯ: ಕಾಂಗ್ರೇಸ್ ಕುದುರೆ ಕಟ್ಟಿಹಾಕಲು ಕುಮಾರಸ್ವಾಮಿಯೆ ಜ್ಯಾದಳಕ್ಕೆ’ಗಟ್ಟಿ!

ಮಂಡ್ಯ ಲೋಕಸಭಾ ಕ್ಷೇತ್ರ:ಜ್ಯಾದಳಕ್ಕೆ ಕುಮಾರಸ್ವಾಮಿಯೆ ‘ಗಟ್ಟಿ!


ಕಳೆದ ಲೋಕಸಭಾ ಚುನಾವಣಾ ಕಾಲಕ್ಕೆ ಇಡೀ ದೇಶದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರ ಈ ಸಾರಿ ಇನ್ನು ಸಪ್ಪೆಯಾಗಿಯೆ ಇದೆ.ಇದಕ್ಕೆ ಕಾರಣ ಜ್ಯಾದಳ ಬಿಜೆಪಿ ಮೈತ್ರಿ ಅಭ್ಯರ್ಥಿ ಯಾರೆಂಬುದು ಸ್ಪಷ್ಟವಾಗಿಲ್ಲದಿರುವುದು ಒಂದು ಕಾರಣವಾಗಿದೆ.ಜಿಲ್ಲೆಯಲ್ಲಿ ಜ್ಯಾದಳದ ಪಕ್ಷ ಸಂಘಟನೆ ಗಟ್ಟಿ ಇರುವ ಕಾರಣ ಮೊದಲೆ ಎಚ್ಚೆತ್ತ ಕಾಂಗ್ರೆಸ್ ಪಕ್ಷ ಎಲ್ಲರಿಗಿಂತ ಮೊದಲೆ ತನ್ನ ಅಭ್ಯರ್ಥಿ ಸ್ಟಾರ್ ಚಂದ್ರುವನ್ನು ಘೋಷಿಸಿ ಇಡೀ ಲೋಕಸಭಾ ಕ್ಷೇತ್ರದಾದ್ಯಂತ ಪರಿಚಯಿಸಿತು.

ಆದರೆ ಬಿಜೆಪಿಯೊಂದಿಗೆ ಮೈತ್ರಿ ಕಟ್ಟಿಕೊಂಡ ದಳಪತಿಗಳಿಗೆ ಹಾಸನದಂತೆ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆ ಸಾಧ್ಯವಾಗಲಿಲ್ಲ.ಕಾರಣ ಜ್ಯಾದಳದಲ್ಲಿ ಇದ್ದೊಬ್ಬ ಜಿಲ್ಲಾ ನಾಯಕ ಚಲುವರಾಯಸ್ವಾಮಿ ಕಾಂಗ್ರೆಸ್ ಪಾಲಾದ ಮೇಲೆ ಜ್ಯಾದಳಕ್ಕೆ ಇಲ್ಲಿ ಜಿಲ್ಲಾ ನಾಯಕರು ಅಂತಾ ಯಾರೂ ಇಲ್ಲವಾಗಿದೆ.ಎಸ್ ಡಿ‌ ಜಯರಾಂ ನಂತರ ಚಲುವರಾಯಸ್ವಾಮಿ ಸ್ವಲ್ಪ ಮಟ್ಟಿಗೆ ಆ ಸ್ಥಾನ ತುಂಬುವ ಪ್ರಯತ್ನದ ನಡುವೆ ಪಕ್ಷದ ಆಚೆ ಹೊರಟರು.

ಇನ್ನು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಭಾವ್ಯ ಅಭ್ಯರ್ಥಿ ಎನ್ನಲಾಗುತ್ತಿರುವ ಸಿಎಸ್ ಪುಟ್ಟರಾಜರು ಒಮ್ಮೆ ಸಂಸದರಾಗಿ ರಾಜ್ಯ ಸರಕಾರದಲ್ಲಿ ಮಂತ್ರಿಯಾಗಿದ್ದರು ಅವರ ವರ್ಚಸ್ಸು ಮೇಲುಕೋಟೆ ಕ್ಷೇತ್ರ ಬಿಟ್ಟು ಆಚೆಗೆ ಬೆಳೆದಿಲ್ಲ.

ಅದಕ್ಕೆ ಇನ್ನು ಒಂದು ಕಾರಣ ಜಿಲ್ಲೆಯ ಜ್ಯಾದಳ ಕಾರ್ಯಕರ್ತರು ನೇರವಾಗಿ ಕುಮಾರಸ್ವಾಮಿ ದೇವೆಗೌಡರೊಂದಿಗೆ ಸಂಪರ್ಕ ಇಟ್ಟುಕೊಂಡಿರುವುದು ಎಲ್ಲದಕ್ಕು ದೊಡ್ಡ ಗೌಡರ ಸೂಚನೆಯನ್ನೆ ಕಾಯುವುದರಿಂದ ಸ್ಥಳೀಯ ನಾಯಕತ್ವ ಬೆಳೆಯಲು ಸಾಧ್ಯವಾಗಿಲ್ಲ.ಪುಟ್ಟರಾಜು ಈಗಾಗಲೇ ಸಂಸದರಾಗಿದ್ದಾಗಲು ಹೇಳಿಕೊಳ್ಳುವಂಥ ಕೆಲಸಗಳಾಗಿಲ್ಲ ಎಂಬ ಅಭಿಪ್ರಾಯ ಸ್ವತಃ ಜ್ಯಾದಳ ನಾಯಕರೆ ವ್ಯಕ್ತಪಡಿಸುತ್ತಾರೆ. ಕಳೆದ ಮೈತ್ರಿ ಸರಕಾರದಲ್ಲಿ ಮಂಡ್ಯ ಕ್ಷೇತ್ರದ ಅನುದಾನವನ್ನು ತನ್ನ ಮೇಲುಕೋಟೆ ಕ್ಷೇತ್ರಕ್ಕೆ ಕೊಂಡೊಯ್ದ ಅಪಾದನೆ ಜತೆಗೆ ದಳದ ಇನ್ನುಳಿದ ಮಾಜಿ ಶಾಸಕರ ಜತೆ ಪುಟ್ಟರಾಜು ಸಂಬಂದ ಹಳಸಿದೆ ಎಂಬ ಮಾತಿದೆ.ಇಂತಿರುವಾಗ ಪುಟ್ಟರಾಜು ಜ್ಯಾದಳ ಹುರಿಯಾಳಾದರೆ ಗೆಲ್ಲೊದು ಇರಲಿ ಕನಿಷ್ಟ ಸ್ಪರ್ಧೆಯು ಕಷ್ಟವಾಗಲಿದೆ ಎಂಬ ಅತಂಕ ದಳಪತಿಗಳಿಗಿದೆ.
ಇನ್ನು ಜ್ಯಾದಳದ ಯುವ ರಾಜಕುಮಾರ ನಿಖಿಲ್ ಕುಮಾರಸ್ವಾಮಿ ಯನ್ನು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಇಳಿಸುವ ಆಲೋಚನೆಯು ದಳಪತಿಗಳಿಗಿದೆ.ಈಗಾಗಲೇ ಮಂಡ್ಯ ರಾಮನಗರದಲ್ಲಿ ಸತತ ಎರಡು ಸೋಲುಗಳನ್ನು ಕಂಡಿರುವ ನಿಖಿಲ್ ಕಳೆದ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಭಾರೀ ಅಂತರದ ಸೋಲು ಕಂಡಿದ್ದರು.ನಂತರ ಮಂಡ್ಯದಲ್ಲೆ ಮನೆ ಮಾಡಿ ಇಲ್ಲಿನ ಜನರ ಸೇವೆ ಮಾಡುವುದಾಗಿ‌ ಹೇಳಿದ ನಂತರ ಇತ್ತ ತಲೆ ಹಾಕಲಿಲ್ಲ.ಅಲ್ಲೊಂದು ಇಲ್ಲೊಂದು ಕಾರ್ಯಕ್ರಮಕ್ಕೆ ಬಂದು ಹೋದದ್ದು ಹೊರತುಪಡಿಸಿ.ಇಂತಹ ವೇಳೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸಿ ಸೋಲನ್ನಪ್ಪಿದರೆ ಹ್ಯಾಟ್ರಿಕ್ ಸೋಲಾಗಲಿದೆ.ಇದು ಭವಿಷ್ಯದ ದಿನಗಳಲ್ಲಿ ನಿಖಿಲ್ ಭವಿಷ್ಯ ಬದಿಗೆ ಸರಿಯಬಹುದು.ಹೀಗೆ ಮಂಡ್ಯದಲ್ಲಿ ಕಾಂಗ್ರೆಸ್ ಎದುರು ಜ್ಯಾದಳ ಬಿಜೆಪಿ ಮೈತ್ರಿ ಯಾರೆಂಬುದು ಸ್ವತಃ ಜ್ಯಾದಳ ನಾಯಕರು ಕಾರ್ಯಕರ್ತರಿಗೆ ಕಗ್ಗಂಟಾಗತೊಡಗಿದೆ.ಸ್ವತಃ ಜ್ಯಾದಳ ಕಾರ್ಯಕರ್ತರ ಉತ್ಸಾಹ ಕುಗ್ಗಿಸಿದೆ.

ಇದಲ್ಲದೆ ಜ್ಯಾದಳದಿಂದ ಸಿಡಿದೆದ್ದು ಬಿಜೆಪಿಯಲ್ಲಿ ಭವಿಷ್ಯ ಕಂಡುಕೊಂಡಿರುವ ಮಾಜಿ ಸಚಿವ ಕೆ.ಸಿ.ನಾರಯಣಗೌಡ ಸಾದೊಳಲು ಸ್ವಾಮಿ ಇವರೆಲ್ಲ ಎಷ್ಟರಮಟ್ಟಿಗೆ ಮೈತ್ರಿ ಅಭ್ಯರ್ಥಿ ಬೆನ್ನಿಗೆ ನಿಲ್ಲಲಿದ್ದಾರೆ ಎಂಬ ಪ್ರಶ್ನೆಯು ಇದೆ.

ಸದ್ಯ ರಾಮನಗರ ಜಿಲ್ಲೆಯ ನಾಲ್ಕರ ಪೈಕಿ ಒಂದು ಸ್ಥಾನದಲ್ಲಷ್ಟೆ ಸ್ವತಃ ಜ್ಯಾದಳ ರಾಜ್ಯಧ್ಯಕ್ಷ ಕುಮಾರಸ್ವಾಮಿ ಪವಡಿಸಿದ್ದಾರೆ.ಅದನ್ನು ಬಿಟ್ಟು ಸ್ಟಾರ್ ಚಂದ್ರು ಎಂಬ ಕಾಂಗ್ರೆಸಿಗರು ಹೂಡಿರುವ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಲು ಚನ್ನಪಟ್ಟಣದಿಂದ ಕುಮಾರಸ್ವಾಮಿಯೆ ಧಾವಿಸಿದರೆ ರಾಮನಗರದ ರಾಜಕೀಯ ಹಿಡಿತವು ತಪ್ಪುವ ಸಾಧ್ಯತೆಯಿದೆ.ಅಲ್ಲೀ ಮತ್ತೊಂದು ಉಪಚುನಾವಣೆ ಸಿಪಿ ಯೋಗೇಶ್ವರ್ ರನ್ನು ಬೆಂಬಲಿಸುವ ಅನಿವಾರ್ಯತೆ ಕುಮಾರಸ್ವಾಮಿಗಿದೆ.

ಇಂತಹ ಸಂದಿಗ್ದದಲ್ಲಿ ಸಿಲುಕಿರುವ ಕುಮಾರಸ್ವಾಮಿ ಈ ಸಾರಿ ಮತ್ತೊಂದು ಸಂಕಷ್ಟಕ್ಕೆ ಬೀಳಲಿದ್ದಾರೆ.ಕುಮಾರಸ್ವಾಮಿ ಕೇಂದ್ರಕ್ಕೆ ಹೊರಟುನಿಂತರೆ ವಿಧಾನಸೌಧದಲ್ಲಿ ಜ್ಯಾದಳದ ದನಿ ಅಡಗಲಿದೆ.ಎಚ್ ಡಿ ರೇವಣ್ಣ ಕಾಂಗ್ರೆಸ್ಸಿಗರ ಜತೆ ಗಳಸ್ಯ ಕಂಠಸ್ಯವಾಗಿರುವುದರಿಂದ ಅವರಿಂದ ಕಾಂಗ್ರೆಸ್ ವಿರುದ್ದ ಯಾವುದೆ ಹೋರಾಟ ನಿರೀಕ್ಷಿಸುವಂತಿಲ್ಲ.ಹಾಗೆಂದು ಮಂಡ್ಯ ಕ್ಷೇತ್ರದಲ್ಲಿ ಇನ್ಯಾರಿಗೋ ಟಿಕೇಟ್ ಕೊಟ್ಟು ಮಂಡ್ಯ ಕ್ಷೇತ್ರ ಕಳೆದುಕೊಂಡರೆ ಜ್ಯಾದಳದ ರಾಜಕೀಯ ಪತನ ಮಂಡ್ಯದಿಂದಲೆ ಆರಂಭವಾಗಲಿದೆ.ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಸೋಲಿನೊಂದಿಗೆ ಕುಮಾರಸ್ವಾಮಿಯ ಸರಕಾರದ ಪತನಕ್ಕೆ ನಾಂದಿಯಾಯಿತು. ಈ ಸಾರಿ ಹಾಸನ ಮಂಡ್ಯ. ಸೋಲು ಗೆಲುವುಗಳು ಜ್ಯಾದಳದ ಅಸ್ತಿತ್ವವನ್ನು ನಿರ್ಧರಿಸಲಿದೆ.ಜ್ಯಾದಳದ ಅಸ್ತಿತ್ವಕ್ಕಾಗಿ ಕುಮಾರಸ್ವಾಮಿ ಮಂಡ್ಯದಲ್ಲಿ ಕಣಕಿಳಿಯುವ ಅನಿವಾರ್ಯತೆ ಸೃಷ್ಟಿಯಾಗಿದೆ.ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದ ಹುರಿಯಾಳಾದರಷ್ಟೆ ಇಲ್ಲಿ ಜ್ಯಾದಳ ಕಾರ್ಯಕರ್ತರು. ನಾಯಕರು ಒಗ್ಗೂಡಿ ಕೆಲಸ ಮಾಡಿ ದಳವನ್ನು ದಡ ತಲುಪಿಸಬಲ್ಲರು.ಜತೆಗೊಂದಿಷ್ಟು ಮೋದಿ ಭಕ್ತರು ಎಲ್ಲರು ಸೇರಿ ಜ್ಯಾದಳಕ್ಕೆ ಜೀವ ತರಬಲ್ಲರು.ಬಹುತೇಕ ದಳಪತಿಗಳಿಗೆ ಇದರ ಹೊರತು ಅನ್ಯ ದಾರಿ ಇಲ್ಲದಂತಾಗಿದೆ.

ಈಗಾಗಲೇ ಒಂದು ಸುತ್ತು ಕ್ಷೇತ್ರ ಪ್ರವಾಸ ಮಾಡಿರುವ ಕಾಂಗ್ರೆಸ್ ಹುರಿಯಾಳು ಸ್ಟಾರ್ ಚಂದ್ರು ಆರ್ಥಿಕವಾಗಿ ದಷ್ಡಪುಷ್ಟವಾಗಿದ್ದು ಎಂಟರಲ್ಲಿ ಏಳು ಜನ ಕಾಂಗ್ರೆಸ್ ಶಾಸಕರು ಗ್ಯಾರಂಟಿ ಯೋಜನೆಗಳ ಬೆಂಬಲದೊಂದಿಗೆ ಬೀಗುತ್ತಿದ್ದಾರೆ.ಸ್ಟಾರ್ ಚಂದ್ರುಗೆ ಟಫ್ ಫೈಟ್ ನೀಡುವ ಯಾವ ಕಲಿಯೂ ಸದ್ಯಕ್ಕೆ ಜ್ಯಾದಳದಲ್ಲಿ ಇಲ್ಲದ್ದರಿಂದ ಕುಮಾರಸ್ವಾಮಿಯೆ ಕಣಕಿಳಿಯುವ ಸಾಧ್ಯತೆ ಹೆಚ್ಚಿದೆ.ಇವೆಲ್ಲದಕ್ಕು ವಾರಪ್ಪೊತ್ತಿನಲ್ಲಿ ಉತ್ತರ ಸಿಗಲಿದೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!