ವಿಜಯಪುರ ಪಾಲಿಕೆಯ 35 ಸದಸ್ಯರ ಅನರ್ಹತೆ ವಿಚಾರಣೆ: ಏ. 4ಕ್ಕೆ ಮುಂದೂಡಿಕೆ
ಕಲಬುರಗಿ: ವಿಜಯಪುರ ಮಹಾನಗರ ಪಾಲಿಕೆಯ 35 ಸದಸ್ಯರ ಅನರ್ಹತೆ ವರದಿ ವಿಚಾರಣೆಯನ್ನು ಕಲಬುರಗಿ ಹೈಕೋರ್ಟ್ ಖಾಯಂ ಪೀಠದ ನ್ಯಾಯಮೂರ್ತಿ ಡಾ. ಚಿಲಕೂರು ಸುಮಲತಾ ಅವರಿದ್ದ ಏಕಸದಸ್ಯ ಪೀಠ ಏಪ್ರಿಲ್ 4ಕ್ಕೆ ಮುಂದೂಡಿತು.
ವಿಜಯಪುರ ಮಹಾನಗರ ಪಾಲಿಕೆಯ ಪ್ರಸಕ್ತ ಅವಧಿಯ 35 ಸದಸ್ಯರು ತಮ್ಮ ಆಸ್ತಿ ವಿವರ ಸಲ್ಲಿಸಿರುವುದಿಲ್ಲ, ಅಧಿಕಾರ ಸ್ವೀಕರಿಸಿ ಒಂದು ತಿಂಗಳಳೊಳಗಾಗಿ ಸದಸ್ಯರ ಮತ್ತು ಅವರ ಕುಟುಂಬಸ್ಥರ ಆಸ್ತಿ ವಿವರ ಸಲ್ಲಿಸದಿರುವ ಕಾರಣಕ್ಕಾಗಿ ಕರ್ನಾಟಕ ಮುನ್ಸಿಪಲ್ ಕಾಯ್ದೆ ಕಲಂ 19ರ ನಿಯಮ ಉಲ್ಲಂಘನೆಯಾಗಿದೆ. ತಕ್ಷಣಕ್ಕೆ ಅವರ ಸದಸ್ಯತ್ವ ರದ್ದುಪಡಿಸಬೇಕು ಎಂದು ಕೋರಿ ಮಾಜಿ ಕಾರ್ಪೋರೇಟರ್‌ಗಳಾದ ಮೈನೋದ್ದಿನ್ ಬೀಳಗಿ, ಪ್ರಕಾಶ ಮಿರ್ಜಿ ಅವರು ಪಾಲಿಕೆ ಆಯುಕ್ತರು ಹಾಗೂ ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿದರು.
ನಂತರ ದೂರುದಾರರು ಕಲಬುರಗಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಕ್ರಮ ಜರುಗಿಸುವಂತೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ರಿಟ್ ಅರ್ಜಿ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಂಡು ಏಪ್ರಿಲ್ 4ಕ್ಕೆ ಮುಂದೂಡಿದರು. ಕಾರ್ಪೋರೇಟರ್‌ಗಳ ಪರವಾಗಿ ಹಿರಿಯ ನ್ಯಾಯವಾದಿಗಳಾದ ಅಮಿತಕುಮಾರ ದೇಶಪಾಂಡೆ, ಕಾಡ್ಲೂರ್ ಸತ್ಯನಾರಾಯಣ ಆಚಾರ್ಯ, ಮನ್ವೆಂದ್ರ ರಡ್ಡಿ ವಾದ ಮಂಡಿಸಿದರು. ಸರ್ಕಾರದ ಪರವಾಗಿ ಹೆಚ್ಚುವರಿ ಜನರಲ್ ಅಡ್ವಕೇಟ್ ಹಾಗೂ ಮಹಾನಗರ ಪಾಲಿಕೆ ಪರವಾಗಿ ವಕೀಲ ಸಚಿನ್ ಮಹಾಜನ ವಾದ ಮಂಡಿಸಿದರು. ದೂರದಾರರ ಪರವಾಗಿ ಹಿರಿಯ ವಕೀಲ ಎಸ್.ಎಸ್. ಮಮದಾಪುರ ವಾದ ಮಂಡಿಸಿದರು.