ಮಳವಳ್ಳಿ: ಮದ್ದೂರಿನಲ್ಲಿ ಗಣೇಶಮೂರ್ತಿ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣ ಸಂಬಂಧ ಈಗಾಗಲೇ ಆರೋಪಿಗಳನ್ನು ಬಂಧಿಸುವುದರ ಜೊತೆಗೆ ಶಾಂತಿಗಾಗಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದರೂ ಜೆಡಿಎಸ್ ಮತ್ತು ಬಿಜೆಪಿ ಸೆ.11ರಂದು ಮಳವಳ್ಳಿ ಬಂದ್ ಕರೆ ನೀಡಿರುವುದು ರಾಜಕೀಯ ಪ್ರೇರಿತ ಎಂದು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಿ.ಪಿ.ರಾಜು ಆರೋಪಿಸಿದರು.
ಪಟ್ಟಣದಲ್ಲಿ ಬುಧವಾರ ಮಾತನಾಡಿದ ಅವರು, ಮದ್ದೂರಿನಲ್ಲಿ ನಡೆದಿರುವ ಘಟನೆಯನ್ನು ನಾವು ಸಹ ಖಂಡಿಸುತ್ತೇವೆ. ತಪ್ಪಿತಸ್ಥರನ್ನು ಪೋಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಎಲ್ಲಿಯೂ ಇಲ್ಲದ ಬಂದ್ ಮಳವಳ್ಳಿಯಲ್ಲಿ ಮಾಡುತ್ತಿರುವುದರ ಉದ್ದೇಶವಾದರೂ ಏನು? ಇದೊಂದು ರಾಜಕೀಯ ಪ್ರೇರಿತ ಬಂದ್, ಹೀಗಾಗಿ ತಾಲ್ಲೂಕಿನ ಜನರು ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಡಬಾರದು ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಜೆ.ದೇವರಾಜು ಮಾತನಾಡಿ, ಮಳವಳ್ಳಿಯಲ್ಲಿ ಇಲ್ಲಿಯವರೆಗೂ ಕೋಮು ಸಂಘರ್ಷ ನಡೆದಿಲ್ಲ, ಇಂತಹ ವೇಳೆಯಲ್ಲಿ ಬಂದ್ ಅವಶ್ಯಕತೆ ಇಲ್ಲ. ಶಾಂತಿಯುತವಾದ ಮಳವಳ್ಳಿಯಲ್ಲಿ ಬಂದ್ ಸೂಕ್ತವಲ್ಲ, ಆದ್ದರಿಂದ ಬಂದ್ ಕೈಬಿಡಬೇಕು. ಮಳವಳ್ಳಿ ಆಸ್ಪತ್ರೆಯಲ್ಲಿ ನಡೆದ ಘಟನೆ ಸಂಬಂಧ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಟಿಎಪಿಸಿಎಂಎಸ್ ನಿರ್ದೇಶಕ ಎಂ.ಲಿಂಗರಾಜು ಮಾತನಾಡಿ, ಮದ್ದೂರಿನ ಘಟನೆ ಖಂಡನೀಯ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಮಂಡ್ಯ ಜಿಲ್ಲೆಯ ಸಾಮರಸ್ಯವನ್ನು ಹಾಳು ಮಾಡಲು ಹಾಗೂ ಜಿಲ್ಲೆಯಲ್ಲಿ ನೆಲೆ ಇಲ್ಲದ ಬಿಜೆಪಿಗೆ ನೆಲೆ ಕಾಣಿಸಲು ಮತ್ತು ಸಮಾಜಕ್ಕೆ ಕೆಟ್ಟ ಸಂದೇಶ ನೀಡಲು ಮಳವಳ್ಳಿ ಬಂದ್ಗೆ ಕರೆ ನೀಡಲಾಗಿದೆ. ಇದರಿಂದ ಜನಾಂಗೀಯ ಹಾಗೂ ಕೋಮುದ್ವೇಷ ಹೆಚ್ಚಾಗಲಿದೆ. ಅಲ್ಲದೇ ವರ್ತಕರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗುತ್ತದೆ. ಬಂದ್ ನಡೆಸುವುದನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಸ್ವಷ್ಟಪಡಿಸಿದರು.
ಮನ್ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಸಿ.ಚೌಡಯ್ಯ, ಮುಖಂಡರಾದ ಶಿವಮಾದೇಗೌಡ, ಡಿ.ಪ್ರಕಾಶ್, ಎಚ್.ಕೆ.ಕೃಷ್ಣಮೂರ್ತಿ, ದಿಲೀಪ್ ಕುಮಾರ್ (ವಿಶ್ವ), ಶಶಿ ರಾಜ್, ಸತೀಶ್, ಶ್ರೀನಿವಾಸ್, ಶ್ರೀಕಾಂತ್, ಚೇತನ್, ಚೌಡಪ್ಪ, ಶಾಂತರಾಜು, ಮಹೇಶ್, ವಿಜಯ ಕುಮಾರ್ ಪಾಲ್ಗೊಂಡಿದ್ದರು