*ಸಾರ್ವಜನಿಕ ಹಿತಾಸಕ್ತಿಗಾಗಿ ಬೆಟ್ಟಿಂಗ್ ವಿರುದ್ಧ ಪೋಸ್ಟರ್ ಅಭಿಯಾನ*
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಂಡ್ಯದ ಜನಪರ ಸಂಘಟನೆಗಳು ರೂಪಿಸಿರುವ ಬೆಟ್ಟಿಂಗ್ ಸಹಾಯವಾಣಿ ಪೋಸ್ಟರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.
ಮಂಡ್ಯದ ಎಲ್ಲ ಜನಪರ ಸಂಘಟನೆಗಳು ಒಗ್ಗಟ್ಟಿನಿಂದ ಮಾಡುತ್ತಿರುವ ಬೆಟ್ಟಿಂಗ್ ವಿರುದ್ಧದ ಈ ಪೋಸ್ಟರ್ ಅಭಿಯಾನದ ಉದ್ಧೇಶ ಸಮಾಜಕ್ಕೆ ಪೂರಕವಾಗಿದ್ದು, ಸಹಾಯವಾಣಿಗೆ ಬರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ದಂಧೆ ಮಾಡುವವರ ಮೇಲೆ ಪೊಲೀಸ್ ಇಲಾಖೆ ಕ್ರಮ ಜರುಗಿಸಲಿದೆ ಎಂದು ಹೇಳಿದರು.
ಪೊಲೀಸ್ ಇಲಾಖೆ ಬೆಟ್ಟಿಂಗ್ ನಿಯಂತ್ರಿಸಲು ಸಹಾಯವಾಣಿ ಆರಂಭಿಸಿದೆ. ಯುವಜನರನ್ನು ದಿಕ್ಕುತಪ್ಪಿಸುತ್ತಿರುವ ಶಕ್ತಿಗಳನ್ನು ಮಟ್ಟಹಾಕುವ ಸಲುವಾಗಿ ಈಗ ಪೋಸ್ಟರ್ ಅಭಿಯಾನ ಆರಂಭಿಸುತ್ತಿದ್ದೇವೆ, ಎಲ್ಲ ಸಮಾನ ಮನಸ್ಕ ಗೆಳೆಯರು ಜತೆಯಾಗಿ. ಬೆಟ್ಟಿಂಗ್ ಮುಕ್ತ ಮಂಡ್ಯ ನಿರ್ಮಾಣಕ್ಕೆ ಕೈ ಜೋಡಿಸಿ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಜಿ. ಪೂರ್ಣಿಮಾ ಹೇಳಿದರು.
ಮಂಡ್ಯ ಜಿಲ್ಲೆಯಾದ್ಯಂತ ಜನಜಾಗೃತಿ ಮೂಡಿಸಲು ಮೂರು ಸಾವಿರ ಪೋಸ್ಟರ್ ಮತ್ತು ಏಳು ಸಾವಿರ ಕರಪತ್ರಗಳನ್ನು ಹಂಚುತ್ತಿದ್ದೇವೆ. ಸಮಾಜದ ಹಿತ ಬಯಸುವವರು ಈ ಪೋಸ್ಟರ್ ಅನ್ನು ಪ್ರಿಂಟ್ ತೆಗೆದುಕೊಂಡು, ನಿಮ್ಮ ಹೆಸರು, ಸಂಘ ಸಂಸ್ಥೆಯ ಹೆಸರಿನಲ್ಲಿ ಮುದ್ರಿಸಿ ಶಾಲಾ ಕಾಲೇಜುಗಳಲ್ಲಿ ಮತ್ತು ನಿಮ್ಮ ನಿಮ್ಮ ೂರುಗಳಲ್ಲಿ ಮುಕ್ತವಾಗಿ ಹಂಚಬಹುದು ಎಂದು ಅಖಿಲ ಭಾರತ ವಕೀಲರ ಸಂಘದ ಬಿ.ಟಿ. ವಿಶ್ವನಾಥ್ ಹೇಳಿದರು.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಕಚೇರಿಗಳು, ಪೊಲೀಸ್ ಸ್ಟೇಷನ್‌ಗಳು ಮತ್ತು ಸಾರ್ವಜನಿಕ ಆಸ್ಪತ್ರೆಗಳ ಜತೆಗೆ ಯುವಜನರು ಹೆಚ್ಚಾಗಿ ಒಂದೆಡೆ ಸೇರುವ ಶಾಲಾ ಕಾಲೇಜು, ಕ್ರೀಡಾಂಗಣ, ಬಸ್ ನಿಲ್ದಾಣ, ಟೀ ಶಾಪ್‌ಗಳಲ್ಲಿ ಈ ಪೋಸ್ಟರ್ ಅಂಟಿಸಿ, ಜಾಗೃತಿ ಮೂಡಿಸುವುದರಿಂದ ಬದಲಾವಣೆ ಸಾಧ್ಯವಿದೆ. ನಮ್ಮೊಂದಿಗೆ ಕೈ ಜೋಡಿಸಿ ಎಂದು ಕರುನಾಡ ಸೇವಕರು ಸಂಘಟನೆಯ ಎಂ.ಬಿ. ನಾಗಣ್ಣಗೌಡ ಮನವಿ ಮಾಡಿದರು.

ಹಳ್ಳಿಗಳ ರೈತರ ಮಕ್ಕಳ ಆತ್ಮಹತ್ಯೆಗಳು ಬಹುತೇಕ ಬೆಟ್ಟಿಂಗ್, ಇಸ್ಪೀಟ್ ದಂಧೆಗಳಿಂದ ನಡೆಯುತ್ತಿದ್ದು, ಪೊಲೀಸ್ ಇಲಾಖೆ ಆರಂಭಿಸಿರುವ ಸಹಾಯವಾಣಿಗೆ ದೂರು ನೀಡುವ ಕೆಲಸವನ್ನು ರೈತಸಂಘವೂ ಮಾಡಲಿದೆ. ಕ್ರಮ ಜರುಗಿಸುವ ಹೊಣೆಗಾರಿಕೆ ಪೊಲೀಸರದಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿವಳ್ಳಿ ಚಂದ್ರು ಹೇಳಿದರು.
ಸಿಐಟಿಯು ಸಂಘಟನೆ ಸಿ. ಕುಮಾರಿ.ಸ್ವಂತಮನೆ ನಮ್ಮ ಹಕ್ಕು ಸಂಘಟನೆಯ ಬಿ.ಕೆ ಸತೀಶ್ ಕರುನಾಡು ಸೇವಕರು ಸಂಃಟನೆಯ ಬಿಎಂ ಮನು ಸೇರಿದಂತೆ ಹತ್ತಾರು ಸಂಘಟನೆಗಳ ಮುಖಂಡರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.