Wednesday, December 17, 2025
spot_img

ಮಂಡ್ಯದಲ್ಲಿ ಸರ್ಕಾರಿ ಶಾಲೆ ಉಳಿವಿಗಾಗಿ ಉಪವಾಸ ಸತ್ಯಾಗ್ರಹ: ರೈತಸಂಘಕ್ಕೆ ಕನ್ನಡಪರ ಸಂಘಟನೆಗಳ ಬಲ

ಕರ್ನಾಟಕ ಪಬ್ಲಿಕ್‌ ಶಾಲೆಗಳ ಆರಂಭದ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ, ಮುಚ್ಚುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಮಂಡ್ಯ ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರಾಜ್ಯ ಎಸ್‌ಡಿಎಂಸಿ ಸದಸ್ಯರ ಸಂಘ ಆರಂಭಿಸಿರುವ ಮೂರು ಉಪವಾಸ ಸತ್ಯಾಗ್ರಹ ಗಂಬೀರ ಸ್ವರೂಪ ಪಡೆದುಕೊಳ್ಳುತ್ತಿದೆ.

ಸರ್ಕಾರಿ ಶಾಲೆಗಳ ಉಳಿವಿಗಾಗಿ ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಆರಂಭವಾಗಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಬೀದರ್‌, ಕಲಬುರ್ಗಿ, ರಾಯಚೂರು, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ಹದಿನೈದಕ್ಕೂ ಹೆಚ್ಚು ಜಿಲ್ಲೆಗಳ ಸರ್ಕಾರಿ ಶಾಲೆಗಳ ಎಸ್‌ಡಿಎಂಸಿ ಸದಸ್ಯರು ಬಂದು ಭಾಗಿಯಾಗಿದ್ದಾರೆ. ಇದರ ಜತೆಗೆ ಮೊದಲ ದಿನವೇ ಕರ್ನಾಟಕ ರಕ್ಷಣಾ ವೇದಿಕೆ, ಕರುನಾಡ ಸೇವಕರು ಸಂಘಟನೆ, ಕರ್ನಾಟಕ ರಾಷ್ಟ್ರ ಸಮಿತಿ ಸೇರಿದಂತೆ ವಿವಿಧ ಜನಪರ ಸಂಘಟನೆಗಳ ಮುಖಂಡರು ಭಾಗಿಯಾಗಿ ಸತ್ಯಾಗ್ರಹಕ್ಕೆ ಬಲ ತುಂಬಿದ್ದಾರೆ.

ಇಂಡುವಾಳು ಚಂದ್ರಶೇಖರ್‌, ಸಂತೋಷ್‌ ಗೌಡ ಮತ್ತು ಧನುಷ್‌ ಗೌಡರ ನೇತೃತ್ವದಲ್ಲಿ ರೈತಸಂಘದ ಎಲ್ಲಾ ತಾಲ್ಲೂಕುಗಳ ಮುಖಂಡರು, ಕಾರ್ಯಕರ್ತರು ಆರಂಭಿಸಿರುವ ಈ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಡಿ.ಜಯರಾಮ್‌ “ಸರ್ಕಾರಿ ಶಾಲೆಗಳನ್ನು ಕೆಪಿಎಸ್‌ ಶಾಲೆಯೊಂದಿಗೆ ವಿಲೀನ ಮಾಡುತ್ತಿರುವುದು ಬಡವರ ಮಕ್ಕಳಿಗೆ ಇನ್ನಷ್ಟು ಸಂಕಷ್ಟ ತಂದೊಡ್ಡಲಿದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕಾದ ಸರ್ಕಾರವೇ ಮ್ಯಾಗ್ನೆಟ್‌ ಮಾದರಿ ಅನುಸರಿಸಿ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಅಕ್ಷಮ್ಯ” ಎಂದು ಹೇಳಿದರು.

ಮೊದಲ ದಿನದ ಉಪವಾಸದಲ್ಲಿ ಕೆ.ಬೋರಯ್ಯ, ಸೋ.ಶಿ.ಪ್ರಕಾಶ್‌ ಸೇರಿದಂತೆ ಹಲವಾರು ರೈತಮುಖಂಡರು ಭಾಗಿಯಾಗಿದ್ದರು. ಕೆಆರ್‌ಎಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು, ಉಪನ್ಯಾಸಕ ರಾಜೇಂದ್ರ ಸಿಂಗ್‌ ಬಾಬು, ಶಿವಕುಮಾರ ಆರಾಧ್ಯ, ರಾಜೂಗೌಡ ಮತ್ತಿತರರು ಭಾಗವಹಿಸಿದ್ದರು.

ಜನ ಬೀದಿಗಿಳಿಯುವ ಮುನ್ನ ಎಚ್ಚೆತ್ತುಕೊಳ್ಳಿ: ಇಂಡುವಾಳು ಚಂದ್ರಶೇಖರ್

ದೇಶಕ್ಕೆ ಸ್ವತಂತ್ರ ಬಂದು ಸುಮಾರು 78 ವರ್ಷವಾದರೂ, ಸಂವಿಧಾನದಲ್ಲಿ ಆರ್ಟಿಕಲ್ 21ಎ ಅಡಿಯಲ್ಲಿ ನೀಡಲಾಗಿರುವ ಗುಣಮಟ್ಟದ ಉಚಿತ ಶಿಕ್ಷಣ ಮೂಲಭೂತ ಹಕ್ಕುಗಳನ್ನು ಸರ್ಕಾರ ಜನಸಾಮಾನ್ಯರಿಗೆ ಕೊಟ್ಟೇ ಇಲ್ಲ. ಇದರ ಜೊತೆಗೆ “ಮ್ಯಾಗ್ನೆಟ್ ಶಾಲೆಗಳು ಹಾಗೂ ಕೆಪಿಎಸ್ ಶಾಲೆಗಳು ಎಂಬ ಹೆಸರಿನಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ, ಶಾಶ್ವತವಾಗಿ ಸರ್ಕಾರಿ ಶಾಲೆಗಳಿಗೆ ಬೀಗ ಹಾಕಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಪರ ದಲ್ಲಾಳಿಯಾಗಿ ಸರ್ಕಾರ ಸಮಾಜ ವಿರೋಧಿ, ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದೆ. ಇದರ ವಿರುದ್ಧ ಜನಸಾಮಾನ್ಯರು ಬೀದಿಗಿಳಿಯುವ ಸಮಯ ಬಂದಿದೆ.

ಇದು ಆರಂಭವಷ್ಟೇ, ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಲಿ: ಎಂ.ಬಿ.ನಾಗಣ್ಣಗೌಡ

“ಹತ್ತು ಸಾವಿರ ಸರ್ಕಾರಿ ಶಾಲೆಗಳು ಮುಚ್ಚಲಿವೆ ಎಂದು ಈಗಾಗಲೇ ದಿನಪತ್ರಿಕೆಗಳ ವರದಿಗಳು ಹೇಳುತ್ತಿವೆ. ಸರ್ಕಾರ ಈಗ ಅದನ್ನು ನಿಜ ಮಾಡಲು ಹೊರಟಿದೆ. ಇಂದು ಬಹುತೇಕ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಾಜಕಾರಣಿಗಳ ಕುಟುಂಬದವರ ಹಿಡಿತದಲ್ಲಿದೆ. ಈಗ ಮಂಡ್ಯದಲ್ಲಿ ಆರಂಭವಾಗಿರುವ ಈ ಸರ್ಕಾರಿ ಶಾಲೆ ಉಳಿಸಿ ಹೋರಾಟ ಜನಚಳುವಳಿಯಾಗಿ ರೂಪಾಂತರಗೊಳ್ಳುವ ಮೊದಲೇ ಎಚ್ಚೆತ್ತುಕ್ಕೊಂಡು ಬಡವರ ಮಕ್ಕಳು ಓದುವ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸ ಮಾಡಬೇಕು.” ಎಂದು ಹೇಳಿದರು.

ಏಕರೂಪ ಸಮಾನ ಶಿಕ್ಷಣ ನೀತಿ ಜಾರಿಗೆ ಬರಲಿ: ಸಂತೋಷ್‌ ಗೌಡ

ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಸರ್ಕಾರಿ ಶಾಲೆಗಳು ಉಳಿಯಬೇಕು. ಸರ್ಕಾರಿ ಶಾಲೆಗಳೇ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು. ಆದ್ದರಿಂದ ರಾಜ್ಯದಲ್ಲಿ ಏಕರೂಪ ಸಮಾನ ಶಿಕ್ಷಣ ನೀತಿಯನ್ನು ಜಾರಿಗೆ ತಂದು, ಇವತ್ತಿನ ದಿನ ರಾಜಕಾರಣಿಗಳು ಹಾಗೂ ಸರ್ಕಾರಿ ನೌಕರರ ಮಕ್ಕಳಿಗೆ ಸಿಗುತ್ತಿರುವ ಗುಣಮಟ್ಟದ ಶಿಕ್ಷಣ ಬಡವರ ಮಕ್ಕಳಿಗೂ ಸಿಗಬೇಕು ಎಂಬ ಬೇಡಿಕೆಯೊಂದಿಗೆ ಮಂಡ್ಯ ಜಿಲ್ಲಾ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಂಘ ಮೂರು ದಿನಗಳ ಉಪವಾಸ ಸತ್ಯಾಗ್ರಹ ಕೈಗೊಂಡಿದೆ.

 

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!