ಸಾಹಿತ್ಯ ಸಮ್ಮೇಳನ ಹಗರಣವನ್ನು ಪ್ರೈವೇಟ್ ಡಿಟೆಕ್ಟಿವ್ ತನಿಖೆ ನಡೆಸಿ :ಚಲುವರಾಯಸ್ವಾಮಿ ವ್ಯಂಗ್ಯ
ಮಂಡ್ಯ: ಆ.೨.ಮಂಡ್ಯದಲ್ಲಿ ನಡೆದ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದಿರುವ ಹಗರಣವನ್ನು ಬೇಕಿದ್ದರೆ ಪ್ರೈವೇಟ್ ಡಿಟೆಕ್ಟಿವ್ ಏಜೆನ್ಸಿಯಿಂದ ತನಿಖೆ ನಡೆಸಲಿ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತು ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಅವರು ಮಳವಳ್ಳಿ ಮಾಜಿ ಶಾಸಕ ಅನ್ನದಾನಿಯವರು ಎರಡು ಬಾರಿ ಶಾಸಕರಾಗಿದ್ದವರು.ಸಾಹಿತ್ಯ ಸಮ್ಮೇಳನ ನಡೆದ ರೀತಿಗೆ ಇಡೀ ನಾಡು ಹೊಗಳಿದೆ.ಸ್ವತಃ ಜ್ಯಾದಳದ ನಾಯಕ ಕುಮಾರಸ್ವಾಮಿಯವರೆ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾಗಿ ನಡೆದಿದೆಯೆಂದು ಶ್ಲಾಫಿಸಿದ್ದಾರೆ.ಬೇಕಿದ್ದರೆ ಅನ್ನದಾನಿಯವರು ಪ್ರೈವೇಟ್ ಡಿಟೆಕ್ಟಿವ್ ಏಜೆನ್ಸಿಯಿಂದ ತನಿಖೆ ಮಾಡಿಸಲಿ ಎಂದು ವ್ಯಂಗ್ಯವಾಡಿದರು.
ಅನ್ನದಾನಿಯವರು ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಹಾಡು ಹಾಡುವುದಾಗಿ ಕೇಳಿದ್ದರು.ಆದರೆ ಪೂರ್ವನಿಗದಿತ ಕಾರ್ಯಕ್ರಮ ಇದ್ದುದ್ದರಿಂದ ಅವರಿಗೆ ಹಾಡಲು ಅವಕಾಶ ಮಾಡಿಕೊಡಲು ಸಾಧ್ಯವಾಗಲಿಲ್ಲ. ಯಾರಿಗೆ ಯಾವ ಬೇಜಾರು ಇದೆಯೋ ಗೊತ್ತಿಲ್ಲ ಎಂದರು.
ಮುಂದುವರಿದು ಕಸಾಪ ಅಧ್ಯಕ್ಷ ಮಹೇಶ್ ಜೋಷಿಯವರು ಪಡೆದಿರುವ ಎರಡುವರೆ ಕೋಟಿ ರೂಪಾಯಿಗೆ ಈವರೆಗೆ ಲೆಕ್ಕ ಕೊಟ್ಟಿಲ್ಲ.ಲೆಕ್ಕ ಕೊಡುವಂತೆ ಈಗಾಗಲೇ ಎರಡ್ಮೂರು ಬಾರಿ ಪತ್ರ ಬರೆಯಲಾಗಿದೆ ಮತ್ತೊಂದು ಪತ್ರವನ್ನು ಜಿಲ್ಲಾಡಳಿತದಿಂದ ಬರೆಯಲಾಗುವುದು ಎಂದರು.