ಲಂಚಕ್ಕೆ ಬೇಡಿಕೆ: ಮಂಡ್ಯ ಅಬಕಾರಿ ಉಪ ಆಯುಕ್ತ ನಾಗಶಯನ ಅಮಾನತು
ಮಂಡ್ಯ (ಫೆ. 4): ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿದ್ದ ಭ್ರಷ್ಟಾಚಾರದ ಮತ್ತೊಂದು ಮುಖ ಬಯಲಾಗಿದ್ದು, ಲಂಚದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಬಕಾರಿ ಉಪ ಆಯುಕ್ತ (ಡಿಸಿ) ನಾಗಶಯನ ಅವರನ್ನು ಆಳಿಕೆ ಅಮಾನತುಗೊಳಿಸಿ ಆದೇಶಿಸಿದೆ.
ಕೆ.ಆರ್. ಪೇಟೆಯ ಸೋಮನಹಳ್ಳಿ ಗ್ರಾಮದಲ್ಲಿ ಹೊಸದಾಗಿ ಸಿಎಲ್-7 ಬಾರ್ ತೆರೆಯಲು ಸುಂದರ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಈ ಲೈಸೆನ್ಸ್ ನೀಡಲು ನಾಗಶಯನ 60 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ನ್ಯಾಯಾಲಯದ ಆದೇಶವಿದ್ದರೂ ಸಹ ಸಣ್ಣಪುಟ್ಟ ನೆಪಗಳನ್ನು ಹೇಳಿ ಪದೇ ಪದೇ ಅರ್ಜಿಯನ್ನು ವಜಾ ಮಾಡಲಾಗುತ್ತಿತ್ತು. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆಡಿಯೋ ಸಮೇತ ಸುಂದರ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಕಳೆದ ಒಂದು ವರ್ಷದಿಂದ ಸುಂದರ್ ನಡೆಸುತ್ತಿದ್ದ ನಿರಂತರ ಹೋರಾಟ ಮತ್ತು ಈ ವಿಚಾರ ರಾಜ್ಯ ಸದನದಲ್ಲೂ ಚರ್ಚೆಯಾದ ಹಿನ್ನೆಲೆಯಲ್ಲಿ ಆಳಿಕೆ ಈ ಕಠಿಣ ಕ್ರಮ ಕೈಗೊಂಡಿದೆ. ಅಬಕಾರಿ ಇಲಾಖೆಯ ಈ ‘ಲಂಚಾವತಾರ’ ಈಗ ಜಿಲ್ಲಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.


