ಮಂಡ್ಯ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಚಿನ್ನಾಭರಣ, ನಗದು ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದ್ದು, ಜಿಲ್ಲಾಸ್ಪತ್ರೆಯ ಭದ್ರತೆಯ ನಿರ್ವಹಣೆಯಲ್ಲಿ ಲೋಪ ಕಂಡು ಬಂದಿದೆ ಎಂಬ ದೂರುಗಳು ಕೇಳಿ ಬಂದಿವೆ.
ಕಳೆದ ಸೆ.3ರಂದು ತನ್ನ ಪತ್ನಿಯನ್ನು ಹೆರಿಗೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ ಸಂದರ್ಭದಲ್ಲಿ ಆಸ್ಪತ್ರೆಯ ಆವರಣದಲ್ಲಿಯೇ ಓಡಾಡಿಕೊಂಡಿದ್ದ ಅಪರಿಚಿತ ವ್ಯಕ್ತಿಯು ತಮಗೆ ಸೇರಿದ 35 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 2.50 ಗ್ರಾಂ ತೂಕದ ಕಿವಿಯ ಗುಂಡುಗಳು ಹಾಗೂ 5 ಸಾವಿರ ರೂ. ನಗದನ್ನು ಕಳವು ಮಾಡಿ ಪರಾರಿಯಾಗಿದ್ದಾನೆಂದು ಪಾಂಡವಪುರ ತಾಲ್ಲೂಕಿನ ತಿಮ್ಮನಕೊಪ್ಪಲು ಗ್ರಾಮದ ಅಜೇಯ ಕುಮಾರ್ ಎಂಬುವರು ಸೆ.10 ರಂದು ಮಂಡ್ಯ ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಎಫ್ಐಆರ್ ಕೂಡ ದಾಖಲಾಗಿದೆ.
ಸೆ.4ರಂದು ಬೆಳಿಗ್ಗೆ 6 ಗಂಟೆಯ ಸಮಯದಲ್ಲಿ ಚಿನ್ನದ ಒಡವೆಗಳಿದ್ದ ಬ್ಯಾಗ್ ಅನ್ನು ಚೆಕ್ ಮಾಡಿ ನೋಡಲಾಗಿ ಒಡವೆಗಳಿದ್ದ ಪರ್ಸ್ ಇರಲಿಲ್ಲ. ಅಕ್ಕಪಕ್ಕದಲ್ಲಿ.ನಮ್ಮ ಜೊತೆ ಇದ್ದ ಎಲ್ಲರನ್ನು ವಿಚಾರಿಸಲಾಗಿ ಚಿನ್ನದ ಒಡವೆಗಳಿದ್ದ ಪರ್ಸ್ ಸಿಗಲಲ್ಲ, ನಂತರ ನನ್ನ ಜೊತೆ ಇದ್ದ ಒಬ್ಬ ಅಪರಿಚಿತ ಆಸಾಮಿಯನ್ನು ಹುಡುಕಲಾಗಿ ಅವನು ಎಲ್ಲಿಯೂ ಸಿಗಲಿಲ್ಲ. ನಮ್ಮ ಚಿನ್ನದ ಒಡವೆಗಳು ಕಳುವಾಗಿರುವ ಬಗ್ಗೆ, ನನ್ನ ಜೊತೆ ಇದ್ದ ಅಪರಿಚಿತ ಆಸಾಮಿಯ ಮೇಲೆ ಅನುಮಾನ ಬಂದು ಆಸ್ಪತ್ರೆಯ ಆವರಣದಲ್ಲಿಂದ ಸಿಸಿ ಕ್ಯಾಮರಾ ಚೆಕ್ ಮಾಡಿಸಲಾಗಿ ನನ್ನ ಜೊತೆಯಲ್ಲಿದ್ದ ಅಪರಿಚಿತ ಆಸಾಮಿಯೇ ನನ್ನ ಅತ್ತೆ ಡೆಲಿವರಿ ವಿಚಾರವಾಗಿ ಡಾಕ್ಟರ್ ಜೊತೆ ಮಾತನಾಡುವಾಗ ನಮ್ಮ ಗಮನಕ್ಕೆ ಬಾರದಂತೆ ನಾವು ಇಟ್ಟಿದ್ದ ಬ್ಯಾಗ್ ಜಿಪ್ ಆನ್ನು ತೆಗೆದು ಅದರಲ್ಲಿದ್ದ ಚಿನ್ನದ ಒಡೆವೆ ಮತ್ತು ಹಣವನ್ನು ಕಳವು ಮಾಡಿದ್ದಾನೆಂದು ದೂರು ನೀಡಿದ್ದಾರೆ.
ನಮ್ಮ ಮಗುವನ್ನು ಎನ್‌ಐಸಿಯು ನಲ್ಲಿಟ್ಟಿದ್ದರಿಂದ ಇಲ್ಲಿಯವರೆಗೆ ಠಾಣೆಗೆ ಬಂದು ದೂರು ನೀಡಲಾಗದ ಕಾರಣ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿಯೂ ಅವರು ತಿಳಿಸಿದ್ದಾರೆ.
ಭದ್ರತಾ ಸಂಸ್ಥೆ ಹೊಣೆ
ಸದ್ಯ ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ ಭದ್ರತೆ ನಿರ್ವಹಣೆಯನ್ನು ಕೆಎಸ್ಎಫ್ -9 ಎಂಬ ಖಾಸಗಿ ಹೊರಗುತ್ತಿಗೆ ಏಜೆನ್ಸಿಗೆ ನೀಡಲಾಗಿದೆ.ಆಸ್ಪತ್ರೆಯ ಅಂಗಳದಲ್ಲಿ ರೋಗಿಗಳ ಆಭರಣ ಕಳುವಾಗಿರುವುದು ಭದ್ರತಾ ಸಿಬ್ಬಂದಿಯ ವೈಫಲ್ಯ ಎನ್ನಲಾಗಿದೆ.
ಇದೇ ಏಜೆನ್ಸಿ ಹೊಣೆಗಾರಿಕೆ ವಹಿಸಿದ್ದ ಈ ಹಿಂದೆ ಸಹ ಆಸ್ಪತ್ರೆಯ ನಗದು ವಿಭಾಗದಲ್ಲಿ ರಾತ್ರೋರಾತ್ರಿ ಎಂಬತ್ತು ಸಾವಿರ ರೂಗಳನ್ನು ಕದ್ದೊಯ್ಯಲಾಗಿತ್ತು.ಇದು ಸಹ ಮಂಡ್ಯ ಪೂರ್ವ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕಡೆಗೆ ಈ ಪ್ರಕರಣದಲ್ಲಿ ರಾಜೀ ಕಬೂಲಿ ನಡೆಸಿ ಪೋಲಿಸರು ಪ್ರಕರಣವನ್ನು ಅಂತ್ಯಗೊಳಿಸಿದರು ಎನ್ನಲಾಗಿದೆ. ಸದ್ಯ ಸದರಿ ಏಜೆನ್ಸಿಯ ಲೋಪದ ವಿರುದ್ದ ಕಪ್ಪು ಪಟ್ಟಿ ಸೇರಿದಂತೆ ಅಗತ್ಯ ಕ್ರಮಗಳನ್ನು ಮಿಮ್ಸ್ ನಿರ್ದೇಶಕರು ಕೈಗೊಳ್ಳುವರೆ ಎಂಬುದು ಕಾದು ನೋಡಬೇಕಿದೆ.