ಮಂಡ್ಯ:ಆ.೨೮. ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಅವಧಿ ಮುಗಿಯಲಿದ್ದು ಸರ್ಕಾರ ಸಕಾಲಕ್ಕೆ ಗ್ರಾ.ಪಂ ಚುನಾವಣೆಯನ್ನು ನಡೆಸಲು ಮುಂದಾಗಬೇಕು ಎಂದು ಕರ್ನಾಟಕ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಸಂಚಾಲಕ ಉಪ್ಪರಕನಹಳ್ಳಿ ನಾಗೇಶ್ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗ್ರಾಮಪಂಚಾಯಿತಿ ಚುನಾವಣೆಯನ್ನು ಸರ್ಕಾರವೇ ನಡೆಸಬೇಕು. ಫೆಬ್ರವರಿ ೨೦೨೬ಕ್ಕೆ ಅವಧಿ ಮುಗಿಯಲಿದೆ. ಈಗಾಗಲೇ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಬೇಕಿತ್ತು. ಡಿಸೆಂಬರ್ ಮಾಹೆಯೊಳಗೆ ಚುನಾವಣೆ ನಡೆಯಬೇಕಾಗಿತ್ತು ಎಂದರು.
ಸರ್ಕಾರದಿಂದ ಮೀಸಲಾತಿ ಪ್ರಕಟವಾಗಿಲ್ಲ. ಈ ಸಂಬಂಧ ಹಲವು ಗೊಂದಲಗಳು ಸೃಷ್ಠಿಯಾಗಿದೆ. ಆದ್ದರಿಂದ ಒಕ್ಕೂಟದ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪತ್ರಿಕಾಗೋಷ್ಠಿ ಮೂಲಕ ಒತ್ತಾಯ ಮಾಡಲಾಗುತ್ತಿದೆ ಎಂದು ಹೇಳಿದರು.
ಚುನಾವಣಾ ಆಯೋಗವು ಸರ್ಕಾರ ಇನ್ನೂ ಮೀಸಲಾತಿ ಪ್ರಕಟ ಮಾಡಿಲ್ಲ ಎಂದು ಸುದ್ದಿಗೋಷ್ಠಿ ಮೂಲಕ ತಿಳಿಸಿದೆ. ಡಿಸೆಂಬರ್‌ನಲ್ಲಿ ಚುನಾವಣೆ ನಡೆಸುವುದೇ ಆದರೆ, ೪೫ ದಿನಗಳ ಹಿಂದೆಯೇ ಮೀಸಲಾತಿ ಪ್ರಕಟಿಸಬೇಕಿತ್ತು. ಕ್ಷೇತ್ರಗಳ ವಿಂಗಡನೆ ಮಾಡುವುದು. ಪಕ್ಷದ ಮೂಲಕ ಚುನಾವಣೆ ನಡೆಸುವ ಸಂಬಂಧ ಚರ್ಚೆ ಪ್ರಾರಂಭವಾಗಿದ್ದು. ನಿಗದಿತ ಸಮಯಕ್ಕೆ ಚುನಾವಣೆ ನಡೆಯದಿರುವುದು ಆತಂಕ ಮೂಡಿಸಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯ ಚುನಾವಣೆಯೂ ನಿಗದಿತ ಸಮಯಕ್ಕೆ ನಡೆಯದಂತಾಗಿದೆ. ಆದ ಕಾರಣ ನ್ಯಾಯಾಲಯದ ಮೂಲಕ ಹೋರಾಟ ನಡೆಸುವ ಅನಿವಾರ್ಯತೆ ಇದೆ. ಗ್ರಾ.ಪಂಚಾಯಿತಿ ಚುನಾವಣೆ ನಿಗದಿತ ಸಮಯಕ್ಕೆ ನಡೆಸದೇ ಹೋದಲ್ಲಿ ಗ್ರಾ.ಪಂಚಾಯಿತಿ ಸದಸ್ಯರು ಹೋರಾಟದ ಹಾದಿ ಹಿಡಿಯಲಿದ್ದು, ಅಗತ್ಯ ಬಿದ್ದಲ್ಲಿ ನ್ಯಾಯಾಲಯದಲ್ಲಿ ಹೋರಾಟ ಮಾಡುವುದರ ಜೊತೆಗೆ, ಜನಾಭಿಪ್ರಾಯ ಸಂಗ್ರಹವನ್ನು ಮಾಡಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಎಸ್.ಪ್ರದೀಪ್, ಗೌರವಾಧ್ಯಕ್ಷ ಬಿ.ಎಂ.ಮಹೇಶ್, ಪ್ರಧಾನ ಕಾರ್ಯದರ್ಶಿ ಕೆಂಪೇಗೌಡ, ಉಪಾಧ್ಯಕ್ಷೆ ಸುವರ್ಣಾವತಿ, ಮಾಧ್ಯಮ ಸಲಹೆಗಾರ ಎಂ.ಚಾಮರಾಜು ಇದ್ದರು.


