Wednesday, January 21, 2026
spot_img

ಸಂವಿಧಾನ ದಿನದಂದೇ ಮಂಡ್ಯದಲ್ಲಿ ನಟ ಕಿಶೋರ್‌ಗೆ ವಿಹಿಂಪ ಬೆದರಿಕೆ!

ನಾಗರಂಗ ನಾಟಕೋತ್ಸವದಲ್ಲಿ ನಟ ಕಿಶೋರ್‌ಗೆ ವೇದಿಕೆ ನೀಡಿರುವ ನಾಗಮಂಗಲದ ಕನ್ನಡ ಸಂಘಕ್ಕೆ 75ನೇ ಸಂವಿಧಾನ ದಿನಾಚರಣೆಯ  ಹೊತ್ತಿನಲ್ಲಿ ವಿಶ್ವ ಹಿಂದೂ ಪರಿಷತ್  ಬೆದರಿಕೆ ಒಡ್ಡಿರುವುದನ್ನು ಮಂಡ್ಯದ ಪ್ರಗತಿಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ನಾಗಮಂಗಲದಲ್ಲಿ ನಡೆಯುತ್ತಿರುವ ನಾಗರಂಗ ನಾಟಕೋತ್ಸವದಲ್ಲಿ ಅತಿಥಿಗಳು ಏನು ಮಾತನಾಡಬೇಕು? ಏನು ಮಾತನಾಡಬಾರದು ಎಂದು ಫರ್ಮಾನು ಹೊರಡಿಸಲು ವಿಶ್ವ ಹಿಂದೂ ಪರಿಷತ್‌ಗೆ ಅಧಿಕಾರ ಕೊಟ್ಟವರು ಯಾರು? ಎಂದು ಪ್ರಶ್ನಿಸಿರುವ ಪ್ರಗತಿಪರ ಸಂಘಟನೆಗಳು “ಇದು ವಿಹಿಂಪದ ಮೂರ್ಖ ನಡೆಯಾಗಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹುಂಬತನವಾಗಿದೆ. ಕೂಡಲೇ ಜಿಲ್ಲಾಡಳಿತ ನಟ ಕಿಶೋರ್‌ ಅವರಿಗೆ ಅಗತ್ಯ ಭದ್ರತೆ ಒದಗಿಸಬೇಕು” ಎಂದು ಹೇಳಿವೆ.

“ಸಂವಿಧಾನ ಸಮರ್ಪಣಾ ದಿನಾಚರಣೆಯ ಸಂದರ್ಭದಲ್ಲೇ ರಂಗಭೂಮಿ ಚಟುವಟಿಕೆಗಳಿಗೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಲು ಮುಂದಾಗಿರುವ ಕೋಮುಶಕ್ತಿಗಳನ್ನು ನಿಯಂತ್ರಿಸಬೇಕು. ನಾಟಕೋತ್ಸವಕ್ಕೆ ಕಪ್ಪುಚುಕ್ಕೆ ಬಳಿಯಲು ಯತ್ನಿಸುವವರನ್ನು ಜಿಲ್ಲಾಡಳಿತ ಮಟ್ಟಹಾಕಬೇಕು” ಎಂದು ಮಂಡ್ಯದ ಪ್ರಗತಿಪರ ಸಂಘಟನೆಗಳು ಒಕ್ಕೊರಲಿನ ಒತ್ತಾಯ ಮಾಡಿವೆ.

ನಿನ್ನೆ ವಿಶ್ವ ಹಿಂದೂ ಪರಿಷತ್‌ ಹೇಳಿದ್ದೇನು?
 ‘ಹಿಂದೂ ಧರ್ಮದ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವ ಎಡಪಂಥೀಯ ಮಾನಸಿಕತೆಯ ಚಲನಚಿತ್ರ ನಟ ಕಿಶೋರ್‌ಗೆ ಪಟ್ಟಣದ ಕನ್ನಡ ಸಂಘವು ನಾಗರಂಗ ನಾಟಕೋತ್ಸವದಲ್ಲಿ ವೇದಿಕೆ ಕಲ್ಪಿಸಿಕೊಟ್ಟಿರುವುದು ಹಿಂದೂಗಳಿಗೆ ಮಾಡುತ್ತಿರುವ ದೊಡ್ಡ ಅಪಮಾನ. ಕಿಶೋರ್ ಮಾತನಾಡುವಾಗ ನಾಗರಂಗ ನಾಟಕೋತ್ಸವ ಹಾಗೂ ಕಲೆಯ ಬಗ್ಗೆ ಮಾತ್ರ ಮಾತನಾಡುವಂತೆ ಆಯೋಜಕರು ಎಚ್ಚರ ವಹಿಸಬೇಕುʼ ಎಂದು ವಿಶ್ವ ಹಿಂದೂ ಪರಿಷತ್‌ ತಾಲ್ಲೂಕು ಕಾರ್ಯದರ್ಶಿ ಮಹೇಶ್ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ್ದರು.

ಇದೊಂದು ಅವಿವೇಕದ ಪರಮಾವಧಿ!
ʼನೂರು ದೇವರನೆಲ್ಲಾ ನೂಕಾಚೆ ದೂರʼ ಎಂದು ಹೇಳಿದ್ದ ಕುವೆಂಪು ಈಗೇನಾದರೂ ಬದುಕಿದ್ದರೆ, ಅವರಿಗೂ ಈ ಸಂಘಪರಿವಾರದ ಮಂದಿ ಹೀಗೇ ಬೆದರಿಕೆ ಒಡ್ಡುತ್ತಿತ್ತು. ʼಕಾಲ ಕಾಲಕ್ಕೆ ಹಿಂದೂ ಧರ್ಮ ತನ್ನ ತಪ್ಪುಗಳನ್ನು ತಿದ್ದಿಕೊಂಡು, ಪರಿಷ್ಕರಣೆಗೊಳ್ಳದಿದ್ದರೆ ಕೊಳಚೆಗುಂಡಿಯಂತೆ ಗಬ್ಬೆದ್ದು ನಾರುತ್ತದೆʼ ಎಂದಿದ್ದ ವಿವೇಕಾನಂದರಿಗೂ ಈ ವಿಹಿಂಪ ಹೀಗೇ ಫರ್ಮಾನು ಹೊರಡಿಸುತ್ತಿತ್ತು. ಸುಗಮವಾಗಿ ನಡೆಯುತ್ತಿರುವ ನಾಗರಂಗ ನಾಟಕೋತ್ಸವದಲ್ಲಿ ಹೊಸ ವಿವಾದ ಸೃಷ್ಟಿಸುತ್ತಿರುವ ಕೋಮುಕ್ರಿಮಿಗಳಿಗೆ ಜಿಲ್ಲಾಡಳಿತ ಈಗಲೇ ಕಿವಿ ಹಿಂಡದಿದ್ದರೆ ನಾಗಮಂಗಲದ ನೆಮ್ಮದಿ ಮತ್ತೆ ಕೆಡಲಿದೆʼ ಎಂದು ಪ್ರಗತಿಪರ ಸಂಘಟನೆಗಳು ಹೇಳಿವೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!