Friday, November 7, 2025
spot_img

ಸಾಹಿತ್ಯ ಸಮ್ಮೇಳನದಲ್ಲಿ ಮೈಶುಗರ್ ಜಾಹೀರಾತು ವಂಚನೆ:ಪ್ರೆಸ್ ಕ್ಲಬ್ ವಿರುದ್ದ ಪೋಲಿಸ್ ದೂರು

ಮೈಷುಗರ್ ಹಣ ಕಬಳಿಸಿ, ಭ್ರಷ್ಟಾಚಾರದ ಆರೋಪ.
ಮಂಡ್ಯ ಪತ್ರಕರ್ತರ ಸಂಘದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ವಿರುದ್ಧ ದೂರು.

ಮಂಡ್ಯ: ಜಿಲ್ಲೆಯ ರೈತರ ಜೀವನಾಡಿ ಮೈಸೂರು ಸಕ್ಕರೆ ಕಂಪನಿಯ ಹಣವನ್ನು ಕಬಳಿಸಿ, ಭ್ರಷ್ಟಾಚಾರ ನಡೆಸಿರುವ ಆರೋಪದ ಸಂಬಂಧ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.

ಈ ಸಂಬಂಧ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪಶ್ಚಿಮ ಪೊಲೀಸ್ ಠಾಣೆಗೆ ಪತ್ರಕರ್ತ ಕೆ.ಹೆಚ್.ಯತೀಶ ಬಾಬು ಎಂಬುವವರು ಪ್ರತ್ಯೇಕ ದೂರು ನೀಡಿದ್ದು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ವಿರುದ್ಧ ಕಾನೂನುಕ್ರಮಕ್ಕೆ ಆಗ್ರಹಿಸಿದ್ದಾರೆ.

2024ರ ಡಿಸೆಂಬರ್ ತಿಂಗಳಿನಲ್ಲಿ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನೆಪವಾಗಿಟ್ಟುಕೊಂಡು ಮಂಡ್ಯದ ಮೈಸೂರು ಸಕ್ಕರೆ ಕಂಪನಿಯಿಂದ ಒಟ್ಟು 8.90ಲಕ್ಷ ರೂ.ಗಳನ್ನು ಜಾಹೀರಾತು ಹೆಸರಿನಲ್ಲಿ ಅಕ್ರಮವಾಗಿ ತಮ್ಮ ಸಂಘದ ಬ್ಯಾಂಕಿನ ಖಾತೆಗೆ ವರ್ಗಾಯಿಸಿಕೊಂಡು ಲೂಟಿ ಹೊಡೆದಿದ್ದಾರೆ ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಡ್ಯ ಎಂಬುದೇ ಅನಧಿಕೃತ ಸಂಘ. ನೋಂದಣಿಯೇ ಆಗದ ಈ ಸಂಘದ ಹೆಸರಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ.), ಮಂಡ್ಯ ಎಂದು ಕಾನೂನುಬಾಹಿರವಾಗಿ ಲೆಟರ್ ಹೆಡ್, ಸೀಲುಗಳನ್ನ ಮಾಡಿಸಿಕೊಂಡು ಮೈಷುಗರ್ ಅಧ್ಯಕ್ಷರಿಗೆ ಪತ್ರ ವ್ಯವಹಾರ ನಡೆಸಿದ್ದಾರೆ.

ಅದರಂತೆ ನಕಲಿ ಪತ್ರಕರ್ತರ ಸಂಘಕ್ಕೆ ರೂ.8.90ಲಕ್ಷ ರೂ.ಗಳನ್ನ ಬಿಡುಗಡೆ ಮಾಡಲು ಅನುಮೋದನೆ ಹಾಗೂ ಧನಾದೇಶಕ್ಕೆ ಅನುಮತಿಸಲು ಮೈಷುಗರ್ ಅಧಕ್ಷ ಸಿ.ಡಿ.ಗಂಗಾಧರ್ ಕಂಪನಿಯ ಅಧಿಕಾರಿಗಳ ಮೇಲೆ ತೀವ್ರ ಒತ್ತಡ ತಂದಿದ್ದಾರೆ. ಇದರ ಪರಿಣಾಮ 28 ಫೆಬ್ರುವರಿ 2025ರಂದು ಮೈಸೂರು ಸಕ್ಕರೆ ಕಂಪನಿಯ ಬರೋಡ ಬ್ಯಾಂಕ್‌ ಖಾತೆಯಿಂದ ಪತ್ರಕರ್ತರ ಸಂಘದ ಕೆನರಾ ಬ್ಯಾಂಕ್, ಬನ್ನೂರು ರಸ್ತೆ ಶಾಖೆಗೆ RTGS ಮೂಲಕ ಒಟ್ಟು 8.90 ಲಕ್ಷ ರೂ. ವರ್ಗಾವಣೆ ಮಾಡಲಾಗಿದೆ.

ಮೈಷುಗರ್ ಅಧ್ಯಕ್ಷ ಮತ್ತು ವ್ಯವಸ್ಥಾಪಕರಿಗೆ ಪತ್ರಕರ್ತರ ಸಂಘದ ಲೆಟರ್ ಹೆಡ್ ನಲ್ಲಿ ಬರೆದ ಪತ್ರದ ಒಪ್ಪಂದದಂತೆ ಜಾಹೀರಾತು ಪ್ರಕಟಿಸಿರುವ ಪತ್ರಿಕೆಗಳ ಬಿಲ್ ಗಳು ಹಾಗೂ ಹಣ ಸ್ವೀಕರಿಸಿದ ರಶೀದಿಗಳನ್ನ ತಮ್ಮ ಕಂಪನಿಗೆ ಸಲ್ಲಿಸಲು ನಾವು ಬದ್ಧವಾಗಿರುತ್ತೇವೆ. ಒಂದೊಮ್ಮೆ ಹೆಚ್ಚುವರಿಯಾಗಿ ಹಣ ಉಳಿಕೆಯಾದಲ್ಲಿ ಅದನ್ನು ಹಿಂದಿರುಗಿಸಲು ಸಹ ನಾವು ಬದ್ಧರಾಗಿರುತ್ತೇವೆ ಎಂದು ಬರೆದುಕೊಡಲಾಗಿದೆ.ಆದರೆ ಜಾಹೀರಾತು ಪ್ರಕಟಿಸಿದ ಪತ್ರಿಕೆಗಳಿಗೆ ಕೇವಲ ಐದು ಸಾವಿರ ನೀಡಿ, ಉಳಿಕೆ ಐದು ಲಕ್ಷಕ್ಕು ಹೆಚ್ಚಿನ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
ಆದ್ದರಿಂದ ಈ ಪ್ರಕರಣವನ್ನ ದಾಖಲಿಸಿಕೊಂಡು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳುವಂತೆ ತಮ್ಮ ದೂರಿನಲ್ಲಿ ನಿವೇದಿಸಿಕೊಂಡಿದ್ದಾರೆ.

ಸರಕಾರದ ಜಾಹೀರಾತು ನಿಯಮದ ಪ್ರಕಾರ ಯಾವುದೆ ಖಾಸಗಿ ಸಂಘ ಸಂಸ್ಥೆಗಳ ಮೂಲಕ ಸರಕಾರಿ ಜಾಹೀರಾತು ಬಿಡುಗಡೆ ಮಾಡುವಂತಿಲ್ಲ.

ಬದಲಿಗೆ ವಾರ್ತಾ ಇಲಾಖೆ ಮತ್ತು ವಾರ್ತಾ ಇಲಾಖೆ ನಿಗದಿಪಡಿಸಿರುವ ಏಜೆನ್ಸಿಗಳ ಮೂಲಕವೇ ಜಾಹೀರಾತು ಬಿಡುಗಡೆ ಮಾಡಬೇಕು.ಆದರೆ ಈ ಪ್ರಕರಣದಲ್ಲಿ ನಿಯಮಬಾಹಿರವಾಗಿ ಮೈಶುಗರ್ ಅಧ್ಯಕ್ಷರು ಪತ್ರಕರ್ತರ ಸಂಘದ ಮೂಲಕ ಜಾಹೀರಾತು ಬಿಡುಗಡೆ ಮಾಡಿದ್ದಾರೆ‌.ಅಲ್ಲದೆ ವಾರ್ತಾ ಇಲಾಖೆ ನಿಗದಿಪಡಿಸಿದ ದರದ ಬದಲು ಪತ್ರಿಕೆಗಳ ಸಂಪಾದಕರಿಗೆ ಕಡಿಮೆ ದರ ನೀಡಿ ವಂಚಿಸಲಾಗಿದೆ ಎಂಬುದು ಪ್ರಮುಖ ಆರೋಪವಾಗಿದೆ.

ಒಟ್ಟಿನಲ್ಲಿ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಕೋಟಿಗಟ್ಟಲೆ ಭ್ರಷ್ಟಾಚಾರ ನಡೆದಿರುವುದು ಸಾಹಿತ್ಯಸಕ್ತರ ಹುಬ್ಬೇರುವಂತೆ ಮಾಡಿದೆ.ಈಗಾಗಲೇ ಸಾಹಿತ್ಯ ಸಮ್ಮೇಳನದಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ದ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿರುವ ಬೆನ್ನಲ್ಲೆ ಮೈಶುಗರ್ ಸಕ್ಕರೆ ಕಾರ್ಖಾನೆಯ ಹಣವನ್ನು ಬಳಸಿ ಭ್ರಷ್ಟಾಚಾರ ಎಸಗಿರುವುದು ರೈತರಿಗೆ ಮೈಶುಗರ್ ಭವಿಷ್ಯದ ಬಗ್ಗೆ ತೀವ್ರ ಆತಂಕ ಸೃಷ್ಟಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!