Thursday, January 8, 2026
spot_img

ಹಂತ ಹಂತವಾಗಿ ಎಲ್ಲ ಜಿಲ್ಲೆಗಳಲ್ಲು ಮೆಡಿಕಲ್ ಕಾಲೇಜು:ಸಿದ್ದರಾಮಯ್ಯ ಘೋಷಣೆ

*ಹಂತ ಹಂತವಾಗಿ ಬಾಕಿ ಇರುವ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ,ಟ್ರಾಮಾ ಸೆಂಟರ್ ಸ್ಥಾಪನೆ*

*ಹಾವೇರಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಮುಖ್ಯಮಂತ್ರಿ ಸಿದ್ದರಾಮಯ್ಯ*

ಹಾವೇರಿ : ಜನವರಿ – 07:
ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ ಜಿಲ್ಲೆಯಲ್ಲಿ ಕ್ಯಾನ್ಸರ್, ಟ್ರಾಮಾ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಅವರು ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಹಾವೇರಿ ವೈದ್ಯಕೀಯ ವಿಜ್ಞಾನ ಗಳ ಸಂಸ್ಥೆಯ ಉದ್ಘಾಟನೆ ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ವನ್ನು ನೆರವೇರಿಸಿ ಮಾತನಾಡಿದರು.

ಕಳೆದ ಬಾರಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಘೋಷಿಸಿದ್ದ ಹಾವೇರಿ ವೈದ್ಯಕೀಯ ವಿಜ್ಞಾನ ಗಳ ಸಂಸ್ಥೆಯನ್ನು ಘೋಷಿಸಿದ್ದೆ. ಉಪಮುಖ್ಯಮಂತ್ರಿಯಾಗಿದ್ದಾಗ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕು ಎಂದು ಘೋಷಣೆ ಮಾಡಿದ್ದೆ ಎಂದು ಸ್ಮರಿಸಿದರು.

ಕರ್ನಾಟಕದಲ್ಲಿ ಇಂದು ಸುಮಾರು 71 ವೈದ್ಯಕೀಯ ಕಾಲೇಜುಗಳಿದ್ದು, ಈ ಪೈಕಿ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ. ವಿಜಯಪುರ ಜಿಲ್ಲೆ ಸೇರಿದಂತೆ ಉಳಿದ ಜಿಲ್ಲೆಗಳಲ್ಲಿಯೂ ಹಂತ ಹಂತವಾಗಿ ವೈದ್ಯಕೀಯ ಕಾಲೇಜುಗಳು, ಟ್ರಾಮಾ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದರು.

*ಸ್ಥಳೀಯವಾಗಿ ಆರೋಗ್ಯ ಸೇವೆಗಳು ದೊರಕಬೇಕು*
ನಮ್ಮ ಸಮಾಜದಲ್ಲಿ ಬಡವರೇ ಹೆಚ್ಚಾಗಿದ್ದು, ಬಡವರೆಲ್ಲರೂ ಸರ್ಕಾರಿ ಆಸ್ಪತ್ರೆಗಳ ಮೇಲೆ ಅವಲಂಬಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಬಹಳ ದುಬಾರಿ. ದುಬಾರಿ ಚಿಕಿತ್ಸೆಯನ್ನು ಸಾಮಾನ್ಯ ಜನರು ಧರಿಸುವುದು ಕಷ್ಟ. ಸ್ಥಳೀಯವಾಗಿ ಆರೋಗ್ಯ ಸೇವೆ ನೀಡಬೇಕಾದರೆ ಪ್ರತಿ ಜಿಲ್ಲೆಯಲ್ಲಿ ಒಂದು ವೈದ್ಯಕೀಯ ಕಾಲೇಜು ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ, ಟ್ರಾಮಾ ಸೆಂಟರ್ ಇರಲೇಬೇಕು ಎಂದರು.

*ಎಲ್ಲರನ್ನೂ ಒಳಗೊಂಡಿರುವ ಸರ್ಕಾರ*.
ನಮ್ಮದು ಎಲ್ಲರನ್ನೂ ಒಳಗೊಂಡಿರುವ ಸರ್ಕಾರ. ಯಾವುದೇ ಧರ್ಮ, ಜಾತಿ, ಪಕ್ಷಕ್ಕೆ ಸೇರಿದವರಾಗಿದ್ದರು ಅವರನ್ನು ಭೇದ ಭಾವವಿಲ್ಲದೆ, ಸೀಮಾತೀತವಾಗಿ ಕಾಣುತ್ತೇವೆ. ಎಲ್ಲ ಜಾತಿ, ಧರ್ಮ, ಪಕ್ಷಗಳಿಗೆ ಸೇರಿದ ಬಡವರಿಗೆ ನಮ್ಮ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಬಡವರಿಗೆ ಆರ್ಥಿಕ ಸಾಮಾಜಿಕ ಶಕ್ತಿ ತುಂಬುವುದು ಇಂದಿನ ಅಗತ್ಯವಾಗಿದ್ದು ಸಂವಿಧಾನದಲ್ಲಿ ಜಾತಿ, ವರ್ಗ ರಹಿತವಾದ ಸಮಾಜ ನಿರ್ಮಾಣ ಮಾಡಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಕಟ್ಟಕಡೆಯ ಮನುಷ್ಯನಿಗೂ ಆರ್ಥಿಕ, ಸಾಮಾಜಿಕ ಸೌಲಭ್ಯ ದೊರಕಬೇಕು. ಆಗ ಮಾತ್ರ ಸಂವಿಧಾನದ ಆಶಯವಾದ ಜಾತ್ಯತೀತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಇದನ್ನು ನಮ್ಮ ಸರ್ಕಾರ ಚಾಚೂ ತಪ್ಪದೇ ಮಾಡುತ್ತಿದೆ ಎಂದರು.

*ಪ್ರತಿ ವರ್ಷ 52000 ಕೋಟಿ ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಲಾಗುತ್ತಿದೆ*
ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆಗಳು ಕೇಳಿ ಬಂದಾಗ ನಾವು ಯೋಜನೆ ನಿಲ್ಲಿಸಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಮೊದಲನೇ ವರ್ಷದಲ್ಲಿಯೇ ಜಾರಿ ಮಾಡಲಾಗಿದೆ. ಒಂದು ಲಕ್ಷದ 12 ಸಾವಿರ ಕೋಟಿ ರೂಪಾಯಿ ಗಳನ್ನು ಎರಡುವರೆ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ವೆಚ್ಚ ಮಾಡಿದ್ದರೂ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿಲ್ಲ. ಪ್ರತಿ ವರ್ಷ 52000 ಕೋಟಿ ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಲಾಗುತ್ತಿದೆ ಎಂದರು.

*ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿಲ್ಲ*
ಜನರು ತಪ್ಪು ತಿಳಿದುಕೊಳ್ಳುವ ರೀತಿಯಲ್ಲಿ ಅಪಪ್ರಚಾರವಾಗುತ್ತಿದೆ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿಗಳು ಹಾವೇರಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಕಟ್ಟಡ, ಪ್ರವಾಸಿ ಮಂದಿರ, ವಾಲ್ಮೀಕಿ ಭವನ, ನೂತನ ಗ್ರಂಥಾಲಯ, ಜಿಲ್ಲಾ ಸಾರ್ವಜನಿಕ ಆಸ್ಪತ್ರೆ 250 ರಿಂದ 500 ಹಾಸಿಗೆಗಳ ಆಸ್ಪತ್ರೆಗೆ ಮೇಲ್ದರ್ಜೆಗೆ ಏರಿಸಲಾಗಿದೆ. ಹಾವೇರಿ ವೈದ್ಯಕೀಯ ಕಾಲೇಜಿಗೆ ಸುಮಾರು 500 ಕೋಟಿ ವೆಚ್ಚ ಮಾಡಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ 194 ಕೋಟಿ ನೀಡಿದ್ದು, 300ಕ್ಕೂ ಹೆಚ್ಚು ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಭರಿಸಿದೆ ಎಂದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!