ಮಂಡ್ಯ: ‘ಕೆಆರ್‌ಎಸ್ ಅಣೆಕಟ್ಟೆ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ, ಕಾವೇರಿ ಆರತಿ, ಜಲ ವಿಮಾನಯಾನ (ಸೀ ಪ್ಲೇನ್) ಸೇರಿದಂತೆ ಯಾವುದೇ ಯೋಜನೆಗಳನ್ನು ಕೈಗೊಳ್ಳಬಾರದು’ ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಗುರುವಾರ ಮನವಿ ಸಲ್ಲಿಸಿದರು.
ಸೀ ಪ್ಲೇನ್ ಯೋಜನೆ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರ ಜೊತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿರುವುದು ಮೂರ್ಖತನವಾಗಿದೆ. ಕುಮಾರಸ್ವಾಮಿ ಅವರು ಮೈಷುಗರ್ ಕಾರ್ಖಾನೆ ಉಳಿವಿನ ಬಗ್ಗೆ ಮಾತನಾಡಲಿ, ಜೊತೆಗೆ ಸರ್ಕಾರದ ಜೊತೆ ಕೈಜೋಡಿಸಿ ಕಾರ್ಖಾನೆ ಉಳಿಸಿಕೊಡಲಿ. ಡ್ಯಾಂ ರಕ್ಷಣೆ ವಿರುದ್ಧವಾಗಿ ಯೋಜನೆ ರೂಪಿಸುವ ಹಕ್ಕು ಯಾರು ನಿಮಗೆ ಕೊಟ್ಟಿದ್ದು ಎಂದು ಪ್ರಶ್ನಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕೆಲವು ಕಾಂಗ್ರೆಸ್ ಮುಖಂಡರು ಕೆಆರ್‌ಎಸ್ ಬಳಿ ಜನಸಂದಣಿ ಸೇರಿಸಿಕೊಂಡು ಕಾವೇರಿ ಆರತಿ ಮಾಡುವುದು, ಅಮ್ಯೂಸ್‌ಮೆಂಟ್ ಯೋಜನೆ ಮಾಡುವುದಾಗಿ ಹೇಳಿಕೆ ಬಿಡಬೇಕು ಎಂದರು.
ಹೈಕೋರ್ಟ್ ಈ ಯೋಜನೆ ಗಳ ವಿರುದ್ಧ ಆದೇಶವನ್ನೂ ನೀಡಿದ್ದು ಜನಪ್ರತಿನಿಧಿಗಳು ಮರೆತಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಪಕ್ಷದವರಿಗೆ ಜನರಲ್ಲಿ ಗೊಂದಲ ಮೂಡಿಸುವಂಥ ಮಾತುಗಳನ್ನು ಹೇಳದಂತೆ ಬುದ್ಧಿ ಹೇಳಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಸುನಂದಾ ಜಯರಾಂ, ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಲಿಂಗಪ್ಪಾಜಿ, ಎಚ್.ಸಿ. ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು