ಒಂದೇ ಗಾಯಕ್ಕೆ ವ್ಯತಿರಿಕ್ತ ವರದಿ ; ಇಬ್ಬರು ವೈದ್ಯರ ವಿರುದ್ಧ ಇಲಾಖಾ ತನಿಖೆಗೆ ಹೈಕೋರ್ಟ್ ಆದೇಶ –
ಗಾಯಗೊಂಡು ಚಿಕಿತ್ಸೆ ಪಡೆದ ವ್ಯಕ್ತಿಗೆ ವಿಭಿನ್ನ ವರದಿ ನೀಡಿದ್ದ ಇಬ್ಬರು ವೈದ್ಯರ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.
ಬೆಂಗಳೂರು : ಒಂದೇ ಗಾಯಕ್ಕೆ ಸಂಬಂಧಿಸಿದಂತೆ ಇಬ್ಬರು ವೈದ್ಯರು ವಿಭಿನ್ನ ವರದಿ ನೀಡಿರುವುದು ಆರೋಗ್ಯ ವ್ಯವಸ್ಥೆಯ ಮೇಲಿನ ವಿಶ್ವಾಸಾರ್ಹತೆ ದುರ್ಬಲಗೊಳ್ಳಲು ಕಾರಣವಾಗಲಿದ್ದು, ಇದನ್ನು ಪರಿಶೀಲನೆಗೆ ಒಳಪಡಿಸದಿದ್ದರೆ ಅಪ್ರಮಾಣಿಕ ಶಕ್ತಿಗಳಿಗೆ ಮತ್ತಷ್ಟು ಬಲ ತುಂಬಿದಂತಾಗಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಒಂದೇ ಘಟನೆಯಲ್ಲಾದ ಗಾಯದ ಕುರಿತು ಎರಡು ಆಸ್ಪತ್ರೆಗಳಲ್ಲಿ ಎರಡು ರೀತಿಯ ಪ್ರಮಾಣ ಪತ್ರ ನೀಡಿರುವ ಇಬ್ಬರು ವೈದ್ಯರ ವಿರುದ್ಧ ಇಲಾಖಾವಾರು ತನಿಖೆ ನಡೆಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ಮಂಜುನಾಥ್ ಎಂಬವರ ಮೇಲೆ ಹಲ್ಲೆ ನಡೆದ ಆರೋಪದಲ್ಲಿ ವಕೀಲರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಸುಳ್ಳು ವರದಿ ನೀಡಿದವರ ವಿಚಾರಣೆ ನಡೆಸಿ : ಪ್ರಕರಣ ಸಂಬಂಧ ದೂರು ದಾಖಲಾಗುವುದಕ್ಕೂ ಮುನ್ನ ಮಂಜುನಾಥ್ ಎಂಬವರು ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೊಳಗಾಗಿ ಇಬ್ಬರು ವೈದ್ಯರಿಂದ ವಿಭಿನ್ನ ವರದಿಯನ್ನು ಪಡೆದುಕೊಂಡಿದ್ದರು. ಈ ಅಂಶವನ್ನು ಗಮನಿಸಿದ ನ್ಯಾಯಪೀಠ, ತಪ್ಪಾಗಿ ವರದಿ ನೀಡಿರುವ ದಾವಣಗೆರೆ ಜಿಲ್ಲಾಸ್ಪತ್ರೆಯ ರೇಡಿಯಾಲಜಿಸ್ಟ್ ಡಾ.ಸುಮಿತ್ರಾ ಎಂಬವರು ಮೆಡಿ-ಕೋ-ಲೀಗಲ್ ಪ್ರಕರಣವಾಗಿದ್ದರೂ ಎಕ್ಸ್ ರೇ ವರದಿಯನ್ನು ತಿರುಚಿದ್ದಾರೆ. ಮತ್ತು ಡಾ.ಪ್ರವೀಣ್ ಅವರು ಗಾಯಕ್ಕೆ ಸಂಬಂಧಿಸಿದಂತೆ ಸುಳ್ಳು ವರದಿ ನೀಡಿರುವುದು ಗೊತ್ತಾಗಿದ್ದು, ವಿಚಾರಣೆಗೊಳಪಡಿಸಬೇಕಾಗಿದೆ ಎಂದು ಹೇಳಿದೆ.
ಜೊತೆಗೆ, ವಾಸ್ತವವಾಗಿ ವರದಿ ನೀಡಿರುವ ಭದ್ರಾವತಿಯ ತಾಲೂಕು ಜನರಲ್ ಆಸ್ಪತ್ರೆಯ ಡಾ.ಜೆ.ಎಂ.ಪ್ರೀತಿಯವರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಹೈಕೋರ್ಟ್ ಆದೇಶಿಸಿದೆ.
ವಾದ–ಪ್ರತಿವಾದ ಆಲಿಸಿ ಪ್ರಕರಣ ಸಂಬಂಧದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ದಾವಣಗೆರೆಯ ಚಿಗಟೇರಿಯ ಆಸ್ಪತ್ರೆಯ ವೈದ್ಯರಾದ ರೇಡಿಯಾಲಜಿಸ್ಟ್ ಡಾ.ಸುಮಿತ್ರಾ ಎಕ್ಸ್ ರೇ ವರದಿಯನ್ನು ತಿರುಚಿದ್ದಾರೆ. ಅದೇ ಆಸ್ಪತ್ರೆಯ ಡಾ.ಪ್ರವೀಣ್ ಅವರು ಮಂಜುನಾಥ್ ಅವರಿಗೆ ಗಾಯಕ್ಕೆ ಸಂಬಂಧಿಸಿದಂತೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂಬ ಅಂಶ ಗೊತ್ತಾಗಿದೆ. ಹೀಗಾಗಿ, ಅವರನ್ನು ಪ್ರಕರಣದಿಂದ ಕೈ ಬಿಡುವುದಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ನಕಲಿ, ತಿರುಚಿದ ಎಕ್ಸ್ ರೇ ವರದಿ : ಅಲ್ಲದೆ, ಎಕ್ಸ್ ರೇ ವರದಿ ಪರಿಶೀಲಿಸಿದರೆ, ಅದು ಮೇಲ್ನೋಟಕ್ಕೆ ಕಲ್ಪಿತ, ನಕಲಿ ಮತ್ತು ತಿರುಚಿದ ದಾಖಲೆಯಾಗಿದೆ. ಅಲ್ಲದೆ, ದೂರುದಾರರಿಗೆ ಅನುಕೂಲವಾಗುವಂತೆ ಗಾಯದ ಪ್ರಮಾಣಪತ್ರವನ್ನು ನೀಡಿದ್ದಾರೆ ಎಂಬ ಅಂಶ ಗೊತ್ತಾಗಲಿದೆ. ಈ ಎಲ್ಲ ಪ್ರಕ್ರಿಯೆಗೆ ಆಸ್ಪತ್ರೆಯ ವೈದ್ಯರು ಕೈ ಜೋಡಿಸಿದ್ದಾರೆ ಎಂಬುದಾಗಿ ತೋರುತ್ತದೆ ಎಂದು ಪೀಠ ಹೇಳಿದೆ.
ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದ ಡಾ.ಜೆ.ಎಂ.ಪ್ರೀತಿ ಅವರು 12 ಗಂಟೆಯ ಮುನ್ನ ದೂರುದಾರ ಮಂಜುನಾಥ್ ಅವರನ್ನು ಪರಿಶೀಲಿಸಿ ಅವರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿವೆ ಎಂದು ವರದಿ ನೀಡಿದ್ದಾರೆ. ಆದರೆ, 12 ಗಂಟೆಗಳ ಬಳಿಕ ಚಿಗಟೇರಿ ಆಸ್ಪತ್ರೆಯ ವೈದ್ಯರು ತದ್ವಿರುದ್ದ ವರದಿ ನೀಡಿದ್ದಾರೆ. ಹೀಗಾಗಿ, ಇಲಾಖಾ ತನಿಖೆ ನಡೆಯಬೇಕು ಎಂದು ಆದೇಶಸಿದ ಹೈಕೋರ್ಟ್, ವಿಚಾರಣೆಯನ್ನು ಮುಂದೂಡಿದೆ.
ಪ್ರಕರಣದ ಹಿನ್ನೆಲೆ : ಭದ್ರಾವತಿಯ ನಿವಾಸಿ ಮಂಜುನಾಥ್ ಎಂಬವರು ತನ್ನ ಪತ್ನಿ ನಡುವೆ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯಲ್ಲಿ ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದವು. ಈ ನಡುವೆ 2023ರ ಏಪ್ರಿಲ್ 13ರಂದು ಮಂಜುನಾಥ ಮೇಲೆ ಅವರ ಪತ್ನಿಯ ಪರವಾಗಿ ಪ್ರಕರಣವೊಂದರಲ್ಲಿ ವಾದ ಮಂಡಿಸುತ್ತಿದ್ದ ಆರು ಮಂದಿ ವಕೀಲರು ಹಲ್ಲೆ ನಡೆಸಿದ್ದ ಆರೋಪವಿತ್ತು.
ಹಲ್ಲೆ ನಡೆದ ಬಳಿಕ ಮಂಜುನಾಥ್ ಭದ್ರಾವತಿಯಲ್ಲಿ ಜನರಲ್ ಆಸ್ಪತ್ರೆಯ ಡಾ.ಪ್ರೀತಿ ಅವರಿಂದ ಚಿಕಿತ್ಸೆ ಪಡೆದು, ಗಾಯದ ಕುರಿತು ವರದಿ ಪಡೆದಿದ್ದರು. ಈ ವರದಿಗೆ ತೃಪ್ತರಾಗದ ಮಂಜುನಾಥ್ ದಾವಣಗೆರೆಗೆ ಹೋಗಿ ಚಿಗಟೇರಿ ಆಸ್ಪತ್ರೆಯಲ್ಲಿ ವೈದ್ಯರಾದ ಡಾ.ಪ್ರವೀಣ್ ಮತ್ತು ರೇಡಿಯಾಲಜಿಸ್ಟ್ ಡಾ.ಸುಮಿತ್ರಾ ಅವರಲ್ಲಿ ಚಿಕಿತ್ಸೆ ಪಡೆದು ಮತ್ತೊಂದು ವೈದ್ಯಕೀಯ ವರದಿಯನ್ನು ಪಡೆದುಕೊಂಡಿದ್ದರು. ಅದರ ಆಧಾರದಲ್ಲಿ ದಾವಣಗೆರೆ ಎಕ್ಸ್ಟೆನ್ಷನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ನಡುವೆ ಮಂಜುನಾಥ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಪ್ರಶ್ನಿಸಿ, ಹಲ್ಲೆ ನಡೆಸಿದ ಆರೋಪ ಹೊತ್ತ ವಕೀಲರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಬಳಿಕ ನ್ಯಾಯಪೀಠ ಪ್ರಕರಣದ ವಿಚಾರಣೆಗೆ ತಡೆ ನೀಡಿ ಆದೇಶಿಸಿತ್ತು. ಜೊತೆಗೆ, ಮಂಜುನಾಥ್ಗೆ ಎರಡು ರೀತಿಯ ಗಾಯದ ಪ್ರಮಾಣಪತ್ರ ಸಲ್ಲಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ವೈದ್ಯರಿಂದ ಪ್ರಮಾಣಪತ್ರ ಸಲ್ಲಿಸುವುದಕ್ಕೆ ಸೂಚನೆ ನೀಡಿತ್ತು.