ಮೈಶುಗರ್ ಕಾರ್ಖಾನೆ ಸ್ಥಳದಲ್ಲೆ ಹೊಸ ಕಾರ್ಖಾನೆ ಸ್ಥಾಪನೆಗೆ ರೈತ ಮುಖಂಡರ
ಒಕ್ಕೊರಲಿನ ಆಗ್ರಹ
ಮಂಡ್ಯ, ಜುಲೈ ೧೧: ರಾಜ್ಯ ಸರ್ಕಾರ ಬಜೆಟ್ ನಲ್ಲಿ ಪ್ರಸ್ತಾಪ ಮಾಡಿರುವಂತೆ ಮಂಡ್ಯ ಮೈಶುಗರ್ ಕಾರ್ಖಾನೆಯನ್ನು ಹೊಸದಾಗಿ ಸ್ಥಾಪನೆ ಮಾಡುವುದಾದರೆ ಬೇರೆಡೆಗೆ ಸ್ಥಳಾಂತರ ಮಾಡದೆ ಕಾರ್ಖಾನೆ ಇರುವ ಸ್ಥಳದಲ್ಲೇ ಸ್ಥಾಪನೆ ಮಾಡುವಂತೆ ರೈತ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಮೈಶುಗರ್ ಕಚೇರಿ ಆವರಣದಲ್ಲಿ ಕಾರ್ಖಾನೆ
ಅಧ್ಯಕ್ಷ ಸಿ.ಡಿ.ಗಂಗಾಧರ್ ಅಧ್ಯಕ್ಷತೆಯಲ್ಲಿ ಹೊಸ ಕಾರ್ಖಾನೆ ಸ್ಥಾಪನೆ ಸಂಬಂಧ ಸಾಧಕ ಭಾದಕಗಳ ಚರ್ಚೆ ಕುರಿತ ಪೂರ್ವಭಾವಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ರೈತ ಮುಖಂಡರು, ಕಾರ್ಖಾನೆಯನ್ನು ಬೇರೆಡೆಗೆ ಸ್ಥಳಾಂತರ ಮಾಡುವುದು ಬೇಡ, ಬದಲಿಗೆ ಕಾರ್ಖಾನೆಯ ಈಗಿನ ಸ್ಥಳದಲ್ಲೇ ಹೊಸ ಕಾರ್ಖಾನೆ ಮಾಡಲಿ. ಜತೆಗೆ ಕಾರ್ಖಾನೆ ಉನ್ನತಿಗಾಗಿ 5 ಸಾವಿರ ಸಾಮರ್ಥವಿರುವ ಮಿಲ್ ಸ್ಥಾಪನೆ ಮಾಡಬೇಕು. ಅಲ್ಲದೇ ಕೋ-ಜನರೇಷನ್, ಡಿಸ್ಟಿಲರಿ ಆರಂಭಿಸಬೇಕು, ಉತ್ತಮ ಇಳುವರಿ ಬರುವಂತೆ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ನಡೆಸಿಕೊಂಡು ಹೋಗಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಮುಂದಿನ ಪೀಳಿಗೆಗೆ ಕಾರ್ಖಾನೆಯನ್ನು ಉಳಿಸುವ ಅಗತ್ಯತೆಯಿಂದಾಗಿ ಸರ್ಕಾರ ಹೊಸ ಕಾರ್ಖಾನೆ ಸ್ಥಾಪನೆಗೆ ಮುಂದಾಗಿದೆ. ಆದರೆ ಕಾರ್ಖಾನೆ ಎಲ್ಲಿ ಸ್ಥಾಪನೆ ಮಾಡಬೇಕೆಂದು ಸರ್ಕಾರ ರೈತ ಮುಖಂಡರ ಅಭಿಪ್ರಾಯ ಸಂಗ್ರಹಣೆ ಮಾಡಿ ನಿರ್ಧಾರ ಮಾಡಲಿದೆ. ಹೊಸ ಕಾರ್ಖಾನೆ ಸ್ಥಾಪನೆ ಸಂಬಂಧದ ಡಿಪಿಆರ್ ಚರ್ಚೆ ಹಂತದಲ್ಲಿದೆ. ಹೀಗಾಗಿ ರೈತರ ಅಭಿಪ್ರಾಯ ಕ್ರೋಢಿಕರಿಸಲು ಶೀಘ್ರದಲ್ಲಿ ರೈತಮುಖಂಡರ ಸಭೆ ಆಯೋಜಿಸಲಾಗುವುದು ಎಂದರು.
ಮೈಸೂರು ಮಹಾರಾಜರು ತಮ್ಮ ಪತ್ನಿ ಒಡವೆ ಮಾರಾಟ ಮಾಡಿ ಮೈಶುಗರ್ ಹಾಗೂ ಕೆಅರ್ ಎಸ್ ಕಟ್ಟಿಸಿದ್ದಾರೆ. ಹೀಗಾಗಿ ಇದನ್ನು ಮುಂದಿನ ಪೀಳಿಗೆಗೆ ಉಳಿಸಬೇಕಿದೆ. ಜತೆಗೆ ತಾಂತ್ರಿಕ ತಜ್ಞರು ನೀಡುವ ವರದಿಯಾಧಾರದ ಮೇಲೆ ಮೈಶುಗರ್ ಕಾರ್ಖಾನೆಯಲ್ಲಿ ಖಾಸಗಿ ಕಾರ್ಖಾನೆ ಜತೆ ಪೈಪೋಟಿಗೆ ಸಜ್ಜುಗೊಳ್ಳುವ ದೃಷ್ಟಿಯಿಂದ 10ಸಾವಿರ ಟನ್ ಸಾಮರ್ಥ್ಯದ ಹೊಸ ಮಿಲ್ ಸ್ಥಾಪನೆ ಮಾಡಲು ನಿರ್ಧಾರ ಮಾಡಲಾಗುವುದು. ಅಕ್ಟೋಬರ್ ವೇಳೆಗೆ ಕಾರ್ಖಾನೆ ಮೇಲಿರುವ 249ಕೋಟಿ ರೂ.ಸಾಲವನ್ನು ಕಡಿಮೆ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದ ಅವರು, ಈಗಾಗಲೇ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡರು ವಿದ್ಯುತ್ ಬಿಲ್ ಬಾಕಿ ಮನ್ನಾ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದರಿಂದ 52 ಕೋಟಿ ಹೊರೆ ಕೂಡಾ
ಕಡಿಮೆಯಾಗಲಿದೆ ಎಂದರು.
ಜುಲೈ 12ರಂದು ಶುಕ್ರವಾರ ಕೋ-ಜನ್ ಟ್ರಯಲ್ ಆಗಲಿದೆ. ನಂತರ ಕಾರ್ಖಾನೆಗೆ ಕಬ್ಬು ಸರಬರಾಜಾದಂತೆ ಬಾಯ್ಲರ್ ವಿಭಾಗವನ್ನು ಅಪ್ ಡೇಟ್ ಮಾಡಲಾಗುವುದು. ಜತೆಗೆ ಕಾರ್ಖಾನೆ ಕಬ್ಬು ನುರಿಸಲು ಎಲ್ಲಾ ತಂಡಗಳು ಸಜ್ಜಾಗಿದೆ. ಕಾರ್ಖಾನೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರನ್ನು ಹೆಚ್ಚುವರಿಯಾಗಿ ಎಂಡಿಯಾಗಿ ಸರ್ಕಾರ ನೇಮಕ ಮಾಡಿದೆ. ಜುಲೈ 22ರಿಂದ 28ರೊಳಗೆ ಕಬ್ಬು ನುರಿಸುವಿಕೆ ಆರಂಭಿಸಲಾಗುವುದು. ಪ್ರತಿ 10ದಿನಕ್ಕೊಮ್ಮೆ ಪ್ರತಿ ವಿಭಾಗಕ್ಕೂ ಖುದ್ದು ತೆರಳಿ ಪರಿಶೀಲನೆ ನಡೆಸಲಿದ್ದು, ನುರಿಸುವಿಕೆ ವೇಳೆ ಕಬ್ಬು ಒಣಗಿರುವುದಕ್ಕೆ ಅವಕಾಶ ನೀಡಿದರೆ, ಯಾರಿಂದ ಲೋಪವಾಗುತ್ತೆ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಮುಂದಿನ ಎರಡು ವರ್ಷದಲ್ಲಿ ಪಾರದರ್ಶಕ ಆಡಳಿತ ನಡೆಸುವ ಮೂಲಕ ಮೈಶುಗರ್ ಕಾರ್ಖಾನೆಯನ್ನು ನಷ್ಟದಿಂದ ಹೊರ ತರಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಹೀಗಾಗಿ ಕಾರ್ಖಾನೆಗೆ ಸಮರ್ಪಕವಾಗಿ ಕಬ್ಬು ಸರಬರಾಜು ಮಾಡುವಂತೆ ರೈತರಿಗೆ ರೈತ ಮುಖಂಡರು ಮನವಿ ಮಾಡಬೇಕು ಎಂದರು.
ಕಾರ್ಖಾನೆ ಜನರಲ್ ಮ್ಯಾನೇಜರ್ ಅಣ್ಣ ಸಾಹೇಬ್ ಪಾಟೀಲ್ ಮಾತನಾಡಿ, ಈ ಹಿಂದೆ ಮೈಶುಗರ್ ಕಾರ್ಖಾನೆಯಲ್ಲಿ 330 ದಿನಗಳವರೆಗೂ ಕಬ್ಬು ನುರಿಸುವಿಕೆ ಕಾರ್ಯ ನಡೆದಿದ್ದು, 10ರಿಂದ 13ಲಕ್ಷ ಟನ್ ವರೆಗೂ ಕಬ್ಬು ನುರಿಸಲಾಗಿದೆ. ಕಳೆದ 2023-24ರಲ್ಲಿ 110ದಿನ ಕಾರ್ಖಾನೆ ನಡೆದಿದ್ದು 2.5ಲಕ್ಷ ಟನ್ ಕಬ್ಬು ನುರಿಸಲಾಗಿದೆ. ಹೀಗಾಗಿ ಗುರಿ ಮುಖ್ಯ ಅಷ್ಟೆ ಅಲ್ಲ, ಕಬ್ಬು ಎಷ್ಟರಮಟ್ಟಿಗೆ ಲಭ್ಯತೆಯಾಗಲಿದೆ ಎಂಬುದು ಕೂಡ ಅಷ್ಟೇ ಮುಖ್ಯ ಎಂದರು.
ಬಾಗಲಕೋಟೆಯಲ್ಲಿ ನಿರಾಣಿ ಶುಗರ್ ಪ್ರಾರಂಭದಲ್ಲಿ
500ಟನ್ ನಿಂದ ಈಗ ನಾಲ್ಕು ಕಾರ್ಖಾನೆಗಳಿಂದ 40ಸಾವಿರ ಟನ್ ಕಬ್ಬು ನುರಿಸುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ನಿತ್ಯ 1ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದಾರೆ. ಉತ್ತರ ಕರ್ನಾಟಕ ಭಾಗಗಳಲ್ಲಿ ಸಕ್ಕರೆ ಕಾರ್ಖಾನೆಗಳು ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಆಲೆಮನೆಗಳು ಇಲ್ಲ. ಜತೆಗೆ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಕಾರ್ಖಾನೆ ಪ್ರಾರಂಭಿಸಲಿದ್ದು ಇಳುವರಿ ಹೆಚ್ಚಾಗಲಿದೆ. ಆದರೆ ದಕ್ಷಿಣ ಕರ್ನಾಟಕದಲ್ಲಿ ಜೂನ್-ಜುಲೈ ತಿಂಗಳಲ್ಲಿ ಕಾರ್ಖಾನೆ ಪ್ರಾರಂಭಿಸಲಿದ್ದು, ಈ ವೇಳೆ ಮಳೆಗಾಲವಾಗಿರುವುದರಿಂದ ಇಳುವರಿ ಕಡಿಮೆಯಾಗಲಿದೆ. ಅದೇ ಜನವರಿ-ಫೆಬ್ರವರಿ ವೇಳೆಯಲ್ಲಿ ಇಳುವರಿ ಹೆಚ್ಚಾಗಲಿದೆ. ಅಲ್ಲದೇ ಕಡಿಮೆ ದಿನಗಳಲ್ಲಿ ಹೆಚ್ಚು ಕಬ್ಬು ನುರಿಸುವ ಗುರಿ ಇರಬೇಕು ಎಂದರು.
ಮೈಶುಗರ್ ಕಾರ್ಖಾನೆಗೆ 10ಸಾವಿರ ಟನ್ ಸಾಮರ್ಥದ ಮಿಲ್ ಹಾಕಿದರೂ ಈಗಿನ ತಂತ್ರಜ್ಞಾನದಲ್ಲಿ 2ಸಾವಿರ, 3, 5 ಹಾಗೂ 7.5ಸಾವಿರಕ್ಕೆ ನಿಗದಿ ಮಾಡಲು ಸಾಧ್ಯವಿದೆ ಎಂದರು.
ಸಭೆಯಲ್ಲಿ ಮೈಶುಗರ್ ಹಾಲಹಳ್ಳಿ ರಾಮಲಿಂಗಯ್ಯ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಮೇಲುಕೋಟೆ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್, ರೈತ ಮುಖಂಡರಾದ ಸುನಂದಜಯರಾಂ, ಸಿ.ಕುಮಾರಿ, ಕೆ.ಬೋರಯ್ಯ, ಮುದ್ದೇಗೌಡ, ಇಂಡುವಾಳು ಚಂದ್ರಶೇಖರ್, ಬೋರಲಿಂಗಯ್ಯ, ಮರಿಚನ್ನೇಗೌಡ, ಶಿವನಂಜು, ನುಡಿಭಾರತಿ ಬಸವೇಗೌಡ, ಶಿವರಾಂ, ಶಿವಲಿಂಗಯ್ಯ, ವೇಣು, ಕೃಷ್ಣಪ್ರಸಾದ್, ಪ್ರಕಾಶ್, ಚಂದ್ರು, ತಳಗವಾದಿ ನಾರಾಯಣ್, ಹಲ್ಲೆಗೆರೆ ಶಿವರಾಂ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ನಿರ್ದೇಶಕ ಎನ್.ಕೃಷ್ಣೇಗೌಡ, ಕಾರ್ಖಾನೆ ಜನರಲ್ ಮ್ಯಾನೇಜರ್ ಅಣ್ಣ ಸಾಹೇಬ್ ಪಾಟೀಲ್, ಡೆಪ್ಯೂಟಿ ಚೀಪ್ ಇಂಜನಿಯರ್ ಶಿವಶಂಕರ್,
ಮುಖ್ಯ ಲೆಕ್ಕಾಧಿಕಾರಿ ಖಾದರ್ ಪಾಷ ಇತರರಿದ್ದರು.