ಶ್ರೀರಂಗಪಟ್ಟಣ: ದುರ್ದಂಡೇಶ್ವರ ಮಠಕ್ಕೆ ಸರ್ಕಾರಿ ಜಮೀನು.ರೈತಸಂಘ ವಿರೋಧ
ಮಂಡ್ಯ: ಆ.೧೪. ಶ್ರೀರಂಗಪಟ್ಟಣದ ಕಾವೇರಿ ನದಿ ದಂಡೆಯಲ್ಲಿರುವ ದುರ್ದಂಡೇಶ್ವರ ಮಠಕ್ಕೆ ಸರ್ಕಾರಕ್ಕೆ ಸೇರಿದ ೧.೨೮ ಎಕರೆ ಭೂಮಿ ಮಂಜೂರು ಮಾಡುವುದಕ್ಕೆ ರಾಜ್ಯ ರೈತಸಂಘದ ಸಂಚಾಲಕ ಕಿರಂಗೂರು ಪಾಪು ವಿರೋಧ ವ್ಯಕ್ತಪಡಿಸಿದ್ದಾರೆ.
ಕಿರಂಗೂರು ಪಾಪು
ಈ ಸಂಬಂದ ಸರ್ಕಾರಕ್ಕೆ ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಶ್ರೀರಂಗಪಟ್ಟಣದಲ್ಲಿ ಸ್ವಂತಕೊಂದು ಮನೆಯಿಲ್ಲದೆ ಬಡವರು ನಿಕೃಷ್ಟವಾದ ಬದುಕು ಬದುಕುತ್ತಿದ್ದಾರೆ.ಅಂಗನವಾಡಿಗಳಿಗೆ ಯುವಕರ ಕ್ರೀಡಾ ಚಟುವಟಿಕೆಗಳಿಗೆ ಸ್ಥಳವಾಕಾಶ ಇಲ್ಲವಾಗಿದೆ.ಇಂತಹ ಉದ್ದೇಶಗಳಿಗೆ ಭೂಮಿ ನೀಡುವ ಬದಲು ಖಾಸಗಿ ಮಠವೊಂದಕ್ಕೆ ಸರ್ಕಾರಿ ಭೂಮಿ ಮಂಜೂರು ಮಾಡುವ ಅವಶ್ಯವೆನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಸದರಿ ಮಠವು ಈಗಾಗಲೇ ನಿಯಮಗಳನ್ನು ಉಲ್ಲಂಘಿಸಿ ಕಾವೇರಿ ನದಿಯ ಸ್ಥಳ ಹಾಗೂ ಬಫರ್ ಜೋನ್ ಒತ್ತುವರಿ ಮಾಡಿ ಕಟ್ಟಡಗಳನ್ನು ನಿರ್ಮಿಸಿದೆ.ಅವುಗಳನ್ನು ಮರುವಶ ಮಾಡಿಕೊಳ್ಳುವ ಬದಲು ಸರಕಾರಿ ಜಮೀನು ಮಠಕ್ಕೆ ಧಾರೆಯೆರೆಯುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಅವರು ತಮ್ಮ ದೂರಿನಲ್ಲಿ ಪ್ರಶ್ನಿಸಿದ್ದಾರೆ.
ಹಿನ್ನೆಲೆ:ಶ್ರೀರಂಗಪಟ್ಟಣದ ಕಾವೇರಿ ನದಿ ದಂಡೆಯಲ್ಲಿರುವ ದುರ್ದಂಡೇಶ್ವರ ಮಠ ಅತ್ಯಂತ ಪ್ರಭಾವಿ ಮಠವಾಗಿದ್ದು ಇದರ ಮೂಲ ಮಠ ಪಾಂಡವಪುರ ತಾಲೋಕಿನ ಬೇಬಿ ಗ್ರಾಮದಲ್ಲಿದ್ದು ಬೇಬಿ ಮಠ ಎಂದು ಸಹ ಕರೆಯಲಾಗುತ್ತದೆ.
ಯಡಿಯೂರಪ್ಪ ಸೇರಿದಂತೆ ಪ್ರಭಾವಿ ರಾಜಕಾರಿಣಿಗಳೊಂದಿಗೆ ಈ ಮಠ ಸಖ್ಯ ಹೊಂದಿದೆ.ಆಗಾಗೆ ಪ್ರಭಾವಿ ವ್ಯಕ್ತಿಗಳು ಈ ಮಠದಲ್ಲಿ ಕಾಣಿಸಿಕೊಳ್ಳುತ್ತಾರೆ.
.ಆಗಾಗ ನವರಾತ್ರಿ ಪೂಜೆ ಶಿವರಾತ್ರಿ ಪೂಜೆ ಎಂದು ನಾಡಿನ ಪ್ರಭಾವಿ ರಾಜಕಾರಣಿಗಳು ಇಲ್ಲಿ ಠಾಳಾಯಿಸುತ್ತಾರೆ.
ಕಾವೇರಿ ನದಿ ಒತ್ತುವರಿ ಸೇರಿದಂತೆ ಬಫರ್ ಜೋನ್ ಉಲ್ಲಂಘಿಸಿ ನಿರ್ಮಾಣವಾಗಿರುವ ಈ ಮಠಕ್ಕೆ ಈಗಾಗಲೇ ಸರ್ವೇ ನಂ ೧೬೯ ರಲ್ಲಿ ೧.೨೮ ಎಕರೆ ಭೂಮಿಯನ್ನು ಸರಕಾರ ೨೦೦೩ ರಲ್ಲಿ ಹದಿನೈದು ವರ್ಷಗಳ ಅವಧಿಗೆ ಗುತ್ತಿಗೆ ನೀಡಿದೆ.
ಈಗ ಸದರಿ ಭೂಮಿಯ ಗುತ್ತಿಗೆ ಅವಧಿ ಮುಗಿದಿದ್ದು ಸದರಿ ಭೂಮಿಯನ್ನು ಮಠಕ್ಕೆ ಮಂಜೂರು ಮಾಡಲು ಸರಕಾರ ಒಪ್ಪಿಗೆ ಸೂಚಿಸಿದೆ.
ಈ ಸಂಬಂದ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ಲೋಪಗಳನ್ನು ಸರಿಪಡಿಸಿ ಪಾಂಡವಪುರ ಉಪವಿಭಾಗಾಧಿಕಾರಿಗೆ ಶ್ರೀರಂಗಪಟ್ಟಣದ ತಹಶೀಲ್ದಾರರು ಮರು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಪ್ರಸ್ತಾವನೆಯಲ್ಲಿ ಸದರಿ ಭೂಮಿಗೆ ೩೧.೪೫.೦೦೦ ದರ ನಿಗದಿಪಡಿಸಲಾಗಿದೆ.ವಾಸ್ತವವಾಗಿ ಮಾರುಕಟ್ಟೆ ದರ ಗುಂಟೆಗೆ ೫ ಲಕ್ಷ ಇದ್ದು ಆ ಪ್ರಕಾರ ಈ ಭೂಮಿಯ ಮೌಲ್ಯ ಮೂರುವರೆ ಕೋಟಿ ಬೆಲೆ ಬಾಳುತ್ತದೆ.ಇದರ ಅಜುಬಾಜಿನಲ್ಲಿ ದುಬಾರಿ ರೆಸಾರ್ಟ್ ಗಳು ತಲೆ ಎತ್ತಿರುವುದರಿಂದ ಈ ಭೂಮಿಗೆ ಚಿನ್ನದ ಬೆಲೆ ಸೃಷ್ಟಿಯಾಗಿದೆ. ಇವೆಲ್ಲವನ್ನು ಮರೆಮಾಚಿ ಅಗ್ಗದ ದರಕ್ಕೆ ದುರ್ದಂಡೇಶ್ವರ (ಬೇಬಿಮಠ) ಮಠಕ್ಕೆ ನೀಡಲಾಗುತ್ತಿದೆ.
ಒಟ್ಟಿನಲ್ಲಿ ರಾಜ್ಯ ಸರಕಾರ ಯಥಾರೀತಿ ಸದರಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಮುಂದುವರಿಸುವ ಬದಲು ಖಾಯಂ ಆಗಿ ಖಾಸಗಿ ಮಠಕ್ಕೆ ಧಾರೆ ಎರೆಯಲು ನಿಂತಿರುವುದು ಎಲ್ಲರ ಹುಬ್ಬೇರಿಸಿದೆ.