Sunday, October 12, 2025
spot_img

ಸಾಹಿತ್ಯ ಸಮ್ಮೇಳನ ಅವ್ಯವಹಾರ.ಸ್ವಯಂಪ್ರೇರಿತ ತನಿಖೆಗೆ ಕಸಾಪ ನಿರ್ಣಯ

ಮಂಡ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಖರ್ಚು ವೆಚ್ಚಗಳ ಕುರಿತು ಲೋಕಾಯುಕ್ತ ತನಿಖೆ: ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸರ್ವಾನುಮತದಿಂದ ನಿರ್ಧಾರ.

ಬೆಂಗಳೂರು: ಮಂಡ್ಯದಲ್ಲಿ ನಡೆದ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡಿರುವ ವೆಚ್ಚವೂ ಸೇರಿದಂತೆ ಆಮೂಲಾಗ್ರವಾಗಿ ತನಿಖೆ ಮಾಡಲು ಲೋಕಾಯುಕ್ತರನ್ನು ಕೋರಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸರ್ವಾನುಮತದಿಂದ ತೀರ್ಮಾನಿಸಿದೆ.

ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ ಮಾಧ್ಯಮ ವಿಭಾಗದ ಸಂಚಾಲಕ ಶ್ರೀಧರ್ ಮೂರ್ತಿ ಮೂಲಕ ಹೇಳಿಕೆ ಬಿಡುಗಡೆ ಮಾಡಿರುವ ಕಸಾಪ ಅಧ್ಯಕ್ಷ ಮಹೇಶ್ ಜೋಷಿ.

4.10.25 ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿರುವ ಅನ್ನಪೂರ್ಣೇಶ್ವರಿ ಹೋಟೆಲ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯವೂ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ತೆಗೆದು ಕೊಳ್ಳಲಾಗಿದೆ.

ಮಂಡ್ಯದಲ್ಲಿ ಅಯೋಜಿತವಾಗಿದ್ದ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದಿಂದ ಮಂಡ್ಯ ಜಿಲ್ಲಾಡಳಿತಕ್ಕೆ ಬಿಡುಗಡೆಯಾದ 30 ಕೋಟಿ ರೂಪಾಯಿಗಳ ಅನುದಾನದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಡಳಿತದಿಂದ ಪಡೆದು ಕೊಂಡಿದ್ದು ಕೇವಲ 2.5 ಕೋಟಿ ರೂಪಾಯಿಗಳನ್ನು ಮಾತ್ರ. ಉಳಿದ 27.5 ಕೋಟಿ ರೂಪಾಯಿಗಳನ್ನು ಮಂಡ್ಯ ಜಿಲ್ಲಾಡಳಿತವೇ ನಿರ್ವಹಿಸಿದೆ. ವೇದಿಕೆ, ಆಹಾರ, ವಸತಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಮಿಯಾನದಿಂದ ಹಿಡಿದು ಪೊರಕೆ ಖರೀದಿಯವರೆಗೆ ಹಣ ದುರುಪಯೋಗದ ಅಪಾದನೆಗಳು ಬಂದಿದ್ದು, ಸ್ಕೈ ಬ್ಲ್ಯೂ ಇವೆಂಟ್ ಮ್ಯಾನೆಜ್ಮಂಟ್ ನಿರ್ವಹಣೆ, ಇವೆಲ್ಲವೂ ಜಿಲ್ಲಾಡಳಿತದ ವ್ಯಾಪ್ತಿಗೇ ಬರುತ್ತದೆ. ಇದು ಗೊತ್ತಿದ್ದರೂ ಸಹ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ನಿರಂತರವಾಗಿ ಹಣದ ದುರುಪಯೋಗ ಮತ್ತು ಆರ್ಥಿಕ ಅವ್ಯವಹಾರ, ಹಣಕಾಸು ದುರುಪಯೋಗದ ಕುರಿತು ಅಪಾದನೆಗಳನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನ ಸ್ವಚ್ಚ ಆಡಳಿತ, ರುಜುತ್ವ ಮತ್ತು ಪಾರದರ್ಶಕತೆಯನ್ನು ಸಾಬೀತು ಮಾಡಲು ಕನ್ನಡ ಸಾಹಿತ್ಯ ಪರಿಷತ್ತು ಮಾಡಿದ ವೆಚ್ಚವೂ ಸೇರಿದಂತೆ ಎಲ್ಲವನ್ನೂ ಲೋಕಾಯುಕ್ತದ ಆಮೂಲಾಗ್ರಹ ತನಿಖೆಗೆ ಒಪ್ಪಿಸಲು,ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಣಿ ಸರ್ವಾನುಮತದಿಂದ ತೀರ್ಮಾನಿಸಿದೆ. ದುರದ್ದೇಶಪೂರ್ವಕ ದೂರುದಾರರಲ್ಲಿ ಪ್ರೊ.ಜಯಪ್ರಕಾಶ ಗೌಡ, ಮೀರಾ ಶಿವಲಿಂಗಯ್ಯ, ಕೆ.ಟಿ.ಶ್ರೀಕಂಠೇ ಗೌಡ ಮೊದಲಾದ ಅನೇಕರು, ಅನೇಕ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿದ್ದಾರೆ. ಅವರ ಸಂಸ್ಥೆಗಳ ಮೇಲೆ ಕೂಡ ಹಣಕಾಸು ದುರುಪಯೋಗ, ಆಡಳಿತದಲ್ಲಿ ಅಕ್ರಮ, ಸ್ವಜನ ಪಕ್ಷಪಾತದಂತಹ ಗಂಭೀರ ಆರೋಪಗಳಿವೆ. ಸೂಕ್ತ ದಾಖಲೆಗಳೂ ಇವೆ. ಅವರೂ ಕೂಡ ಕನ್ನಡ ಸಾಹಿತ್ಯ ಪರಿಷತ್ತಿನಂತೆ ಸ್ವಯಂ ಪ್ರೇರಣೆಯಿಂದ ಲೋಕಾಯುಕ್ತ ತನಿಖೆಗೆ ಒಳಪಟ್ಟು ಸ್ವಚ್ಚರಾಗಿ ಹೊರ ಬರುವ ಮೂಲಕ ಮಾದರಿಯಾಗುತ್ತಾರೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸರ್ವಾನು ಮತದಿಂದ ಅಪೇಕ್ಷಿಸಿದೆ ಎಂದು ತಿಳಿಸಿದ್ದಾರೆ.

ಮುಂದುವರಿದು ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ನಿರಂತರವಾಗಿ ಅಪಾದನೆ ಮಾಡುತ್ತಾ ಬಂದವರಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ.ಎಚ್.ಎಲ್.ಪುಷ್ಪ ಕೂಡ ಸೇರಿದ್ದಾರೆ . ಈಗ ಅವರ ಮೇಲೆ ಅವರ ಪದಾಧಿಕಾರಿಗಳೇ ಸರ್ವಾಧಿಕಾರ, ಆರ್ಥಿಕ ಅಶಿಸ್ತು, ಹಣಕಾಸು ದುರುಪಯೋಗದಂತಹ ಗಂಭೀರ ಆರೋಪಗಳನ್ನು ಮಾಡಿದ್ದು. ಅದು ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರವನ್ನು ಪಡೆದಿದೆ. ಸಂಘದ ಲೆಕ್ಕ ಪತ್ರಗಳನ್ನು ಸರಿಯಾಗಿ ನಿರ್ವಹಿಸದೆ ಆರ್ಥಿಕ ಅವ್ಯವಹಾರ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಕರ್ನಾಟಕ ಲೇಖಕಿಯರ ಸಂಘ ಸ್ಥಾಪನೆಗೊಳ್ಳುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅದರ ಅಧ್ಯಕ್ಷರಾಗಿದ್ದ ಜಿ.ನಾರಾಯಣ ಮುಖ್ಯವಾದ ಪಾತ್ರವನ್ನು ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅವ್ಯವಹಾರ ಕುರಿತೂ ಸಂಘ ಸಂಸ್ಥೆಗಳ ನಿಬಂಧಕರು, ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ನಡೆಸಿದಂತಹ ತನಿಖೆ ಮತ್ತು ವಿಚಾರಣೆಯನ್ನು ನಡೆಸಬೇಕು ಎಂದು ಕೋರಲು ಹಾಗೂ ಸರ್ಕಾರವನ್ನು ಒತ್ತಾಯಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸರ್ವಾನುಮತದಿಂದ ತೀರ್ಮಾನಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ವಿರುದ್ಧ ನಿರಂತರ ಆರ್ಥಿಕ ಅಶಿಸ್ತಿನ ಅಪಾದನೆ ಮಾಡಿ ಆಡಳಿತಾಧಿಕಾರಿಗಳ ನೇಮಕಕ್ಕೆ ಒತ್ತಾಯಿಸುತ್ತಾ ಬಂದವರಲ್ಲಿ ಡಾ.ವಸುಂಧರಾ ಭೂಪತಿ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷರು, ಆರ್.ಜಿ.ಹಳ್ಳಿ ನಾಗರಾಜ್, ಪುಷ್ಪ ಅವರ ಪತಿ, ಲೇಖಕಿಯರ ಸಂಘದ ಮಂಡ್ಯ ಜಿಲ್ಲಾ ಪ್ರತಿನಿಧಿ ಮೀರಾ ಶಿವಲಿಂಗಯ್ಯ ಈ ಮೂವರೂ ಸೇರಿದಂತೆ ಎನ್.ಹನುಮೇಗೌಡ, ಬಿ. ಜಯಪ್ರಕಾಶ ಗೌಡ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ಸಿ.ಕೆ.ರಾಮೇಗೌಡ ಮೊದಲಾದವರು ಕರ್ನಾಟಕ ಲೇಖಕಿಯರ ಸಂಘದ ಆರ್ಥಿಕ ಅವ್ಯವಹಾರಗಳ ತನಿಖೆ ಮತ್ತು ವಿಚಾರಣೆಗೆ ಸರ್ಕಾರವನ್ನು ಒತ್ತಾಯಿಸಿ ತಮ್ಮ ಕನ್ನಡದ ಮೇಲಿನ ಬದ್ದತೆಯನ್ನು, ಅಭಿಮಾನವನ್ನು, ಪ್ರೀತಿಯನ್ನು ಹಾಗೂ ನಿಸ್ಪಕ್ಷಪಾತವನ್ನು ಸಾಬೀತು ಪಡೆಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸರ್ವಾನುಮತದಿಂದ ಅಪೇಕ್ಷಿಸಿದೆ ಎಂದಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಆರ್ಥಿಕ ವ್ಯವಹಾರಗಳೆಲ್ಲವೂ ಪಾರದರ್ಶಕವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಂತರಿಕ ಲೆಕ್ಕ ಪರಿಶೋಧಕರ ಜೊತೆಗೆ ಶಾಸನಬದ್ದ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರಿಂದಲೂ ತಪಾಸಣೆ ನಡೆಸಲಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಖರ್ಚು ವೆಚ್ಚಗಳೂ ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಯ ಅನ್ವಯ ರೂಪುಗೊಂಡಂತಹ “ಹಣಕಾಸು ಸಮಿತಿ”ಯಲ್ಲಿ ಚರ್ಚೆಗೆ ಒಳಗಾಗಿ ಒಪ್ಪಿಗೆಯನ್ನು ಪಡೆಯುತ್ತವೆ. ಇಲ್ಲಿ ಕರ್ನಾಟಕ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಅಥವಾ ಅವರ ಪ್ರತಿನಿಧಿ ಇರುತ್ತಾರೆ. ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರು ಅಥವಾ ಅವರ ಪ್ರತಿನಿಧಿ ಇರುತ್ತಾರೆ. ಇಲ್ಲಿ ತೆಗೆದು ಕೊಳ್ಳುವ ನಿರ್ಣಯಗಳು ಕಾರ್ಯಕಾರಿ ಸಮಿತಿಯಲ್ಲಿ ಮಂಡಿತವಾಗಿ ಒಪ್ಪಿಗೆ ಪಡೆದ ನಂತರ ವಿಶೇಷ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಳ್ಳುತ್ತವೆ. ಹೀಗಿದ್ದರೂ ಕನ್ನಡ ಸಾಹಿತ್ಯ ಪರಿಷತ್ತಿನ ಲೆಕ್ಕ ಪತ್ರಗಳ ಕುರಿತು ನಿರಂತರವಾಗಿ ಅಪಪ್ರಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅಕೌಂಟೆಂಟ್ ಜನರಲ್ ಆಡಿಟ್ -ಕರ್ನಾಟಕ ಅವರಿಂದ ಮೂರನೆಯ ಆಡಿಟ್ ಮಾಡಿಸಿ,ಇನ್ನಷ್ಟು ಖಚಿತತೆ ಮತ್ತು ನಿಖರತೆಯನ್ನು ಪಡೆಯಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಣಿ ಸರ್ವಾನುಮತದಿಂದ ತೀರ್ಮಾನಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಕುರಿತು ಅತೃಪ್ತರು, ಅಸಂತುಷ್ಟರು, ನಿರಂತರವಾಗಿ ನಡೆಯುತ್ತಿರುವ ಅಪಪ್ರಚಾರ ಮತ್ತು ಪರಿಷತ್ತಿನ ಆಡಳಿತದಲ್ಲಿ ಹಿಂಬಾಗಿಲ ಪ್ರವೇಶದ ಪ್ರಯತ್ನಗಳನ್ನು ಕಾನೂನು ಮೂಲಕ ಎಲ್ಲ ಮಟ್ಟದಲ್ಲೂ ಎದುರಿಸಲು ಕಾರ್ಯಕಾರಿ ಸಮಿತಿಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅವ್ಯವಹಾರಗಳ ಕುರಿತು ಈಗಾಗಲೇ ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದು.ಈ ನಡುವೆ ಕಸಾಪ ಕೇಂದ್ರ ಸಮಿತಿ ಸ್ವಯಂಪ್ರೇರಿತ ಲೋಕಾಯುಕ್ತ ತನಿಖೆಗೆ ನಿರ್ಣಯ ಕೈಗೊಂಡಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!