ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ವಿಫಲವಾಗಿರುವ ಅಧಿಕಾರಿಗಳು ಸ್ವತಃ ತಾವೇ ಗಣಿಗಾರಿಕೆಯಲ್ಲಿ ಶಾಮೀಲಾಗಿರುವ ಅನುಮಾನ ಮೂಡುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಶಂಕೆ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್‌ಎಸ್ ಹಿತದೃಷ್ಠಿಯಿಂದ ೨೦ ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಸದಂತೆ ನ್ಯಾಯಲಯ ಆದೇಶ ನೀಡಿದೆ. ಆದರೂ ತಾಲೂಕಿನಲ್ಲಿ ನಡೆಯುತ್ತಿರುವ ಗಣಿಗಾರಿಕೆ ತಡೆಯಲು ತಾಲೂಕು ಆಡಳಿತ ಮತ್ತು ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿ, ನ್ಯಾಯಾಲಯ ಆದೇಶದ ಸ್ಪಷ್ಟ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು.
ಕಾಳೇನಹಳ್ಳಿ- ಆಲಗೂಡು ಗ್ರಾಮಗಳ ಹಾದು ಹೋಗುವ ವಿ.ಸಿ.ಸಂಪರ್ಕ ನಾಲೆಯ ೧.೨ ಕಿಮಿ ಉದ್ದದ ಸುರಂಗದ ಪಕ್ಕದಲ್ಲಿ ೨೦ ಕ್ವಾರಿಗಳು ಅಕ್ರಮವಾಗಿ ನಡೆಯುತ್ತಿದ್ದು, ೫ ಕ್ರಷರ್‌ಗಳು ಎಗ್ಗಿಲ್ಲದೇ ರಿಗ್ ಬೋರ್ ಬ್ಲಾಸ್ಟಿಂಗ್ ಮಾಡುತ್ತಿದ್ದಾರೆ. ಇದರಿಂದ ನಾಲಾ ಸುರಂಗ ಕುಸಿಯುವ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸುರಂಗಕ್ಕೆ ಹಾನಿಯಾದರೆ ಬನ್ನೂರು, ಟಿ.ನರಸೀಪುರ, ಮಳವಳ್ಳಿ ಭಾಗದ ರೈತರಿಗೆ ನೀರು ಪೂರೈಸಲು ಸಾಧ್ಯವಾಗುವುದಿಲ್ಲ. ಕಾಳೇನಹಳ್ಳೀ ಸರ್ವೇ ನಂ.೨೧ರಲ್ಲಿ ೭.೨೦ ಎಕರೆಯ ಕೆರೆ ಮತ್ತು ಗೋಮಾಳ ಅತಿಕ್ರಮಿಸಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವುದು ಇದಕ್ಕೆ ಕಾರಣವಾಗಿದೆ. ಇದರಿಂದ ಪರಿಸರ, ಪ್ರಾಣಿ, ಪಕ್ಷಿ ಸಂಕುಲ ಸೇರಿದಂತೆ ಮೇವು, ಕುಡಿಯುವ ನೀರಿನ ತೊಡಕು ಎದುರಾಗಲಿದೆ ಎಂದು ದೂರಿದರು.
ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಶ್‌ಗೌಡ ಮಾತನಾಡಿ, ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಅವರಿಗೆ ಮನವಿ ಮಾಡಿದಾಗ ಅಧಿಕಾರಿಗಳು ಗಣಿಗಾರಿಕೆ ಮುಚ್ಚಿಸಿದ್ದರು. ಆದರೆ ಅದು ಈಗ ಕಡತಗಳಲ್ಲಿ ಮಾತ್ರ ಸ್ಥಗಿತಗೊಂಡು. ರಾತ್ರೋರಾತ್ರಿ ಮರು ಪ್ರಾರಂಭವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ೨೪ ಕ್ವಾರಿಗಳಿಗೆ ಅನುಮತಿ ಪಡೆಯಲಾಗಿದೆ. ೧೭ ಬ್ಲಾಸ್ಟಿಂಗ್ ಕ್ರಷರ್‌ಗಳಿಗೆ ಅನುಮತಿ ಪಡೆಯಲಾಗಿದೆ. ಆದರೆ ಅಕ್ರಮವಾಗಿ ೫೨ಕ್ಕೂ ಹೆಚ್ಚು ಕ್ರಷರ್‌ಗಳು ನಡೆಯುತ್ತಿವೆ. ಇದರ ಹಿಂದೆ ಮಂಡ್ಯ ಹಾಗೂ ಮೈಸೂರಿನ ರಾಜಕಾರಣಿಗಳ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದರು.
ಇದು ಮಾತ್ರವಲ್ಲದೆ, ಅನುಮತಿ ಪಡೆದದ್ದಕ್ಕಿಂತ ಹೆಚ್ಚು ನೈಸರ್ಗಿಕ ಸಂಪನ್ಮೂಲ ದೋಚಿ, ರಾಜಧನ ಲೂಟಿ ಮಾಡಲಾಗುತ್ತಿದೆ. ಅಕ್ರಮ ಗಣಿಗಾರಿಕೆ, ಕ್ರಷರ್ ಸಂಬಂಧ ಕ್ರಮ ಕೈಗೊಳ್ಳಲು ಮತ್ತೊಮ್ಮೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು. ಮತ್ತೆ ಮುಂದುವರೆದಲ್ಲಿ ಹೋರಾಟ ಮಾಡಲಾಗುವುದು. ಸಮಸ್ಯೆ ಬಗೆಹರಿಯದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಇದೇ ವೇಳೆ ತಿಳಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರಸ್ವಾಮಿ, ಶ್ರೀರಂಗಪಟ್ಟಣ ತಾಲೂಕು ಕಾರ್‍ಯಾಧ್ಯಕ್ಷ ಡಿ.ಎಸ್.ಚಂದ್ರಶೇಖರ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ರವೀಚಂದ್ರ, ಟಿ.ನರಸೀಪುರ ಡಿಎಸ್‌ಎಸ್ ಮುಖಂಡ ಕುಕ್ಕೂರ್ ರಾಜು ಇದ್ದರು.


