ಮಂಡ್ಯ: ಖಾಲಿ ಉಳಿದಿರುವ ಸರ್ಕಾರಿ ಉದ್ಯೋಗಗಳಿಗೆ ಶೀಘ್ರ ನೇಮಕಾತಿ ಮಾಡುವಂತೆ ಒತ್ತಾಯಿಸಿ ನಡೆಸುತ್ತಿದ್ದ ಶಾಂತಿಯುತ ಮೆರವಣಿಗೆ ನಡೆಸುತ್ತಿದ್ದ ಜನಸಾಮಾನ್ಯರ ವೇದಿಕೆ ಹಾಗೂ ದ್ರಾವಿಡ ಕನ್ನಡಿಗರು ಚಳುವಳಿಯ ಮುಂದಾಳುಗಳನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಮಂಡ್ಯದ ಮಹಾವೀರ ಸರ್ಕಲ್‌ನಲ್ಲಿ ವಿವಿಧ ಪ್ರಗತಿಪರ ಸಂಘ ಸಂಸ್ಥೆಗಳು ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದವು.
ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ ಮಾತನಾಡಿ “ಸರ್ಕಾರ ಮತ್ತು ಪೊಲೀಸರು ಧಾರವಾಡದಲ್ಲಿ ಶಾಂತಿಯುತ ಹೋರಾಟ ನಡೆಸುತ್ತಿರುವವರನ್ನು ಬಂಧಿಸಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಬಗೆದ ದ್ರೋಹವಾಗಿದೆ. ರಾಜ್ಯ ಸರ್ಕಾರ ಖಾಲಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡುವ ಬದಲು ಉದ್ಯೋಗ ಕೇಳಿದ ಯುವಜನರನ್ನು ಬಂಧಿಸುವ ಮೂಲಕ ಜೈಲು ಭರ್ತಿ ಮಾಡುತ್ತಿದೆ. ಕೂಡಲೇ ಎಲ್ಲ ಹೋರಾಟಗಾರರ ಬಿಡುಗಡೆ ಮಾಡದಿದ್ದರೆ ನಾಳೆ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ ನೀಡಲಾಗುವುದು” ಎಂದು ಎಚ್ಚರಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಡಿ.ಜಯರಾಮ್ ಅವರು ಮಾತನಾಡಿ “ಜನಪರವಾಗಿ ಇಂದಿನ ದಿನಗಳಲ್ಲಿ ಮಾತನಾಡುವುದೇ ಕಷ್ಟವಾಗಿದೆ. ಜನರ ಹಕ್ಕುಗಳ ಸಂರಕ್ಷಣೆಗಾಗಿ ಹೋರಾಡುವ ಚಳುವಳಿಗಾರರ ಮನವಿಯನ್ನು ಪೊಲೀಸರು ಕೇಳಿಸಿಕೊಳ್ಳುವ ಕೆಲಸ ಮಾಡದೆ, ಬಂಧಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೆಲದನಿ ಬಳಗದ ಮಂಗಲ ಲಂಕೇಶ್, ಉಪನ್ಯಾಸಕ ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು, ಹೋರಾಟಗಾರ ಷಣ್ಮುಖೇಗೌಡ, ತಿಮ್ಮೇಗೌಡ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು.


