ಮಂಡ್ಯ: ‘ಕೊಳೆಗೇರಿ ಪ್ರದೇಶಗಳಲ್ಲಿ ಯುವಕರು ಮದ್ಯ ಸೇವಿಸುವುದು ಹೆಚ್ಚಾಗಿ ಕಂಡುಬರುತ್ತಿದೆ. ಮದ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಹಾಗೂ ಸ್ಲಂಗಳಲ್ಲಿ ಮದ್ಯ ಅಕ್ರಮ ಮಾರಾಟ ಮಾಡುವವರ ಕಂಡುಬಂದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಿ’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಂಡ್ಯ ತಾಲ್ಲೂಕಿನ ಕಾಳಪ್ಪ ಬಡಾವಣೆ ಸ್ಲಂ ಜನರಿಗೆ ನಿವೇಶನ ನೀಡಲು ಮಂಡ್ಯ ನಗರದಲ್ಲಿ ಯಾವುದೇ ಖಾಲಿ ನಿವೇಶನ ಇಲ್ಲ. ಆದ್ದರಿಂದ ಮಂಡ್ಯ ನಗರದ ಸುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳ ಗುರುತಿಸುವಂತೆ ತಿಳಿಸಿದರು.
ನಿವೇಶನ ನೀಡುವ ಸ್ಥಳಗಳಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಕಾನೂನಿನ ಸಮಸ್ಯೆ ಉಂಟಾಗಬಾರದು. ಸುಮಾರು 9 ಎಕರೆ ಜಾಗ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
45 ಮಂದಿಗೆ ನಿವೇಶನ: ಮಂಡ್ಯ ತಾಲ್ಲೂಕಿನ ಮಹದೇವಪುರದ ಸ್ಲಮ್ ಜಾಗದಲ್ಲಿ ವಾಸವಾಗಿರುವ 45 ಜನರಿಗೆ ನಿವೇಶನ ನೀಡಲು ಸರ್ಕಾರದಿಂದ ಅನುಮತಿ ದೊರೆತಿದೆ. ಆದರೆ ಕೆಲ ಫಲಾ ನುಭವಿಗಳ ದಾಖಲಾತಿ ಕೊರತೆಯಿಂದ 34 ಜನರಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಉಳಿದ 11 ಜನ ಸೂಕ್ತ ದಾಖಲೆಗಳನ್ನು ನೀಡಿದರೆ ನಿವೇಶನ ಹಂಚಿಕೆ ಮಾಡಬಹುದು ಎಂದು ಹೇಳಿದರು.
ಸಭೆಯಲ್ಲಿ ಮುಡಾ ಆಯುಕ್ತ ಕೃಷ್ಣ ಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಟಿ.ಎನ್ ನರಸಿಂಹಮೂರ್ತಿ, ಮಂಡ್ಯ ತಹಶೀಲ್ದಾರ್ ವಿಶ್ವನಾಥ್, ನಗರಸಭೆ ಪೌರಾಯುಕ್ತೆ ಪಂಪಶ್ರೀ, ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್, ಸ್ಲಮ್ ಬೋರ್ಡ್ ಅಧಿಕಾರಿಗಳು, ಮುಖಂಡರು ಇದ್ದರು.
‘ನಕಲಿ ಕಾರ್ಮಿಕ ಕಾರ್ಡ್ ಪತ್ತೆ ಹಚ್ಚಿ’
ಕಾರ್ಮಿಕ ಇಲಾಖೆಯಿಂದ ನಕಲಿ ಕಾರ್ಮಿಕ ಗುರುತಿನ ಚೀಟಿ ಪಡೆದು ನಿಜವಾದ ಕಾರ್ಮಿಕರಿಗೆ ದೊರೆಯಬೇಕಾದ ಸರ್ಕಾರಿ ಸೌಲಭ್ಯಗಳನ್ನು ಅನರ್ಹರು ಪಡೆಯುತ್ತಿದ್ದಾರೆ. ಸರ್ಕಾರಿ ಸೌಲಭ್ಯ ನೀಡಬೇಕಾದರೆ ಕಾರ್ಮಿಕರು ಕೆಲಸ ಮಾಡುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೌಲಭ್ಯ ನೀಡಿ ಎಂದು ಜಿಲ್ಲಾಧಿಕಾರಿ ಕುಮಾರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸ್ಲಮ್ ನಲ್ಲಿ ಇರುವ ಮಕ್ಕಳಿಗೆ ವಿಶೇಷ ಆಧಾರ್ ಶಿಬಿರವನ್ನು ಏರ್ಪಡಿಸಿ ಎಲ್ಲ ಮಕ್ಕಳಿಗೂ ಆಧಾರ್ ನೋಂದಣಿ ಮಾಡಿ, ಇಲ್ಲದಿದ್ದಲ್ಲಿ ಅವರಿಗೆ ಸರಿಯಾಗಿ ವಿದ್ಯಾರ್ಥಿ ವೇತನ ಹಾಗೂ ಇನ್ನಿತರ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.