ಹಳೇ ಮೈಸೂರು, ನ.24: ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಪರಿವರ್ತನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ವತಿಯಿಂದ ಸಂವಿಧಾನೋತ್ಸವ ಹಾಗೂ ಭಾತರದ ಸಂವಿಧಾನ ಬೃಹತ್ ಜಾಗೃತಿ ಮೆರವಣಿಗೆ ಕಾರ್ಯಕ್ರಮವನ್ನು ನ.26ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್‍ಯದರ್ಶಿ ಟಿ.ಡಿ.ನಾಗರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 2 ಗಂಟೆಗೆ ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನವನದಿಂದ ಜಿಲ್ಲಾಧಿಕಾರಿ ಕಛೇರಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿಯ ವೇದಿಕೆವರೆಗೆ ಜಾಗೃತಿ ಮೆರವಣಿಗೆ ನಡೆಯಲಿದೆ. ಸಂಜೆ.5:30ಕ್ಕೆ ವೇದಿಕೆ ಕಾರ್‍ಯಕ್ರಮ ನೆರವೇರಲಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಡಾ.ಎಂ.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್‍ಯಕ್ರಮವನ್ನು ಶಾಸಕ ಪಿ.ರವಿಕುಮಾರ್‌ಗೌಡ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಪರಿಸರ ಮಾಲಿನ್ಯ ನಿಯಂತ್ರ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗೌರವ ಉಪಸ್ಥಿತಿ ವಹಿಸಲಿದ್ದು, ಮೈತ್ರೇಯ ಗ್ಲೋಬಲ್ ಅಕಾಡೆಮಿಯ ನಿರ್ದೇಶಕ ಡಾ.ಜಿ.ಶ್ರೀನಿವಾಸ್ ಸಂವಿಧಾನದ ಕುರಿತು ಉಪನ್ಯಾಸ ನೀಡುವರು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮದ ಉಪಾಧ್ಯಕ್ಷರಾದ ವಿಜಯಲಕ್ಷ್ಮಿ ರಘುನಂದನ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಾ.ಮೀರಾ ಶಿವಲಿಂಗಯ್ಯ, ಸುನಂದ ಜಯರಾಂ, ಡಾ.ಜಯಪ್ರಕಾಶ್‌ಗೌಡ, ಪ್ರೊ.ಹುಲ್ಕೆರೆ ಮಹದೇವು ಸೇರಿದಂತೆ ಪ್ರಗತಿಪರ ಸಂಘಟನೆಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಂವಿಧಾನ ಸಂಬಂಧ ಜಿಲ್ಲಾದ್ಯಂತ ೮ ಕ್ಲಸ್ಟರ್ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು, ಒಟ್ಟು ೨೪ ಮಂದಿಗೆ ಬಹುಮಾನ ವಿತರಣೆ ಮಾಡಲಾಗುವುದು. ಪ್ರಥಮ ಬಹುಮಾನ 3000, ದ್ವಿತೀಯ 2000, ತೃತೀಯ 1000 ರೂ. ನಗದು ಹಾಗೂ ಪ್ರಮಾಣಪತ್ರ, ಸಂವಿಧಾನ ಕಿರು ಪುಸ್ತಕ ನೀಡಿ ಸನ್ಮಾನಿಸಲಾಗುವುದು ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಎಂ.ವೆಂಕಟೇಶ್, ಕರಾದಸಂಸ ಜಿಲಾ ಸಂಚಾಲಕ ಎಂ.ವಿ.ಕೃಷ್ಣ, ನೆಲದನಿ ಬಳಗದ ಎಂ.ಸಿ.ಲಂಕೇಶ್, ಸಂವಿಧಾನ ಸೇನೆಯ ಎಚ್.ಎನ್.ನರಸಿಂಹಮೂರ್ತಿ, ಮಹ್ಮದ್ತಾಹೀರ್, ವೈ. ಥಾಮಸ್ ಬೆಂಜಮಿನ್ ಇದ್ದರು


