*ಮೇಕೆದಾಟು ಯೋಜನೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ*
*ಮೇಕೆದಾಟು ಯೋಜನೆ ಜಿಲ್ಲೆಯ 1079 ಹೆಕ್ಟೇರ್ ಪ್ರದೇಶ ಅಗತ್ಯ:ಡಾ.ಕುಮಾರ*
ಮೇಕೆದಾಟು ಯೋಜನೆ ಪ್ರಾರಂಭಿಸಲು ಜಿಲ್ಲೆಯ 1079 ಹೆಕ್ಟೇರ್ ಪ್ರದೇಶದ ಬೇಕಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಳವಳ್ಳಿ ತಾಲ್ಲೂಕಿನ 5 ಗ್ರಾಮಗಳಲ್ಲಿ 1079 ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ ಅದಕ್ಕೆ ಬದಲಿಯಾಗಿ 1:2 ಅನುಪಾತದಲ್ಲಿ ಜಿಲ್ಲೆಯ 2204 ಹೆಕ್ಟೇರ್ ಜಾಗವನ್ನು ಅರಣ್ಯ ಇಲಾಖೆಗೆ ನೀಡಲು ಜಾಗ ಗುರುತಿಸಲಾಗಿತ್ತು. ಈ ಹಿಂದೆ ಗುರುತಿಸಲಾದ 2204 ಹೆಕ್ಟೇರ್ ಜಾಗವನ್ನು ತೆಗೆದುಕೊಳ್ಳಲಾಗುತ್ತಿಲ್ಲ ಎಂದು ತಿಳಿಸಿದರು.
ಅರಣ್ಯ ಇಲಾಖೆಗೆ 1:1 ಅನುಪಾತದಲ್ಲಿ 1079 ಹೆಕ್ಟೇರ್ ಅರಣ್ಯೇತರ ಜಾಗ, ಗೊಮಾಳ, ಸರ್ಕಾರಿ ಜಾಗಗಳನ್ನು ನೀಡಬೇಕು. ಈಗಾಗಲೇ ಪಾಂಡವಪುರ ಮತ್ತು ನಾಗಮಂಗಲದಲ್ಲಿ 307 ಹೆಕ್ಟೇರ್ ಪ್ರದೇಶವನ್ನು ಗುರುತಿಸಲಾಗಿದ್ದು ಅರಣ್ಯ ಇಲಾಖೆಯೂ ಸಹ ಸದರಿ ಜಾಗಕ್ಕೆ ಸೂಕ್ತತೆ ಪ್ರಮಾಣ ಪತ್ರ ನೀಡಿದೆ ಎಂದರು.
ಬಾಕಿ ಉಳಿದ 757 ಹೆಕ್ಟೇರ್ ಜಾಗವನ್ನು ಗುರುತಿಸಿ ಅರಣ್ಯ ಇಲಾಖೆಗೆ ನೀಡಬೇಕು. ಅಧಿಕಾರಿಗಳು ತಾಲ್ಲೂಕುವಾರು ತಂಡ ರಚಿಸಿ ಉಳಿದ 757 ಹೆಕ್ಟೇರ್ ಜಾಗವನ್ನು ಗುರುತಿಸಿ 15 ದಿನಗಳೊಳಗಾಗಿ ಸೂಕ್ತತೆ ಪ್ರಮಾಣ ಪಡೆಯಬೇಕು. ಉಪ ಮುಖ್ಯಮಂತ್ರಿಗಳು ಪ್ರತಿ 15 ದಿನಗಳಿಗೊಮ್ಮೆ ಮೇಕೆದಾಟು ಯೋಜನೆ ಕುರಿತು ಸಭೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.
ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್, ಎ.ಸಿ.ಎಫ್. ಎ.ಡಿ.ಎಲ್.ಆರ್ ಮತ್ತು ಕಾವೇರಿ ನಿರಾವರಿ ನಿಗಮದ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ ಸೂಕ್ತ ಪರ್ಯಾಯ ಜಾಗ ಗುರುತಿಸಬೇಕು. ಅರಣ್ಯೇತರ ಜಾಗವನ್ನು ಗುರುತಿಸುವಾಗ ಸದರಿ ಜಾಗದ ಕುರಿತು ಯಾವುದೇ ಅಕ್ರಮ ಸಕ್ರಮ ಇರಬಾರದು. ಅಧಿಕಾರಿಗಳು ಗುರುತಿಸಿರುವ ಜಾಗ ಸರ್ವೇ ಮತ್ತು ಸ್ಕೆಚ್ ಕಡ್ಡಾಯವಾಗಿ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ಕಾವೇರಿ ನೀರಾವರಿ ನಿಗಮದ ಅಭಿಯಂತರ ರಘುರಾಮನ್, ಅರಣ್ಯ ಇಲಾಖೆಯ ಡಿ.ಎಫ್.ಓ ರಘು ತಾಲ್ಲೂಕು ಮಟ್ಟದ ಅರಣ್ಯಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮುಳುಗಡೆ:ಮೇಕೆದಾಟು ಸಮತೋಲಿತ ಜಲಾಶಯ ನಿರ್ಮಾಣದಿಂದ ಮಂಡ್ಯ ಜಿಲ್ಲೆಯ ಮುತ್ತತ್ತಿ ಅರಣ್ಯ ಪ್ರದೇಶ ಸಂಪೂರ್ಣ ಮುಳುಗಡೆಯಾಗಲಿದೆ.ಇದರಿಂದ ಅರಣ್ಯದಲ್ಲಿನ ಅಪರೂಪದ ಸಸ್ಯ ಸಂಕುಲ ಜತೆಗೆ ಹುಲಿ ಆನೆಗಳು ಸೇರಿದಂತೆ ಅಪಾರ ಜೀವಿಗಳ ಅಸ್ತಿತ್ವಕ್ಕೆ ಧಕ್ಕೆ ಒದಗಿಬರಲಿದೆ.ಏಶಿಯಾದ ಅಪರೂಪದ ಮಹಶೀರ್ ಮೀನು ಸೇರಿದಂತೆ ಹಲವಾರು ಜೀವ ವೈವಿಧ್ಯಗಳು ನಾಶವಾಗುವ ಅಪಾಯ ಎದುರಿಸುತ್ತಿದ್ದು ಪರಿಸರವಾದಿಗಳು ಈಗಾಗಲೇ ಮೇಕೆದಾಟು ವಿರುದ್ದ ದನಿ ಏರಿಸಿದ್ದಾರೆ.


