ಹೈಕೋರ್ಟ್ ಮೊರೆ: ನಾಗರಿಕ ಸಮಿತಿ ಆಕ್ಷೇಪ
‘ವಿರಾಜಪೇಟೆ ಪುರಸಭೆ ಸದಸ್ಯರ ನಡೆ ಸರಿ ಇಲ್ಲ’
30/10/2025
ವಿರಾಜಪೇಟೆ ನಾಗರಿಕ ಸಮಿತಿ ಹಾಗೂ ಸಾಮಾಜಿಕ ಕಾರ್ಯಕರ್ತರ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ನಾಗರಿಕ ಸಮಿತಿಯ ಸಂಚಾಲಕ ಡಾ. ಇ.ಆರ್. ದುರ್ಗಾಪ್ರಸಾದ್ ಅವರು ಮಾತನಾಡಿದರು
ವಿರಾಜಪೇಟೆ: ನಿಯಮದಂತೆ ಪುರ ಸಭೆಯ ಆಡಳಿತ ಮಂಡಳಿಯ ಅಧಿಕಾರದ ಅವಧಿ ಮುಗಿದಿದ್ದರೂ, ಪ್ರಸ್ತುತ ಆಡಳಿತದಲ್ಲಿರುವ ಸದಸ್ಯರು ಅವಧಿ ವಿಸ್ತರಣೆಗೆ ಹೈಕೋರ್ಟ್ ಮೊರೆಹೊಗಿರುವುದು ಜನಾಭಿಪ್ರಾಯಕ್ಕೆ ವಿರುದ್ದ ಮತ್ತು ಹಾಸ್ಯಾಸ್ಪದ ಎಂದು ನಾಗರಿಕ ಸಮಿತಿಯ ಸಂಚಾಲಕ ಡಾ. ಇ.ಆರ್.ದುರ್ಗಾಪ್ರಸಾದ್ ಟೀಕಿಸಿದರು.
ನಾಗರಿಕ ಸಮಿತಿ ಹಾಗೂ ಸಾಮಾಜಿಕ ಕಾರ್ಯಕರ್ತರ ಸಮಿತಿ ವತಿಯಿಂದ ಪಟ್ಟಣದಲ್ಲಿ ಬುಧವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2018ರಲ್ಲಿ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದಿದ್ದು ಇದೀಗ 2025ರ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾಗಿದೆ. 2 ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿಯು ಪುರಸಭೆಯಾಗಿ ಮೇಲ್ದರ್ಜೆಗೇರಿದ್ದು, ವಾರ್ಡ್‌ಗಳ ಸಂಖ್ಯೆ ಹೆಚ್ಚಾಗಿವೆ. ಕಳೆದ 7 ವರ್ಷಗಳ ಅವಧಿಯಲ್ಲಿ ಕೇವಲ ಆರೋಪ ಪ್ರತ್ಯಾರೋಪದಲ್ಲಿ ಮುಳುಗಿ ನಗರದ ಅಭಿವೃದ್ದಿ ಶೂನ್ಯವಾಗಿದೆ. ಇದೀಗ ಅದೇ ಸದಸ್ಯರು ಅವಧಿ ವಿಸ್ತರಿಸಿ ಎಂದು ನ್ಯಾಯಾಲಯದ ಮೆಟ್ಟಿಲೇರಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ದವಾಗಿದೆ. ಪುರಸಭೆಯ ಸದಸ್ಯರ ಈ ನಡೆಯನ್ನು ನಾಗರಿಕರು ಪ್ರಶ್ನಿಸಬೇಕು’ ಎಂದು ಕರೆ ನೀಡಿದರು.
ನಾಗರಿಕ ಸಮಿತಿ ಸದಸ್ಯ ಕೆ.ವಿ.ಸುನೀಲ್ ಮಾತನಾಡಿ, ‘ಪಟ್ಟಣ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರು ಜನಪರ ಕಾರ್ಯದ ವಿಚಾರದಲ್ಲಿ ವಿಫಲರಾಗಿದ್ದಾರೆ. ಸಮಸ್ಯೆಗಳು ಹಾಗೆಯೇ ಉಳಿದಿವೆ. ಇದೀಗ ಸದಸ್ಯರ ವರ್ತನೆಯ ವಿರುದ್ದ ಹೋರಾಟಕ್ಕೆ ಸಮಿತಿ ಮುಂದಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ನಾಗರಿಕ ಸಮಿತಿ ಮತ್ತು ಸಾಮಾಜಿಕ ಕಾರ್ಯಕರ್ತರ ಸಂಯುಕ್ತ ಸಮಿತಿಯ ಸಹ ಸಂಚಾಲಕ ಮಾಳೇಟಿರ ಎಸ್ ಕಾಳಯ್ಯ ಮಾತನಾಡಿ, ‘ಪುರಸಭೆಗೆ ಸದಸ್ಯರ ಅಧಿಕಾರ ಅವಧಿ 5 ವರ್ಷಗಳಾಗಿದ್ದು, ಇದೀಗ ಆಯ್ಕೆಗೊಂಡು 7 ವರ್ಷಗಳಾದರೂ ಪ್ರಸ್ತುತ ಸದಸ್ಯರು ಅಧಿಕಾರದ ಮೇಲಿರುವ ವ್ಯಾಮೋಹದಿಂದ ನ್ಯಾಯಾಲಯ ಮೊರೆ ಹೋಗಿರುವುದು ಜನವಿರೋಧಿ ನೀತಿಯಾಗಿದೆ’ ಎಂದರು.
ನಾಗರಿಕ ಸಮಿತಿ- ಸಾಮಾಜಿಕ ಕಾರ್ಯಕರ್ತರ ಸಮಿತಿಯ ಸಂಯುಕ್ತ ಸಮಿತಿ ವಿರಾಜಪೇಟೆ ಸದಸ್ಯರಾದ ಪಿ.ಕೆ. ಅಬ್ದುಲ್ ರೆಹಮಾನ್, ಎನ್.ಕೆ.ಶರೀಫ್ ಮತ್ತು ತಾತಂಡ ದೇವಯ್ಯ ಇದ್ದರು


 
                                    