ಕಾವೇರಿ ಆರತಿಗೆ ಹೈಕೋರ್ಟ್ ತಡೆ:ಮಂಡ್ಯದಲ್ಲಿ ಸಂತಸ
ಮಂಡ್ಯ:ಜೂ.೨೭.ರಾಜ್ಯ ಸರಕಾರದ ಉದ್ದೇಶಿತ ಕಾವೇರಿ ಆರತಿಗೆ ರಾಜ್ಯ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದ ಬೆನ್ನಲ್ಲೆ ರೈತ ಹಾಗೂ ಕನ್ನಡಪರ ಸಂಘಟನೆಗಳು ಸಿಹಿ ಹಂಚಿ ನಗರದಲ್ಲಿ ಸಂತಸ ವ್ಯಕ್ತಪಡಿಸಿದರು.
ಹೈಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ನಗರದ ಸಂಜಯ ವೃತ್ತದಲ್ಲಿ ಜಮಾವಣೆಯಾಗಿ ತೀರ್ಪನ್ನು ಸ್ವಾಗತಿಸಿ ಹಾಗೂ ಸರಕಾರದ ನಡೆ ವಿರುದ್ದ ಘೋಷಣೆಗಳನ್ನು ಕೂಗಿ ಪರಸ್ಪರ ಸಿಹಿ ಹಂಚುವ ಮೂಲಕ ಸಂತಸ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ರೈತ ಸಂಘದ ಸೊ ಶಿ ಪ್ರಕಾಶ್ ಮಾತನಾಡಿ ರಾಜ್ಯ ಸರಕಾರ ದುಷ್ಟತನದಿಂದ ಕಾವೇರಿ ಆರತಿ ಹಾಗೂ ಅಮ್ಯೂಸ್ ಮೆಂಟ್ ಯೋಜನೆ ತರಲು ಹೊರಟಿತ್ತು.ಹೈಕೋರ್ಟ್ ತಡೆ ನೀಡುವ ಮೂಲಕ ರಾಜ್ಯ ಸರ್ಕಾರಕ್ಕೆ ಪರಿಸರದ ಪಾಠ ಹೇಳಿದೆ ಎಂದರು.
ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ ಮಾತನಾಡಿ ಕಾವೇರಿ ಆರತಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡುವ ಮೂಲಕ ಹೈಕೋರ್ಟ್ ರೈತರ ದನಿಯಾಗಿದೆ.ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ರೈತರ ವಿರೋಧದ ನಡುವೆ ಯೋಜನೆ ಜಾರಿ ಮಾಡಲು ವಾಮಮಾರ್ಗ ಅನುಸರಿಸಿದ್ದಾರೆ.ಮಂಡ್ಯ ಜಿಲ್ಲೆಯ ರೈತ ಸಂಘಟನೆಗಳು ಉಪಮುಖ್ಯಮಂತ್ರಿಗಳ ಸಭೆ ಬಹಿಷ್ಕರಿಸಿದ್ದರು ಕಾಂಗ್ರೆಸ್ ಕಾರ್ಯಕರ್ತರಿಗೆ ಹಸಿರು ಶಾಲು ಹೊದಿಸಿ ರೈತ ಮುಖಂಡರೊಂದಿಗೆ ಸಭೆ ನಡೆಸಿದಂತೆ ನಟನೆ ಮಾಡಿದ್ದರು.ಹೈಕೋರ್ಟ್ ತೀರ್ಪು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಪಾಠವಾಗಬೇಕಿದೆ.
ರಾಜ್ಯ ಸರ್ಕಾರ ಕೂಡಲೆ ಬೇಷರತ್ತಾಗಿ ಯೋಜನೆಯನ್ನು ಹಿಂಪಡೆಯಬೇಕು.ರೈತರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಶಿವಳ್ಳಿ ಚಂದ್ರು.ಕರ್ನಾಟಕ ರಕ್ಷಣಾ ವೇದಿಕೆಯ ಎಚ್ ಡಿ ಜಯರಾಂ ರೈತಸಂಘದ ಸಂತೋಷ್ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು