ಮಂಡ್ಯ: ಇಲ್ಲಿಯ ನಗರಸಭೆ ಆಡಳಿತ ಮಂಡಳಿಯ ಅಧಿಕಾರವಧಿ 3 ತಿಂಗಳು ಮಾತ್ರ ಬಾಕಿ ಉಳಿದಿದ್ದು, ಕಡೇ ಅವಧಿಯಲ್ಲಿ ಚುನಾಯಿತ ಸದಸ್ಯರು ಮತ್ತು ಅಧಿಕಾರಿಗಳ ತಂಡ ₹30 ಲಕ್ಷ ವೆಚ್ಚದ ‘ಅಧ್ಯಯನ ಪ್ರವಾಸ’ ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಪ್ರಸ್ತುತ ಆಡಳಿತ ಮಂಡಳಿಯ ಅಧಿಕಾರವಧಿ ನವೆಂಬರ್ 2ಕ್ಕೆ ಕೊನೆಗೊಳ್ಳಲಿದೆ. ಅಧ್ಯಯನ ಪ್ರವಾಸ ಮಾಡಿ, ಉಳಿದಿರುವ 3 ತಿಂಗಳಲ್ಲಿ ಮಂಡ್ಯವನ್ನು ‘ಮಾದರಿ ನಗರ’ವನ್ನಾಗಿ ಮಾಡಲು ಸಾಧ್ಯವೇ? ಇದು ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವ ‘ಮೋಜಿನ ಪ್ರವಾಸ’ ಎಂದು ನಾಗರಿಕರು ದೂರಿದ್ದಾರೆ.
31 ನಗರಸಭೆ ಸದಸ್ಯರು, ನಾಲ್ವರು ನಾಮನಿರ್ದೇಶಿತ ಸದಸ್ಯರು ಹಾಗೂ ಐವರು ಅಧಿಕಾರಿಗಳ ತಂಡ ಆಗಸ್ಟ್ 4ರಂದು ಮಂಡ್ಯದಿಂದ ಹೊರಟು ಆಗಸ್ಟ್ 10ರವರೆಗೆ 7 ದಿನ ಉತ್ತರ ಪ್ರದೇಶದ ನೋಯಿಡಾ, ವಾರಾಣಸಿ ಹಾಗೂ ದೆಹಲಿ ಪ್ರವಾಸಕ್ಕೆ ಹೋಗಿದೆ.
ಉದ್ದೇಶವೇನು? ಉತ್ತರ ಪ್ರದೇಶದ ನೋಯಿಡಾ, ವಾರಾಣಸಿ ಹಾಗೂ ದೆಹಲಿ ಮಹಾನಗರ ಪಾಲಿಕೆಗಳಿಗೆ ಭೇಟಿ ನೀಡುವುದು. ಅಲ್ಲಿ ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆ, ವ್ಯವಸ್ಥಿತ ನಗರ ಯೋಜನೆ ಕ್ರಮಗಳು, ಕುಡಿಯುವ ನೀರು ಸರಬರಾಜು, ಎಲ್‌ಇಡಿ ಬೀದಿದೀಪಗಳ ನಿರ್ವಹಣೆ, ಮೂಲಸೌಕರ್ಯಗಳ ಅಭಿವೃದ್ಧಿ ಇತ್ಯಾದಿ ವ್ಯವಸ್ಥೆಗಳನ್ನು ಅಧ್ಯಯನ ಮಾಡುವುದು. ನಂತರ ಮಂಡ್ಯ ನಗರವನ್ನು ‘ಮಾದರಿ ನಗರ’ವನ್ನಾಗಿ ಅಭಿವೃದ್ಧಿಗೊಳಿಸುವುದು ಅಧ್ಯಯನ ಪ್ರವಾಸದ ಉದ್ದೇಶವಾಗಿದೆ.
ಈ ಅಧ್ಯಯನ ಪ್ರವಾಸ ಕೈಗೊಳ್ಳಲು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಬರೆದ ಪತ್ರಕ್ಕೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಹಲವಾರು ಷರತ್ತುಗಳನ್ನು ವಿಧಿಸಿ, ಜುಲೈ 17ರಂದು ಒಪ್ಪಿಗೆ ನೀಡಿದ್ದರು.
ಷರತ್ತುಗಳು: 2025–26ನೇ ಸಾಲಿನ ನಗರಸಭೆಯ ಆಯವ್ಯಯ ಅಂದಾಜಿನಲ್ಲಿ ಮೀಸಲಿರಿಸಿರುವ ವೆಚ್ಚದಲ್ಲಿ ಪ್ರವಾಸ ಕೈಗೊಂಡು, ನಂತರ ಖರ್ಚು–ವೆಚ್ಚಗಳ ಮಾಹಿತಿಯ ದಾಖಲೆ ಮತ್ತು ರಸೀತಿಗಳನ್ನು ಲೆಕ್ಕಶಾಖೆಗೆ ಸಲ್ಲಿಸುವಂತೆ ಸೂಚಿಸಿದ್ದರು. ಪ್ರಸ್ತಾವದಲ್ಲಿ ಸಲ್ಲಿಸಿರುವ 35 ಚುನಾಯಿತ ಪ್ರತಿನಿಧಿಗಳು, 5 ನಾಮನಿರ್ದೇಶಿತ ಸದಸ್ಯರು ಮತ್ತು ಇಬ್ಬರು ಅಧಿಕಾರಿಗಳ ತಂಡಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಯಾವುದೇ ಸಂದರ್ಭದಲ್ಲಿಯೂ ಇತರರನ್ನು ಪ್ರವಾಸಕ್ಕೆ ಕರೆದೊಯ್ಯುವಂತಿಲ್ಲ. ಅಧ್ಯಯನ ಪ್ರವಾಸಕ್ಕೆ ನಿಗದಿಪಡಿಸಿದ ನಗರವನ್ನು ಹೊರತುಪಡಿಸಿ ಇತರೆ ಸ್ಥಳಗಳಿಗೆ ಭೇಟಿ ನೀಡುವಂತಿಲ್ಲ. ಅಧ್ಯಯನ ಪ್ರವಾಸದ ನಂತರ ಅಲ್ಲಿ ನಡೆಸಿದ ಅಧ್ಯಯನ ಮತ್ತು ಪ್ರಯೋಜನಗಳ ಕುರಿತು ನಗರಸಭೆ ಕಾರ್ಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂಬ ಷರತ್ತುಗಳನ್ನು ಪೌರಾಡಳಿತದ ನಿರ್ದೇಶಕರು ಹಾಕಿದ್ದಾರೆ. ‘ಕೆಲವು ಸದಸ್ಯರು ತಮ್ಮೊಂದಿಗೆ ಕುಟುಂಬ ಸದಸ್ಯರನ್ನೂ ಕರೆದೊಯ್ದಿದ್ದಾರೆ. ಇನ್ನೂ ಕೆಲವು ಸದಸ್ಯರು ತಮ್ಮ ಬದಲಿಗೆ ತಮ್ಮ ಕುಟುಂಬಸ್ಥರನ್ನು ಕಳುಹಿಸಿಕೊಟ್ಟಿದ್ದಾರೆ’ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.


