ಶಿರಸಿ: ನಗರದಲ್ಲಿನ ಜಾಗದ ಪ್ರಕರಣಕ್ಕೆ ಸಂಬಂಧಿಸಿ ₹3 ಲಕ್ಷ ಲಂಚ ಪಡೆಯುವಾಗ ನಗರಸಭೆ ಬಿಜೆಪಿ ಸದಸ್ಯ ಗಣಪತಿ ನಾಯ್ಕ ಮತ್ತು ನಗರಸಭೆ ಕಂದಾಯ ಅಧಿಕಾರಿ ಆರ್.ಎಂ.ವೇರ್ಣೇಕರ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬುಧವಾರ ನಡೆದಿದೆ.
ನಗರದ ವಿಕಾಸಾಶ್ರಮ ಮೈದಾನದ ಸಮೀಪದ ಜಾಗದ ವಿಷಯಕ್ಕೆ ಸಂಬಂಧಪಟ್ಟಂತೆ ರಮೇಶ ಹೆಗಡೆ ಎಂಬುವವರಿಂದ ₹3 ಲಕ್ಷ ಲಂಚ ಪಡೆಯುತ್ತಿರುವ ಸಂದರ್ಭದಲ್ಲಿ ಎಪಿಎಂಸಿ ಹತ್ತಿರ ಇರುವ ಜಿಯೋ ಕಚೇರಿ ಬಳಿ ಲೋಕಾಯುಕ್ತ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಸಿಕ್ಕಿ ಬಿದ್ದಿದ್ದಾರೆ.
ಗಣಪತಿ ನಾಯ್ಕ ಇತ್ತೀಚೆಗೆ ನಗರಸಭೆಗೆ ಸೇರಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪೈಪ್ ಕಳ್ಳತನ ಆರೋಪವನ್ನು ಕೂಡ ಎದುರಿಸುತ್ತಿದ್ದಾರೆ. ಲೋಕಾಯುಕ್ತ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್ಪಿ ಕುಮಾರಚಂದ, ಡಿಎಸ್ಪಿ ಧನ್ಯಾ ನಾಯಕ, ಸಿಪಿಐ ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.