ಹೈಕೋರ್ಟ್
ಬೆಂಗಳೂರು: ‘ಈ ತಿಂಗಳಾಂತ್ಯಕ್ಕೆ ಅವಧಿ ಪೂರ್ಣಗೊಳಿಸಲಿರುವ ಹಾಸನ ಮಹಾನಗರ ಪಾಲಿಕೆ, ಕೋಲಾರ ಮತ್ತು ಚಿತ್ರದುರ್ಗ ನಗರಸಭೆ ಸೇರಿದಂತೆ 40ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಯಾವಾಗ ನಡೆಸಲಾಗುತ್ತದೆ ಎಂಬ ಬಗ್ಗೆ ನಿಮ್ಮ ನಿಲುವು ಏನು ಎಂಬುದನ್ನು ಇದೇ 29ರೊಳಗೆ ತಿಳಿಸಿ’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಸಂಬಂಧ 40ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಪ್ರತ್ಯೇಕವಾಗಿ ಸಲ್ಲಿಸಿರುವ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಕೆಲ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಎಸ್.ಬಸವರಾಜ್ ಅವರ ವಾದ ಆಲಿಸಿದ ನ್ಯಾಯಪೀಠ, ‘ಈ ನಗರ ಸ್ಥಳೀಯ ಸಂಸ್ಥೆಗಳಿಗೆ ಸದ್ಯ ಆಡಳಿತಾಧಿಕಾರಿ ನೇಮಕ ಮಾಡಬಾರದು’ ಎಂದು ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಮುಂದುವರಿಸಿತು.
ಕೋರಿಕೆ ಏನು?: ‘ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಲು ವಿಳಂಬವಾದ ಕಾರಣದಿಂದ 16 ತಿಂಗಳ ಕಾಲ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ್ದ ಅವಧಿಯನ್ನು ನಮ್ಮ ಐದು ವರ್ಷದ ಅಧಿಕಾರ ಅವಧಿಗೆ ಪರಿಗಣಿಸಬಾರದು ಹಾಗೂ ಅವಧಿ ಮುಗಿಯಲಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳ ನೇಮಕ ಮಾಡುವ ಕ್ರಮಕ್ಕೆ ಮುಂದಾಗದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.
ಅರ್ಜಿದಾರ ಸಂಸ್ಥೆಗಳು: ಹಾಸನ ಮಹಾನಗರ ಪಾಲಿಕೆ, ಕೋಲಾರ ನಗರಸಭೆ, ಚಿತ್ರದುರ್ಗ ಪುರಸಭೆ, ಕಡೂರು ಪುರಸಭೆ, ಹೊನ್ನಾಳ್ಳಿ ಪುರಸಭೆ, ಶಿಕಾರಿಪುರ ಪುರಸಭೆ, ಬನ್ನೂರು ಪುರಸಭೆ, ನಾಗಮಂಗಲ ಪುರಸಭೆ, ಶೃಂಗೇರಿ ಪುರಸಭೆ, ಮಂಡ್ಯ ನಗರಸಭೆ, ಮೂಡಿಗೆರೆ ಪಟ್ಟಣ ಪಂಚಾಯಿತಿ, ಗೌರಿಬಿದನೂರು ನಗರಸಭೆ, ಹಿರಿಯೂರು ನಗರಸಭೆ, ಚಳ್ಳಕೆರೆ ನಗರಸಭೆ, ಹೊಳೆನರಸೀಪುರ ಪುರಸಭೆ, ಚಿಕ್ಕಬಳ್ಳಾಪುರ ನಗರಸಭೆ, ಮಳವಳ್ಳಿ ಪುರಸಭೆ, ಮುಳಬಾಗಿಲು ನಗರಸಭೆ, ಚನ್ನಗಿರಿ ಪುರಸಭೆ, ಶಿಕಾರಿಪುರ ಪುರಸಭೆ, ಹರಿಹರ ನಗರಸಭೆ, ವಿರಾಜಪೇಟೆ ಪಟ್ಟಣ ಪಂಚಾಯಿತಿ, ಬೆಳ್ಳೂರು ನಗರಸಭೆ, ಹೊಸಕೋಟೆ ನಗರಸಭೆ, ಪಾಂಡವಪುರ ನಗರಸಭೆ, ಪುತ್ತೂರು ನಗರಸಭೆ, ಮೂಡುಬಿದಿರೆ ಪುರಸಭೆ, ಮಧುಗಿರಿ ಪುರಸಭೆ, ತುರುವೇಕೆರೆ ಪಟ್ಟಣ ಪಂಚಾಯಿತಿ, ಶ್ರೀರಂಗಪಟ್ಟಣ ಪುರಸಭೆ, ಹೊಸನಗರ ಪಟ್ಟಣ ಪಂಚಾಯಿತಿ, ಕುಶಾಲನಗರ ಪುರಸಭೆ, ಗುಂಡ್ಲುಪೇಟೆ ನಗರಸಭೆ, ಅರಸೀಕೆರೆ ಪುರಸಭೆ, ಜಗಳೂರು ಪಟ್ಟಣ ಪಂಚಾಯಿತಿ, ಸಕಲೇಶಪುರ ಪುರಸಭೆ, ಪಾವಗಡ ಪುರಸಭೆ, ಮೊಳಕಾಲ್ಮುರು ಪಟ್ಟಣ ಪಂಚಾಯಿತಿ.ಆಡಳಿತಾಧಿಕಾರಿ ಬೇಡ: ಇದೇ ವೇಳೆ ಉಡುಪಿ ನಗರಸಭೆ, ಕಡೂರು ಪುರಸಭೆ, ಕೆ.ಆರ್.ಪೇಟೆ ಪುರಸಭೆ, ಟಿ.ನರಸೀಪುರ ಪುರಸಭೆ, ಪಿರಿಯಾಪಟ್ಟಣ ಪುರಸಭೆ, ಕೊರಟಗೆರೆ ಪಟ್ಟಣ ಪಂಚಾಯಿತಿ, ನರಸಿಂಹರಾಜಪುರ ಪಟ್ಟಣ ಪಂಚಾಯಿತಿಗಳ ಚುನಾಯಿತ ಸದಸ್ಯರ ಅವಧಿ ಪೂರ್ಣಗೊಳ್ಳುವ ತನಕ ಆಡಳಿತಾಧಿಕಾರಿಗಳನ್ನು ನೇಮಕ ಮಾಡದಂತೆ ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಧ್ಯಂತರ ಆದೇಶ ನೀಡಿದೆ.
ರಾಜ್ಯ ಸರ್ಕಾರ, ರಾಜ್ಯ ಚುನಾ ವಣಾ ಆಯೋಗ ಮತ್ತು ಆಯಾ ಡಿ.ಸಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ.


