Wednesday, November 12, 2025
spot_img

ಹಳಿ ತಪ್ಪಿದ ಬೀದರ್ ಮೆಡಿಕಲ್ ಕಾಲೇಜು ಆಡಳಿತ

ಬ್ರಿಮ್ಸ್‌ ಹಳಿ ತಪ್ಪಲು ಯಾರು ಕಾರಣ?
ಖಾಸಗಿ ಆಸ್ಪತ್ರೆಗಳಲ್ಲೇ ಹೆಚ್ಚು ಸಮಯ ಕಳೆಯುವ ಬ್ರಿಮ್ಸ್ ವೈದ್ಯರು!
10/11/2025

 

ಬೀದರ್‌: ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬ್ರಿಮ್ಸ್‌) ಹಳಿ ತಪ್ಪಲು ಕಾರಣ ಯಾರು? ಇಂತಹದ್ದೊಂದು ಪ್ರಶ್ನೆ ಮೂಲಕ ವೈದ್ಯಕೀಯ ಸಂಸ್ಥೆ ಪುನಃ ಸಾರ್ವಜನಿಕರ ನಡುವೆ ಚರ್ಚೆಗೆ ಗ್ರಾಸವಾಗಿದೆ.

ಬ್ರಿಮ್ಸ್‌ ಹಾಳಾಗಲು ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರದ ದುರಾಡಳಿತ ಕಾರಣವೆಂದು ವಿರೋಧ ಪಕ್ಷ ಬಿಜೆಪಿ ಆರೋಪಿಸಿದರೆ, ಈ ಸಂಸ್ಥೆಯ ದುರವಸ್ಥೆಗೆ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್‌ ತಿರುಗೇಟು ನೀಡಿದೆ. ಪರಸ್ಪರ ಆರೋಪ–ಪ್ರತ್ಯಾರೋಪ ಮುಂದುವರಿದಿದೆ. ಆದರೆ, ವಾಸ್ತವದಲ್ಲಿ ಈ ಸಂಸ್ಥೆಯ ದುರವಸ್ಥೆಗೆ ಕಾರಣ ಯಾರು ಎಂದು ನೋಡಿದರೆ ಎರಡೂ ಪಕ್ಷಗಳು ಸಮಾನ ಹೊಣೆ ಹೊರಬೇಕಾಗುತ್ತದೆ.

ಕಾಂಗ್ರೆಸ್‌ ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬ್ರಿಮ್ಸ್‌ಗೆ ಅಗತ್ಯ ಅನುದಾನ ಹರಿದು ಬಂದಿದೆ. ಆದರೆ, ಅಲ್ಲಿನ ಮೂಲ ಸಮಸ್ಯೆಯತ್ತ ಎರಡೂ ಪಕ್ಷಗಳು ಗಮನ ಹರಿಸಿಲ್ಲ. ಒಂದು ವೇಳೆ ಗಮನಹರಿಸಿದ್ದರೂ ಅಸಡ್ಡೆ ತೋರಿಸಿದ ಆರೋಪಗಳಿವೆ.

ಪ್ರಭಾವಿಗಳ ಸಂಬಂಧಿಕರು: ಸರ್ಕಾರಗಳು ಬದಲಾಗುತ್ತ ಹೋಗಿವೆ. ಆದರೆ, ಬ್ರಿಮ್ಸ್‌ ಮಾತ್ರ ಬದಲಾಗಿಲ್ಲ. ದಿನೇ ದಿನೇ ಕೆಟ್ಟ ಕಾರಣಗಳಿಗಾಗಿ ಬ್ರಿಮ್ಸ್‌ ಸುದ್ದಿಯಲ್ಲಿರುತ್ತಿದೆ. ಹೀಗಿದ್ದರೂ ಕಠಿಣ ಕ್ರಮವೇಕೆ ಸಾಧ್ಯವಾಗುತ್ತಿಲ್ಲ?

ಈ ಪ್ರಶ್ನೆಯ ಆಳಕ್ಕೆ ಇಣುಕಿ ನೋಡಿದರೆ ಅಲ್ಲಿ ಕೆಲಸ ನಿರ್ವಹಿಸುತ್ತಿರುವವರಲ್ಲಿ ಹೆಚ್ಚಿನವರು ಪ್ರಭಾವಿಗಳು, ರಾಜಕಾರಣಿಗಳ ಸಂಬಂಧಿಕರಾಗಿರುವುದು ಒಂದು ಪ್ರಮುಖ ಕಾರಣ. ರಾಜಕೀಯ ಪಕ್ಷಗಳೊಂದಿಗೆ ಪರೋಕ್ಷವಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿಯೇ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರರೂಢರಿಗೆ ಸಾಧ್ಯವಾಗುತ್ತಿಲ್ಲ ಎಂಬ ಗಂಭೀರ ಆರೋಪಗಳಿವೆ.

ಹೆಚ್ಚಿನ ವೈದ್ಯರು, ಪ್ರಮುಖ ಹುದ್ದೆಗಳಲ್ಲಿರುವವರ ಕೆಲಸ ಕೇವಲ ‘ಪಂಚ್‌’ ಮಾಡಲು ಸೀಮಿತವಾಗಿದೆ ಎಂಬ ಗಂಭೀರ ಆರೋಪಗಳಿವೆ. ಸಕಾಲಕ್ಕೆ ಪಂಚ್‌ ಮಾಡುವ ವೈದ್ಯರು, ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ‘ಕರೆ’ ಬಂದಾಗಲಷ್ಟೇ ಅಲ್ಲಿಗೆ ದೌಡಾಯಿಸುತ್ತಾರೆ. ಒಂದು ರೀತಿಯಲ್ಲಿ ‘ಅತಿಥಿ ವೈದ್ಯ’ರಂತೆ ಕೆಲಸ ಮಾಡುತ್ತಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಸಂಬಳಕ್ಕೆ ತಕ್ಕಂತೆ ಬದ್ಧತೆಯಿಂದ ಕೆಲಸ ನಿರ್ವಹಿಸುವವರ ಸಂಖ್ಯೆ ವಿರಳಾತಿ ವಿರಳ.

ಈ ರೀತಿ ಕೆಲಸ ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ್ದು ಈ ಹಿಂದೆ ಜಿಲ್ಲಾಧಿಕಾರಿ ಆಗಿದ್ದ ಅನಿರುದ್ಧ್‌ ಶ್ರವಣ್‌ ಅವರು. 2017–18ನೇ ಸಾಲಿನಲ್ಲಿ ಅನಿರುದ್ಧ್‌ ಅವರು ಕೆಲ ಕಠಿಣ ಕ್ರಮಗಳ ಮೂಲಕ ಬ್ರಿಮ್ಸ್‌ ವೈದ್ಯರು, ಅಲ್ಲಿನ ಸಿಬ್ಬಂದಿಗೆ ಚುರುಕು ಮುಟ್ಟಿಸಿದ್ದರು. ಇದರ ಪರಿಣಾಮ ವೈದ್ಯಕೀಯ ಸಂಸ್ಥೆ ಸುಧಾರಣೆಯ ಹಳಿ ಮೇಲೆ ಹೊರಟಿತ್ತು. ಆದರೆ, ಪ್ರಭಾವಿಗಳ ಸಂಬಂಧಿಕರ ಲಾಬಿ ಎಷ್ಟರಮಟ್ಟಿಗೆ ಕೆಲಸ ಮಾಡಿತ್ತೆಂದರೆ ಸುಧಾರಣೆ ಮೂಲಕ ಜನರಿಗೆ ಅತ್ಯುತ್ತಮ ಸೇವೆ ಒದಗಿಸಲು ಮುಂದಾಗಿದ್ದ ಅನಿರುದ್ಧ್‌ ಅವರನ್ನೇ ಜಿಲ್ಲೆಯಿಂದ ಎತ್ತಂಗಡಿ ಮಾಡಲಾಗಿತ್ತು. ಆನಂತರ ಬಂದ ಜಿಲ್ಲಾಧಿಕಾರಿಗಳು ಆ ಕಡೆಗೆ ಗಮನವೇ ಹರಿಸಲಿಲ್ಲ.

ಶೆಟಕಾರ್ ಅವಧಿಯಲ್ಲಿ ಒಂದಿಲ್ಲೊಂದು ಎಡವಟ್ಟು

ಡಾ. ಶಿವಕುಮಾರ ಶೆಟಕಾರ್‌ ಅವರು ಬ್ರಿಮ್ಸ್‌ ನಿರ್ದೇಶಕರಾಗಿ ಬಂದ ದಿನದಿಂದಲೂ ಒಂದಿಲ್ಲೊಂದು ಕಾರಣಗಳಿಂದ ವೈದ್ಯಕೀಯ ಸಂಸ್ಥೆ ಸುದ್ದಿಯಲ್ಲಿದೆ.

ಬ್ರಿಮ್ಸ್‌ ನೇಮಕಾತಿ, ಟೆಂಡರ್‌, ಔಷಧಗಳ ಖರೀದಿ, ನರ್ಸ್‌ಗಳ ಮೇಲಿನ ಕಿರುಕುಳ, ಅಸಮರ್ಪಕ ಚಿಕಿತ್ಸೆ, ಆಡಳಿತದಲ್ಲಿ ಬಿಗಿ ಇಲ್ಲದಿರುವುದು, ದಕ್ಷತೆಯ ಕೊರತೆ ಹೀಗೆ ಅನೇಕ ಕಾರಣಗಳಿಂದ ಸಂಸ್ಥೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೆಲ್ಲ ಮನಗಂಡೇ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಇದನ್ನು ಗಂಭೀರವಾಗಿ ಪರಿಗಣಿಸಿ, ಶೆಟಕಾರ್‌ ಅವರನ್ನು ಎತ್ತಂಗಡಿ ಮಾಡಿದ್ದರು. ಆದರೆ, ಶೆಟಕಾರ್ ಕೆಎಟಿ ಮೂಲಕ ತಡೆಯಾಜ್ಞೆ ತಂದು ಸೇವೆಯಲ್ಲಿ ಮುಂದುವರಿದಿದ್ದಾರೆ. ಆದರೆ, ವೈದ್ಯಕೀಯ ಸೇವೆಗಳು ಸುಧಾರಣೆ ಕಂಡಿಲ್ಲ. ನಡೆದಿದೆ ಎನ್ನಲಾದ ಅಕ್ರಮಗಳ ಮೂಲಕ ಬ್ರಿಮ್ಸ್‌ ಸದ್ದು ಮಾಡಿದೆ. ಹೀಗಾಗಿಯೇ ಈಶ್ವರ ಖಂಡ್ರೆ ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರಿಗೆ ಪತ್ರ ಬರೆದು, ನಿವೃತ್ತ ನ್ಯಾಯಾಧೀಶರಿಂದ ಅಕ್ರಮದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಬ್ರಿಮ್ಸ್‌ನಲ್ಲಿ ದೊಡ್ಡ ಮಟ್ಟದ ಸುಧಾರಣೆಯ ಮಾತುಗಳನ್ನು ಆಡಿದ್ದಾರೆ.

ಚುರುಕು ಮುಟ್ಟಿಸಿದ

ಖಂಡ್ರೆ

ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಬಂದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಬ್ರಿಮ್ಸ್‌ ಅಧಿಕಾರಿಗಳ ಸಭೆ ನಡೆಸಿ, ಚುರುಕು ಮುಟ್ಟಿಸಿದರು. ತಳವೂರಿದ್ದ ಕೆಲವರನ್ನು ಬೇರೆಡೆ ಎತ್ತಂಗಡಿ ಸಹ ಮಾಡಿಸಿದ್ದರು. ಹಳೆಯ ಆಸ್ಪತ್ರೆಯ ನವೀಕರಣ, ವಿಶೇಷ ಕಾಳಜಿ ವಹಿಸಿ ಕ್ಯಾಥ್‌ಲ್ಯಾಬ್‌ ಆರಂಭಿಸಿದರು. ಆದರೆ, ತಜ್ಞ ವೈದ್ಯರ ನೇಮಕಾತಿ ಆಗದ ಕಾರಣ ಇದುವರೆಗೆ ಅದನ್ನು ಆರಂಭಿಸಲು ಸಾಧ್ಯವಾಗಿಲ್ಲ. ಹೀಗಾಗಿಯೇ ಕ್ಯಾಥ್‌ಲ್ಯಾಬ್‌ ಅನ್ನು ಕಲಬುರಗಿ ಜಯದೇವ ಹೃದ್ರೋಗ ಸಂಸ್ಥೆಯ ಸುಪರ್ದಿಗೆ ವಹಿಸಿ, ಅಲ್ಲಿನ ತಜ್ಞ ವೈದ್ಯರನ್ನು ನಿಯೋಜಿಸಬೇಕೆಂದು ಖಂಡ್ರೆ ಹೇಳಿದ್ದಾರೆ. ಆದರೆ, ಇನ್ನಷ್ಟೇ ಈ ಕುರಿತು ನಿರ್ಧಾರವಾಗಬೇಕಿದೆ.

ಈ ನಡುವೆ ಬ್ರಿಮ್ಸ್‌ಗೆ ಕ್ಯಾನ್ಸರ್‌ ಸೆಂಟರ್‌ ಕೂಡ ಮಂಜೂರಾಗಿದೆ. ಹೀಗೆ ಸರ್ಕಾರದ ಮಟ್ಟದಲ್ಲಿ ಜನರಿಗೆ ಬೇಕಾದ ಸವಲತ್ತುಗಳನ್ನು ಕಲ್ಪಿಸುತ್ತ ಬಂದಿದ್ದಾರೆ. ಆದರೆ, ಬ್ರಿಮ್ಸ್‌ ನಿರ್ದೇಶಕರಿಂದ ಸಿಗದ ಸಹಕಾರದಿಂದ ಪರಿಣಾಮಕಾರಿಯಾಗಿ ಸೇವೆಗಳು ಒದಗಿಸಲು ಸಾಧ್ಯವಾಗಿಲ್ಲ. ತಜ್ಞ ವೈದ್ಯರು ಬೀದರ್‌ಗೆ ಬರಲು ಹಿಂದೇಟು ಹಾಕುತ್ತಿರುವುದು ಇನ್ನೊಂದು ಮುಖ್ಯ ಕಾರಣ.

ಬ್ರಿಮ್ಸ್‌ ಸುತ್ತಲೂ ಖಾಸಗಿ ಆಸ್ಪತ್ರೆಗಳು

ಸರ್ಕಾರಿ ಆಸ್ಪತ್ರೆಯ ಸನಿಹದಲ್ಲಿ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಕೆಲಸ ನಿರ್ವಹಿಸಬಾರದೆನ್ನುವ ನಿಯಮ ಇದೆ. ಆದರೆ, ಬ್ರಿಮ್ಸ್ ಸುತ್ತಲೂ ನಾಯಿ ಕೊಡೆಗಳಂತೆ ಖಾಸಗಿ ಆಸ್ಪತ್ರೆಗಳು ನಿರ್ಮಾಣಗೊಂಡಿವೆ.

ಬ್ರಿಮ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತಲೇ ಕೆಲ ವೈದ್ಯರು ಅವರ ಖಾಸಗಿ ಕ್ಲಿನಿಕ್‌ಗಳಿಗೆ ಹೋಗಿ ಬರುತ್ತಾರೆ. ಹಣದಾಸೆಗೆ ರೋಗಿಗಳಿಗೆ ಬ್ರಿಮ್ಸ್‌ನಲ್ಲಿ ಉತ್ತಮ ಚಿಕಿತ್ಸೆ ಕೊಡುತ್ತಿಲ್ಲ. ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳಿಸಿ, ಅವರಿಂದ ಹಣ ಕೀಳುತ್ತಿದ್ದಾರೆ ಎಂಬ ಗಂಭೀರ ಸ್ವರೂಪದ ಆರೋಪಗಳಿವೆ. ಈ ವಿಷಯ ಈಗ ಗುಟ್ಟಾಗೇನೂ ಉಳಿದಿಲ್ಲ.

ಟೆಂಡರ್‌ನಲ್ಲೂ ‘ಪ್ರಭಾವಿ’ಗಳು

ಬ್ರಿಮ್ಸ್‌ನಲ್ಲಿ ಔಷಧಿ, ಅಗತ್ಯ ವಸ್ತುಗಳ ಪೂರೈಕೆ, ವಿವಿಧ ಕಾಮಗಾರಿಗಳ ಟೆಂಡರ್‌ಗಳು ಕೂಡ ಪ್ರಭಾವಿ ವ್ಯಕ್ತಿಗಳು, ರಾಜಕಾರಣಿಗಳ ಸಂಬಂಧಿಕರ ಪಾಲಾಗುತ್ತಿವೆ.

ಈ ಕಾರಣದಿಂದ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುತ್ತಿಲ್ಲ. ಯಾರೂ ಕೂಡ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ ಎನ್ನುವುದು ಅಷ್ಟೇ ಸತ್ಯ. ಇನ್ನು, ನಿಯಮಿತವಾಗಿ ಕೆಲ ನಿರ್ದಿಷ್ಟ ವ್ಯಕ್ತಿಗಳಿಗೆ ಔಷಧಿ ಸರಬರಾಜಿನ ಗುತ್ತಿಗೆ ವಹಿಸಲಾಗುತ್ತಿದೆ ಎಂಬ ಆರೋಪವೂ ಇದೆ. ಬಿಲ್‌ ಮಾಡುವವರು ಅವರೊಂದಿಗೆ ಶಾಮೀಲಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!