ನಗರ ಸ್ಥಳೀಯ ಸಂಸ್ಥೆಗಳಿಗೆ ಕರಡು ಮೀಸಲಾತಿ
ದಾಂಡೇಲಿ, ಯಲ್ಲಾಪುರಕ್ಕೆ ನಿಗದಿಯಾಗದ ಮೀಸಲಾತಿ: ಆಕ್ಷೇಪಣೆ ಸಲ್ಲಿಕೆಗೆ ವಾರದ ಗಡುವು
12/11/2025
ಕಾರವಾರ: ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳಿಗೆ ವಾರ್ಡ್‌ವಾರು ಕರಡು ಮೀಸಲಾತಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗೆ ಕೇವಲ 7 ದಿನಗಳ ಕಾಲಾವಕಾಶ ನೀಡಲಾಗಿದೆ.
ಅಧಿಕಾರ ಅವಧಿ ಪೂರೈಸಿರುವ ಕಾರವಾರ ಮತ್ತು ಶಿರಸಿ ನಗರಸಭೆಯ 62 ವಾರ್ಡ್‌ಗಳು, ಹಳಿಯಾಳ, ಕುಮಟಾ ಮತ್ತು ಅಂಕೋಲಾ ಪುರಸಭೆಯ 66 ವಾರ್ಡ್‌ಗಳು, ಸಿದ್ದಾಪುರ, ಮುಂಡಗೋಡ ಮತ್ತು ಹೊನ್ನಾವರ ಪಟ್ಟಣ ಪಂಚಾಯಿತಿಯ 54 ವಾರ್ಡುಗಳಿಗೆ ಜಾತಿವಾರು ಮೀಸಲಾತಿ ಪ್ರಕಟಿಸಲಾಗಿದೆ.
ಅವಧಿ ಮುಗಿದಿರುವ ದಾಂಡೇಲಿ ನಗರಸಭೆ, ಯಲ್ಲಾಪುರ ಪಟ್ಟಣ ಪಂಚಾಯಿತಿ ಮೀಸಲಾತಿ ಪಟ್ಟಿ ಪ್ರಕಟವಾಗಿಲ್ಲ. ಭಟ್ಕಳ ಪುರಸಭೆ ಅಧಿಕಾರಾವಧಿ ಪೂರ್ಣಗೊಂಡಿದ್ದರೂ ನಗರಸಭೆ ಮೇಲ್ದರ್ಜೆಗೆ ಏರಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಪಟ್ಟಿ ಪ್ರಕಟಿಸಿಲ್ಲ. ಜಾಲಿ ಪಟ್ಟಣ ಪಂಚಾಯಿತಿ ಅಧಿಕಾರ ಅವಧಿ ಇನ್ನೂ ಪೂರ್ಣಗೊಂಡಿಲ್ಲ.
ನ.10 ರಂದು ಪ್ರಕಟವಾದ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿರುವ ನಗರಾಭಿವೃದ್ಧಿ ಇಲಾಖೆಯು ಅಧಿಸೂಚನೆ ಪ್ರಕಟಗೊಂಡ ಏಳು ದಿನದ ಒಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ.
‘ಅಧಿಕಾರ ಅವಧಿ ವಿಸ್ತರಣೆಗೆ ಕೋರಿ ಮತ್ತು ಆಡಳಿತಾಧಿಕಾರಿ ನೇಮಕ ತಡೆಹಿಡಿಯಲು ಕೋರ್ಟ್ ಮೊರೆಹೋಗಲಾಗಿದೆ. ಆಡಳಿತಾಧಿಕಾರಿ ನೇಮಕ ಆದೇಶಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಇದರ ನಡುವೆಯೇ ತರಾತುರಿಯಲ್ಲಿ ನಗರಾಭಿವೃದ್ಧಿ ಇಲಾಖೆ ಕರಡು ಮೀಸಲಾತಿ ಪಟ್ಟಿ ಪ್ರಕಟಿಸಿದೆ. ಪಟ್ಟಿಯಲ್ಲಿ ಹಲವು ದೋಷಗಳಿವೆ. ಮೀಸಲಾತಿ ಹಂಚಿಕೆಯೂ ತರಾತುರಿಯಲ್ಲಿ ನಡೆದಿದೆ. ಆಕ್ಷೇಪಣೆಗೆ ಅತಿ ಕಡಿಮೆ ಕಾಲಮಿತಿ ನೀಡಿರುವುದು ಸರಿಯಲ್ಲ’ ಎಂದು ನಗರಸಭೆಯ ಹಲವು ಸದಸ್ಯರು ಆಕ್ಷೇಪ ಎತ್ತಿದ್ದಾರೆ.


