ಮಂಡ್ಯ: ರಾಜ್ಯದಲ್ಲಿ ಏಕರೂಪದ ಸಮಾನ ಶಿಕ್ಷಣ ನೀರಿ ಜಾರಿ ಮಾಡಿ ಸರಕಾರಿ ಶಾಲೆಗಳನ್ನು ಉಳಿಸಲು ಏ.೧೧ರಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಂಘದಿಂದ ಜಿಲ್ಲೆಯ ೨೩೩ ಗ್ರಾ.ಪಂಗಳಲ್ಲಿ ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಉಳಿವಿಗೆ ಸರಕಾರಿ ಶಾಲೆಗಳೇ ಆಧಾರ ಸ್ಥಂಭಗಳು. ಅವುಗಳು ಗ್ರಾಮಗಳ ಸಾಂಸ್ಕೃತಿಕ ಕೇಂದ್ರಗಳಾಗಿವೆ. ಆದ್ದರಿಂದ ಏಕರೂಪ ಸಮಾನ ಶಿಕ್ಷಣ ನೀತಿ ಜಾರಿಗೆ ತಂದು, ರಾಜಕಾರಣಿಗಳು ಹಾಗೂ ಸರಕಾರಿ ನೌಕರರ ಮಕ್ಕಳಿಗೆ ಸಮನಾದ ಶಿಕ್ಷಣ ಬಡವರ ಮಕ್ಕಳಿಗೂ ಸಿಗಬೇಕೆಂಬುದು ನಮ್ಮ ಬೇಡಿಕೆ ಎಂದರು.
ರಾಜ್ಯದ ಗ್ರಾಮಗಳಲ್ಲಿನ ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗಳಿಗೆ ವಿಲೀನಗೊಳಿಸಿ ಬಡಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಲಾಗುತ್ತಿದೆ. ಅಲ್ಲದೇ ಇದು ಖಾಸಗಿ ಶಾಲೆಗಳಿಗೆ ನೆರವಾಗುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಸಂಘದ ಮಂಡ್ಯ ತಾಲೂಕು ಯುವ ಘಟಕದ ಅಧ್ಯಕ್ಷ ಸಂತೋಷ್ ಮಂಡ್ಯಗೌಡ ಮಾತನಾಡಿ, ಜಿಲ್ಲೆಯ ಎಲ್ಲಾ ಗ್ರಾಮಗಳನ್ನು ತಲುಪಲಿವೆ. ಅದರೊಳಗೆ ಸರಕಾರ ಜಿಲ್ಲಾಧ್ಯಂತ ಮುಚ್ಚಿರುವ ೩೫೪ ಶಾಲೆಗಳನ್ನು ಮತ್ತೆ ತೆಗೆದು ಸಿಬಿಎಸ್‌ಇ ಹಾಗೂ ೧೫೦೦ಕ್ಕೂ ಹೆಚ್ಚು ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿಯಿಂದ ೫ನೇ ತರಗತಿವರೆಗೆ ಗುಣಮಟ್ಟದ ದ್ವಿಭಾಷಾ ನೀತಿಯಲ್ಲಿ ಶಿಕ್ಷಣ, ಮೂಲಭೂತ ಸೌಕರ್ಯ ಒದಗಿಸಬೇಕು. ಮುಂದಿನ ಶೈಕ್ಷಣಿಕ ಅವಧೀಯ ಆರಂಭದಲ್ಲಿ ಜಿಲ್ಲೆಯ ಎಲ್ಲ ಸರಕಾರಿ ಶಾಲೆಗಳಿಗೆ ಬೀಗ ಹಾಕಿ ಮಕ್ಕಳು ಹಾಗೂ ಪೋಷರಕ ಜತೆಗೂಡಿ ಡಿಡಿಪಿಐ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಅಲ್ಲದೇ ನಗರದ ಸರ್.ಎಂ.ವಿ ವಿಶ್ವೇಶ್ವರಯ್ಯ ಪ್ರತಿಮೆಯ ಎದುರು ಮಕ್ಕಳಿಗೆ ಬಹಿರಂಗ ಪಾಠ ಮಾಡಲಾಗುವುದು ಎಂದು ಎಚ್ಚರಿಸಿದರು.
ಸರಕಾರ ಈ ಕ್ರಮಕ್ಕೆ ಮುಂದಾಗದಿದ್ದರೆ ಎಸ್‌ಡಿಎಂಸಿ, ಹಾಗೂ ಹಿರಿಯ ವಿದ್ಯಾರ್ಥಿ ಸಂಘದವರೇ ಜಿಲ್ಲೆಯಲ್ಲಿ ಮುಚ್ಚಿದ ೩೫೪ ಶಾಲೆಗಳ ಬೀಗ ತೆರೆದು ಶಿಕ್ಷಕರ ನೇಮಕ ಮಾಡಿ, ಮೂಲಭೂತ ಸೌಕಯ ಒದಗಿಸಿ, ಶಿಕ್ಷಕರಿಗೆ ಸಿಬಿಎಸ್‌ಇ ಗುಣಮಟ್ಟದ ತರಬೇತಿ ಕೊಟ್ಟು ಮಾರ್ಗದರ್ಶನ ನೀಡುವುದು. ಜಿಲ್ಲೆಯ ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ನವೋದಯ ಮಾದರಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಸ್ಥಾಪನೆ ಮಾಡಿ, ಶಿಕ್ಷಕರಿಗೆ ಪೂರ್ಣ ತರಬೇತಿ ನೀಡಿ ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.
ಸರಕಾರಿ ಶಾಲೆಗಳ ಉಳಿವಿಗಾಗಿ ಜಿಲ್ಲೆಯಲ್ಲಿ ನಡೆಯಲಿರುವ ಐತಿಹಾಸಿಕ ಪಾದಯಾತ್ರೆಗೆ ಬೆಂಬಲಿಸುವರು ದೇಣಿಗೆ ನೀಡಿ ಬಲ ತುಂಬುವಂತೆ ಇದೇ ವೇಳೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ರಾಮಲೀಂಗೇಗೌಡ, ಶಿವಳ್ಳಿ ಚಂದ್ರಶೇಖರ್, ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ, ಎಸ್‌ಡಿಎಂಸಿ ಮೈಸೂರು ಜಿಲ್ಲಾಧ್ಯಕ್ಷ ರೇವಣ್ಣ ಇದ್ದರು.


