ಸಿಟಿಕ್ಲಬ್ ನಿಂದ ನಗರಸಭೆ ಭೂ ಒತ್ತುವರಿ:ಹೈಕೋರ್ಟ್ ನೋಟಿಸ್
ಮಂಡ್ಯ ನಗರಸಭೆಗೆ ಸೇರಿದ ಭೂಮಿಯನ್ನು ಮಂಡ್ಯ ನಗರದ ಸಿಟಿ ಕ್ಲಬ್ ಒತ್ತುವರಿ ಮಾಡಿಕೊಂಡಿರುವ ಸಂಬಂದ ರಾಜ್ಯ ಹೈಕೋರ್ಟ್ ಮಂಡ್ಯ ಜಿಲ್ಲಾಧಿಕಾರಿ ಸೇರಿದಂತೆ 9ಮಂದಿ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಮಂಡ್ಯ ನಗರಸಭೆ ಕಚೇರಿಗೆ ಹೊಂದಿಕೊಂಡತಿರುವ ಸಿಟಿಕ್ಲಬ್ ಕಟ್ಟಡ ಅಕ್ರಮವಾಗಿದ್ದು ಸಿಟಿ ಕ್ಲಬ್ ಹಾಲೀ ಅಸ್ತಿತ್ವದಲ್ಲಿರುವ ಸುಮಾರು ೫೪ ಸಾವಿರ ಅಡಿ ಭೂಮಿ ಮಂಡ್ಯ ನಗರಸಭೆಗೆ ಸೇರಿದ ಆಸ್ತಿಯಾಗಿದ್ದು ಸದರಿ ಒತ್ತುವರಿಯನ್ನು ತೆರವುಗೊಳಿಸಿ ನಗರಸಭೆ ಸುಪರ್ದಿಗೆ ನೀಡುವಂತೆ ಸಂಜಯ್ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶರಾದ ವಿಭೂ ಭಕ್ರು .ಜಸ್ಟೀಸ್ ಸಿಎಂ ಪೂಣಚ್ಚ ರ ದ್ವೀಪೀಠ ನೋಟಿಸ್ ಜಾರಿಗೊಳಿಸಿದೆ.
ಏನಿದು ಪ್ರಕರಣ?

ಮಂಡ್ಯ ನಗರಸಭೆ ಹಾಗೂ ಮುನಿಸಿಪಲ್ ಹೈಸ್ಕೂಲ್ ಮಧ್ಯೆ ಅಸ್ತಿತ್ವದಲ್ಲಿರುವ ಸಿಟಿಕ್ಲಬ್ ಮಂಡ್ಯದ ಹಳೇಯ ಕ್ಲಬ್ ಗಳಲ್ಲೊಂದಾಗಿದೆ.ಇಲ್ಲಿ ಮದ್ಯ ಸರಬರಾಜು ಜೂಜೂ ಸೇರಿದಂತೆ ಹಲವು ಚಟುವಟಿಕೆಗಳು ನಡೆಯುತ್ತಿದ್ದು.ಮಂಡ್ಯದ ಹಲವರು ಈ ಕ್ಲಬ್ ನ ಸದಸ್ಯರಾಗಿದ್ದಾರೆ.ಮಂಡ್ಯ ನಗರಸಭೆ ಖಾತೆ ಸಂಖ್ಯೆ ಡಿ೩ :೧೦೬೨:೨೧೦೪ ರಂತೆ ೧)೧೦೬×೧೦೭
೨)೧೭೧×೧೮೨
೩)೨೩೭×೨೩೬
ಸೇರಿ ಒಟ್ಟು ೫೪ ಸಾವಿರ ಚದುರಡಿಯಲ್ಲಿ ಸಿಟಿಕ್ಲಬ್ ಹರಡಿಕೊಂಡಿದೆ. ನಗರದ ಅಯಕಟ್ಟಿನಲ್ಲಿರುವ ಈ ಭೂಮಿಯ ಮೌಲ್ಯ ೨೦ ಕೋಟಿಗೂ ಹೆಚ್ಚು ಬೆಲೆ ಬಾಳುತ್ತದೆ.ಸದರಿ ಸಿಟಿಕ್ಲಬ್ ಭೂಮಿ ಮಂಡ್ಯ ನಗರಸಭೆಗೆ ಸೇರಿದ ಆಸ್ತಿಯಾಗಿದ್ದು ಸಿಟಿಕ್ಲಬ್ ಗೆ ಯಾವುದೆ ಮಂಜೂರಾತಿಯಾಗಿಲ್ಲ ಎಂಬುದು ಈಗಿನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತಕರಾರಾಗಿದೆ.

ಮೊದಲೆ ಎತ್ತಂಗಡಿ ಆದೇಶವಾಗಿತ್ತು!
ನಗರಸಭೆಗೆ ಹೊಂದಿಕೊಂಡಂತೆ ಇರುವ ಸ್ಥಳದಲ್ಲಿ ಸಿಟಿಕ್ಲಬ್ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾದಾಗ ಸಿಟಿ ಕ್ಲಬ್ ತನ್ನದಲ್ಲದ ಭೂಮಿಯಲ್ಲಿ ನಡೆಯುತ್ತಿದ್ದು ಸದರಿ ಭೂಮಿಯನ್ನು ನಗರಸಭೆ ವಶಕ್ಕೆ ಪಡೆಯಲು ೨೦೦೩ ರಲ್ಲೆ ಮಂಡ್ಯದ ಸಿವಿಲ್ ನ್ಯಾಯಾಲಯದಲ್ಲಿ ಮಂಡ್ಯ ನಗರಸಭೆ ದಾವೆ ಹಾಕಿತ್ತು.ಈ ಪ್ರಕರಣದ ವಿಚಾರಣೆ ನಡೆದು ನಗರಸಭೆಗೆ ಹೊಂದಿಕೊಂಡಂತಿರುವ ಹೊಸ ಕಟ್ಟಡ ಅಕ್ರಮವಾಗಿದ್ದು ಸದರಿ ಭೂಮಿಯನ್ನು ವಶಕ್ಕೆ ಪಡೆಯುವಂತೆ ನ್ಯಾಯಾಲಯ ಆದೇಶ ಮಾಡಿತ್ತು.

ಆದರೆ ನ್ಯಾಯಾಲಯದ ಆದೇಶವಿದ್ದರು ಮಂಡ್ಯ ನಗರಸಭೆ ಸಿಟಿಕ್ಲಬ್ ನಿಂದ ತನ್ನ ಭೂಮಿಯನ್ನು ವಶಕ್ಕೆ ಪಡೆಯುವ ಯಾವುದೆ ಪ್ರಯತ್ನ ನಡೆಸಲಿಲ್ಲ.ಪ್ರಭಾವಿಗಳ ಒತ್ತಡಕ್ಕೆ ಮಣಿದ ನಗರಸಭೆ ಅಧಿಕಾರಿಗಳು ಹಾಗೂ ಕೌನ್ಸಿಲ್ ಸದಸ್ಯರು ನ್ಯಾಯಾಲಯದ ಆದೇಶದ ಬಗ್ಗೆ ಮುಗುಮ್ಮಾದರು.
ನಂತರದಲ್ಲಿ ಈ ಸಂಬಂದ ಒತ್ತುವರಿ ತೆರವಿಗಾಗಿ ಲೋಕಾಯುಕ್ತಕ್ಕು ಸಾರ್ವಜನಿಕ ದೂರುಗಳು ದಾಖಲಾದರೂ ನಗರಸಭೆ ಜಪ್ಪಯ್ಯ ಎನ್ನಲಿಲ್ಲ.ತನ್ನ ಭೂಮಿ ವಶಕ್ಕೆ ಪಡೆಯುವ ಯಾವುದೆ ಪ್ರಯತ್ನ ನಡೆಸಲಿಲ್ಲ.

ಬದಲಿಗೆ ೨೦೦೬ ರಲ್ಲಿ ನಗರಸಭೆ ಆಯುಕ್ತರಾಗಿದ್ದ ಎಚ್ ವಿ ಕೃಷ್ಣಮೂರ್ತಿಯವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಸಿಟಿಕ್ಲಬ್ ಅಸ್ತಿತ್ವದಲ್ಲಿರುವ ಭೂಮಿ ಮಂಜೂರಾಗಿರುವ ಸಂಬಂದ ಯಾವುದೆ ದಾಖಲೆಗಳು ಇಲ್ಲವಾಗಿದ್ದು.ಆದರೆ ಕಳೆದ ೭೦ ವರ್ಷಗಳಿಂದ ಸಿಟಿಕ್ಲಬ್ ಅಸ್ತಿತ್ವದಲ್ಲಿ ಇರುವುದರಿಂದ ತೆರಿಗೆ ಪಾವತಿಸುತ್ತಾ ಬಂದಿರುವುದರಿಂದ ಸದರಿ ಸಿಟಿಕ್ಲಬ್ ಹೊಸ ಕಟ್ಟಡ ಕಟ್ಟಲು ಯಾವುದೆ ಅಭ್ಯಂತರವಿಲ್ಲವೆಂದು ಹಿಂಬರಹ ನೀಡಿದರು.ಪರಿಣಾಮ ತೆರವುಗೊಳಿಸುವಂತೆ ನ್ಯಾಯಾಲಯ ನೀಡಿದ್ದ ಆದೇಶ ಜಾರಿಯಾಗದೆ ನೆನೆಗುದಿಗೆ ಬಿದ್ದಿತು.ಸಿಟಿಕ್ಲಬ್ ನ ಹೊಸ ಕಟ್ಟಡ ತಲೆ ಎತ್ತಿತು.
ಮರಳಿ ಸಿಟಿಕ್ಲಬ್ ಆಕ್ರಮಿಸಿಕೊಂಡಿರುವ ಭೂಮಿ ತೆರವು ಸಂಬಂದ ನ್ಯಾಯಾಲಯದ ಆದೇಶ ಪಾಲನೆಗಾಗಿ ಲೋಕಾಯುಕ್ತಕ್ಕೆ ದೂರು ದಾಖಲಾಗುತ್ತಿದ್ದಂತೆ ಹಾಲೀ ಆಯುಕ್ತೆ ಪಂಪಶ್ರೀ..ತಾನೂ ಕಳೆದ ಹತ್ತು ತಿಂಗಳಿನಿಂದ ಆಯುಕ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ನ್ಯಾಯಾಲಯದ ಆದೇಶಾನುಸಾರ ಕ್ರಮವಹಿಸುವುದಾಗಿ ಲೋಕಾಯುಕ್ತಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.ಜೊತೆಗೆ ತಮ್ಮ ಪ್ರಮಾಣ ಪತ್ರದಲ್ಲಿ ೨೦೦೭ ರಲ್ಲಿನ ನ್ಯಾಯಾಲಯದ ಆದೇಶವನ್ನು ಸಹ ಪ್ರಸ್ತಾಪಿಸಿದ್ದಾರೆ.
ಈ ನಡುವೆ ಅರ್ಜಿದಾರರು ಮಂಡ್ಯ ನಗರಸಭೆಗೆ ಜನವರಿ ೧-೨೦೨೫ ರಲ್ಲಿ ದೂರು ನೀಡಿ ಸಿಟಿಕ್ಲಬ್ ಭೂಮಿ ಮಂಡ್ಯ ನಗರಸಭೆಗೆ ಸೇರಿದ ಆಸ್ತಿಯಾಗಿದ್ದು ನಗರಸಭೆಗೆ ಸೇರಿದ ಆಸ್ತಿಯಲ್ಲಿ ಜೂಜೂ ಕುಡಿತ ನಡೆಯುತ್ತಿದ್ದು ಭೂಮಿಯನ್ನು ವಶಕ್ಕೆ ಪಡೆಯುವಂತೆ ಕೋರಿರುತ್ತಾರೆ.
ಆಗ ಎಚ್ಚೆತ್ತ ನಗರಸಭೆ ಜನವರಿ ೨೪-೨೦೨೫ ರಲ್ಲಿ ಸಿಟಿಕ್ಲಬ್ ಗೆ ನೋಟಿಸ್ ನೀಡಿ ಕ್ಲಬ್ ಗೆ ಸಂಬಂದಿಸಿದ ಮಾಲೀಕತ್ವದ ಮೂಲ ದಾಖಲಾತಿಗಳು ಹಾಗೂ ಕ್ಲಬ್ ನಡೆಸಲು ಸಕ್ಷಮ ಇಲಾಖೆಯ ಅನುಮತಿ ಪತ್ರ ಹಾಜರುಪಡಿಸುವಂತೆ ನೋಟಿಸ್ ಜಾರಿಗೊಳಿಸುತ್ತದೆ.ಆದರೆ ಸಿಟಿಕ್ಲಬ್ ಇದ್ಯಾವುದಕ್ಕು ಕ್ಯಾರೆ ಎನ್ನುವುದಿಲ್ಲ.ಹೀಗೆ ಸಿಟಿಕ್ಲಬ್ ಮಾಲೀಕತ್ವ ಧೃಡಪಡಿಸುವ ಯಾವುದೆ ದಾಖಲಾತಿ ಒದಗಿಸುವಲ್ಲಿ ಸಿಟಿಕ್ಲಬ್ ವಿಫಲವಾಗುತ್ತದೆ.ನಗರಸಭೆ ಸಹ ನೋಟಿಸ್ ನೀಡುವಿಕೆಗೂ ತನ್ನನ್ನು ಸಿಮೀತಗೊಳಿಸಿಕೊಳ್ಳುತ್ತದೆ.
ಬಲಾಢ್ಯರ ಒತ್ತಡಕ್ಕೆ ಮಣಿದ ನಗರಸಭೆ ೨೦೦೭ ರ ಆದೇಶ ಜಾರಿಗೂ ಯಾವುದೆ ಪ್ರಾಮಾಣಿಕ ಪ್ರಯತ್ನ ನಡೆಸುವುದಿಲ್ಲ.ಬದಲಿಗೆ ಅಕ್ರಮವಾಗಿ ಸಿಟಿಕ್ಲಬ್ ಗೆ ಅಗತ್ಯ ಟ್ರೇಡ್ ಲೈಸೆನ್ಸ್ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿ ನಗರಸಭೆಗೆ ಸೇರಿದ ಕೋಟಿಗಟ್ಟಲೆ ಬೆಲೆಬಾಳುವ ಆಸ್ತಿ ಖಾಸಗಿಯವರ ಪಾಲಾಗಲು ಸಹಕರಿಸುತ್ತದೆ.
ಕಡೇಗೆ ನ್ಯಾಯಾಲಯದ ಆದೇಶ ಜಾರಿ ಮಾಡುವ ಬದಲು ಸಿಟಿಕ್ಲಬ್ ಒತ್ತುವರಿ ತೆರವುಗೊಳಿಸುವ ಬದಲು ಇಡೀ ಪ್ರಕರಣವನ್ನು ಮೈಸೂರು ಪ್ರಾದೇಶಿಕ ಅಧಿಕಾರಿಗಳ ಅರೆ ನ್ಯಾಯಿಕ ಮಂಡಳಿಗೆ ಪ್ರಕರಣವನ್ನುಸಾಗಹಾಕಲು ಕಳೆದ ಮೇನಲ್ಲಿ ಮಂಡ್ಯ ನಗರಸಭೆ ಕೌನ್ಸಿಲ್ ನಿರ್ಣಯ ಕೈಗೊಂಡಿದೆ.

ಅಲ್ಲಿಗೆ ಅತ್ತ ಸಿಟಿಕ್ಲಬ್ ಒತ್ತುವರಿ ತೆರವುಗೊಳಿಸುವಂತೆ ಮಂಡ್ಯ ನ್ಯಾಯಾಲಯ ನೀಡಿದ ಆದೇಶವೂ ಪಾಲನೆಯಿಲ್ಲ.ಇತ್ತ ಇಡೀ ಸಿಟಿಕ್ಲಬ್ ಅಸ್ತಿತ್ವದಲ್ಲಿರುವ ೫೪ ಸಾವಿರ ಚದುರಡಿ ಭೂಮಿಯ ವಶಕ್ಕೆ ಪಡೆಯುವಲ್ಲಿ ಕೌನ್ಸಿಲ್ ಯಾವುದೆ ಪ್ರಯತ್ನ ನಡೆಸದೆ ಪಲಾಯನಗೈಯುತ್ತದೆ.
ನಗರಸಭೆಯ ಕೆಲ ಸದಸ್ಯರು ಸಿಟಿಕ್ಲಬ್ ಆಡಳಿತ ಮಂಡಳಿಯ ಭಾಗವಾಗಿರುವುದು ಪ್ರಭಾವಿಗಳ ಒತ್ತಡಕ್ಕೆ ಮಣಿದು ನಗರಸಭೆಯ ಆಸ್ತಿಯನ್ನು ಖಾಸಗಿಯವರ ಪಾಲಾಗಿಸಲಾಗಿದೆ ಎಂಬುದು ಅರ್ಜಿದಾರರ ಆರೋಪವಾಗಿದೆ.

ಈ ಹಿನ್ನೆಲೆಯಲ್ಲಿ ಅರ್ಜಿದಾರರು ರಾಜ್ಯ ಹೈಕೋರ್ಟ್ ಬಾಗಿಲು ತಟ್ಟಿದ್ದು ಮಂಡ್ಯ ನಗರಸಭೆಗೆ ಸೇರಿದ ೫೪ ಸಾವಿರ ಚದುರಡಿ ಭೂಮಿಯನ್ನು ವಶಕ್ಕೆ ಪಡೆಯುವಂತೆ ಅಬಕಾರಿ ಸನ್ನದು ರದ್ದುಗೊಳಿಸುವಂತೆ. ನಿರ್ಲಕ್ಷ ವಹಿಸಿದ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಕೋರಿದ್ದಾರೆ. ನ್ಯಾಯಾಲಯವು. ಸರ್ಕಾರದ ಕಾರ್ಯದರ್ಶಿ. ಮಂಡ್ಯ ಜಿಲ್ಲಾಧಿಕಾರಿ .ಪೌರಾಡಳಿತ ನಿರ್ದೇಶಕರು. ಮಂಡ್ಯ ಅಬಕಾರಿ ಜಿಲ್ಲಾಧಿಕಾರಿ. ಅಬಕಾರಿ ನಿರೀಕ್ಷಕ .ರಾಜ್ಯ ಅಬಕಾರಿ ಇಲಾಖೆ.ಸಿಟಿಕ್ಲಬ್. ಮಂಡ್ಯ ನಗರಸಭೆ .ಸಹಕಾರ ಸಂಘಗಳ ರಿಜಿಸ್ಟರ್ ಸೇರಿ ಒಂಬತ್ತು ಮಂದಿಗೆ ನೋಟಿಸ್ ಜಾರಿಗೊಳಿಸಿದೆ.ನ್ಯಾಯಾಲಯದ ವಿಚಾರಣೆ ಸಿಟಿಕ್ಲಬ್ ನ ಭೂಮಿಯ ಭವಿಷ್ಯ ನಿರ್ಧರಿಸಲಿದೆ.ಸಿಟಿಕ್ಲಬ್ ತನ್ನ ಮಾಲೀಕತ್ವ ಧೃಡಪಡಿಸುವಲ್ಲಿ ವಿಫಲವಾದಲ್ಲಿ ೫೪ ಸಾವಿರ ಚದುರಡಿ ನಗರಸಭೆಗೆ ಸೇರಲಿದೆ.ಆದರೆ ಇದು ಸಾಧ್ಯವೆ ಕಾದು ನೋಡೋಣಾ.



