ಬೆಂಗಳೂರು: ‘ಅವಧಿ ಮುಗಿಯಲಿರುವ ರಾಜ್ಯದ 187 ನಗರ ಸ್ಥಳೀಯ ಸಂಸ್ಥೆಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸಲು ಅನುವಾಗುವಂತೆ ವಾರ್ಡ್‌ವಾರು ಮೀಸಲಾತಿ ಜೊತೆಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸಲು ನಿರ್ದೇಶಿಸ ಬೇಕು’ ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಪ್ರಸಕ್ತ ವರ್ಷದ ಅಂತ್ಯಕ್ಕೆ ಅವಧಿ ಮುಕ್ತಾಯಗೊಳ್ಳಲಿರುವ ರಾಜ್ಯದ 47 ನಗರಸಭೆ, 91 ಪುರಸಭೆ, 49 ಪಟ್ಟಣ ಪಂಚಾಯಿತಿ ಸೇರಿ ಒಟ್ಟು 187 ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಗೊಳಿಸಲು ಆದೇಶಿಸಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರದ ಪರ ವಕೀಲರಿಗೆ ನಿರ್ದೇಶಿಸಿತು. ವಿಚಾರಣೆಯನ್ನು ಡಿಸೆಂಬರ್ 11ಕ್ಕೆ ಮುಂದೂಡಲಾಗಿದೆ.
ಅರ್ಜಿಯಲ್ಲಿ ಏನಿದೆ?: ‘ಕಲಬುರಗಿ ಜಿಲ್ಲೆ ಶಹಬಾದ ತಾಲ್ಲೂಕಿನ ವಾಡಿ ಪುರಸಭೆ ಯ ಅವಧಿ 2020ರ ನವೆಂಬರ್‌ನಲ್ಲಿ ಮತ್ತು ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ಪುರಸಭೆ ಅವಧಿ ಇದೇ ವರ್ಷದ ಸೆಪ್ಟಂಬರ್‌ನಲ್ಲಿ ಕೊನೆಗೊಂಡಿದೆ. ಅಕ್ಟೋಬರ್‌ನಲ್ಲಿ 59 ನಗರ ಸ್ಥಳೀಯ ಸಂಸ್ಥೆಗಳ ಅವಧಿ ಮುಗಿದಿದೆ. ಉಳಿದ 126 ನಗರ ಸ್ಥಳೀಯ ಸಂಸ್ಥೆಗಳ ಅವಧಿ ನವೆಂಬರ್ ಮತ್ತು ಡಿಸೆಂಬರ್‌ಗೆ ಅಂತ್ಯವಾಗಲಿದೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
‘ಇವೆಲ್ಲವುಗಳಿಗೆ ಮೀಸಲಾತಿ ನಿಗದಿಗೆ ಕೋರಿದ್ದರೂ ಇನ್ನೂ ನಿಗದಿಯಾಗಿಲ್ಲ ’ ಎಂದು ಅರ್ಜಿಯಲ್ಲಿ ದೂರಲಾಗಿದೆ.


