ಶಿವಮೊಗ್ಗ: ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿ ಲೆಕ್ಕ ವಿಭಾಗದ ಕಚೇರಿ ವ್ಯವಸ್ಥಾಪಕನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿ ಲೆಕ್ಕ ವಿಭಾಗದ ಕಚೇರಿ ವ್ಯವಸ್ಥಾಪಕ ಎಸ್.ಆರ್.ಸಿದ್ದೇಶ್ 10 ಸಾವಿರ ರೂ. ಲಂಚದ ಹಣ ಪಡೆಯುತ್ತಿದ್ದಾಗ ರೆಡ್ ಹಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಸುನಿಲ್ ಕುಮಾರ್ ಎಂಬವರು ಮಹಾನಗರ ಪಾಲಿಕೆ ಆವರಣದ ಇಂಜಿನಿಯರ್ ಕಟ್ಟಡದ ಮೇಲ್ಭಾಗದಲ್ಲಿ ಶೆಡ್ ನಿರ್ಮಾಣಕ್ಕೆ ಗುತ್ತಿಗೆ ಪಡೆದಿದ್ದರು. 2024ರ ಡಿಸೆಂಬರ್‌ನಲ್ಲಿ ಶೆಡ್ ಪೂರ್ಣಗೊಂಡಿದ್ದು ಹಣ ಮಂಜೂರು ಮಾಡುವಂತೆ ಬಿಲ್ ಸಲ್ಲಿಸಿದ್ದರು. ಕಾಮಗಾರಿಯ ಒಟ್ಟು ಮೊತ್ತದಲ್ಲಿ 4 ಪರ್ಸೆಂಟ್ ಕಮಿಷನ್ ಹಣ ನೀಡಿದರೆ ಬಿಲ್ ಮಂಜೂರು ಮಾಡುವುದಾಗಿ ಸಾಮಾನ್ಯ ನಿಧಿ ಲೆಕ್ಕ ವಿಭಾಗದ ಕಚೇರಿ ವ್ಯವಸ್ಥಾಪಕ ಸಿದ್ದೇಶ್ ಬೇಡಿಕೆ ಇಟ್ಟಿದ್ದ ಎಂದು ಲೋಕಾಯುಕ್ತ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 11,500 ರೂ. ಹಣಕ್ಕೆ ಸಿದ್ದೇಶ್ ಬೇಡಿಕೆ ಇಟ್ಟಿದ್ದು, ಗುರುವಾರ 10 ಸಾವಿರ ರೂ. ಹಣ ಪಡೆಯುವ ಸಂದರ್ಭ ದಾಳಿ ನಡೆಸಿ ಬಂಧಿಸಲಾಗಿದೆ.
ಲೋಕಾಯುಕ್ತ ಎಸ್‌ಪಿ ಮಂಜುನಾಥ್ ಚೌಧರಿ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ. ಲೋಕಾಯುಕ್ತ ಇನ್ಸ್‌ಪೆಕ್ಟರ್ ಹೆಚ್.ಎಸ್.ಸುರೇಶ್, ವೀರಬಸಪ್ಪ ಎಲ್.ಕುಸಲಾಪುರ ದಾಳಿ ನೇತೃತ್ವ ವಹಿಸಿದ್ದರು. ಸಿಬ್ಬಂದಿ ಯೋಗೇಶ್.ಜಿ.ಸಿ., ಟೀಕಪ್ಪ.ಎನ್.ಬಿ., ಮಂಜುನಾಥ್.ಎಂ., ಸುರೇಂದ್ರ ಹೆಚ್.ಜಿ., ಬಿ.ಟಿ ಚನ್ನೇಶ, ಪ್ರಶಾಂತ್ ಕುಮಾರ್, ದೇವರಾಜ್.ವಿ., ಅರುಣ್ ಕುಮಾರ್, ಆದರ್ಶ, ಪ್ರಕಾಶ್, ಅಂಜಲಿ, ಪ್ರದೀಪ್, ಗೋಪಿ ವಿ, ಜಯಂತ್, ಗಂಗಾಧರ.ಬಿ.ಕೆ., ತರುಣ ಕುಮಾರ್.ಎ.ಎನ್ ದಾಳಿಯಲ್ಲಿ ಭಾಗವಹಿಸಿದ್ದರು.